ಹೆಬ್ರಿಯಲ್ಲಿಲ್ಲ ಸ್ಕ್ಯಾನಿಂಗ್‌ ಸೆಂಟರ್‌

ಹೆಬ್ರಿ : ಹೆಬ್ರಿ ತಾಲೂಕು ಆಗಿ ಹೆಬ್ರಿ ಪೇಟೆಯಲ್ಲೇ ತಾಲೂಕು ಕೇಂದ್ರವಾಗಿದ್ದರೂ ಇಲ್ಲಿ ಸುಸಜ್ಜಿತವಾದ ಸ್ಕ್ಯಾನಿಂಗ್‌ ಸೆಂಟರ್‌ ಇಲ್ಲದಿರುವುದರಿಂದ ಜನರಿಗೆ ಬಹಳ ಸಮಸ್ಯೆಯಾಗುತ್ತಿದೆ. ಹೆಬ್ರಿಯಲ್ಲಿ 10ಕ್ಕೂ ಅಧಿಕ ಖಾಸಗಿ ಕ್ಲಿನಿಕ್‌ಗಳು, ಲ್ಯಾಬ್‌ಗಳು, ಸಮುದಾಯ ಆರೋಗ್ಯ ಕೇಂದ್ರ, ಒಂದು ಖಾಸಗಿ ಆಸ್ಪತ್ರೆ ಇದೆ. ವೈದ್ಯಕೀಯವಾಗಿ ಇಷ್ಟು ಸೌಲಭ್ಯ ಇದ್ದರೂ ರೋಗಿಗಳಿಗೆ ವೈದ್ಯರು ಸ್ಕ್ಯಾನಿಂಗ್‌ ಮಾಡಿಸಿಕೊಂಡು ಬರಲು ಹೇಳಿದರೆ ದೂರದ
ಕಾರ್ಕಳ, ಬ್ರಹ್ಮಾವರ, ಉಡುಪಿ ಅಥವಾ ಮಣಿಪಾಲದ ಆಸ್ಪತ್ರೆಗೆ ಹೋಗಬೇಕಾಗುತ್ತದೆ.

ಹೆಬ್ರಿಯಲ್ಲಿರುವ ಹೆಬ್ರಿ, ಚಾರ, ಶಿವಪುರ, ಕುಚ್ಚೂರು, ಬೇಳಂಜೆ, ಸೋಮೇಶ್ವರ, ಸೀತಾನದಿ, ಮುದ್ರಾಡಿ ಸಬ್ ಸೆಂಟರ್‌ಗಳಿಗೆ ಬೇರೆ ಬೇರೆ ಗ್ರಾಮಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಹೆಬ್ರಿಯಲ್ಲಿ ಸ್ಕ್ಯಾನಿಂಗ್‌ ಸೆಂಟರ್‌ ಇಲ್ಲದ ಕಾರಣ ಇವರು ಇದಕ್ಕಾಗಿ ಮತ್ತೆ ಬೇರೆಡೆಗೆ ಪ್ರಯಾಣಿಸಬೇಕಾಗುತ್ತದೆ. ಹೆಬ್ರಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ವಸತಿಯಿದೆ. ಹೆಬ್ರಿಯಲ್ಲಿ ಹೆಚ್ಚಿನೆಲ್ಲ ಆರೋಗ್ಯ ಸೌಲಭ್ಯಗಳು ಇದ್ದರೂ ಸ್ಕ್ಯಾನಿಂಗ್‌ ಸೆಂಟರ್‌ ಇಲ್ಲದಿರುವುದು ಕೊರತೆಯಾಗಿ ಕಾಡುತ್ತಿದೆ. ಇದರಿಂದಾಗಿ ಸ್ಕ್ಯಾನಿಂಗ್‌ಗೆ ದೂರದ ಊರುಗಳಿಗೆ ಹೋಗಬೇಕಾಗಿರುವುದರಿಂದ ಜನರ ಹಣ ಮತ್ತು ಸಮಯ ವ್ಯರ್ಥವಾಗುತ್ತಿದೆ.

ನಿರ್ದಿಷ್ಟವಾಗಿ ಗರ್ಭೀಣಿಯರು ಸ್ಕ್ಯಾನಿಂಗ್‌ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚು ಸಮಸ್ಯೆ ಅನುಭವಿಸುತ್ತಾರೆ. ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಉಡುಪಿ, ಕಾರ್ಕಳ ಅಥವಾ ಮಣಿಪಾಲದ ಆಸ್ಪತ್ರೆಗೆ ತೆರಳುವಾಗ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಹೆಬ್ರಿಗೆ ಒಂದು ಸುಸಜ್ಜಿತ ಸ್ಕ್ಯಾನಿಂಗ್‌ ಸೆಂಟರ್‌ ತುರ್ತಾಗಿ ಆಗಬೇಕಾಗಿದೆ. ಡಯಾಲಿಸಿಸ್‌ ಮತ್ತಿತರ ಸೌಲಭ್ಯಗಳುಳ್ಳ ಆಸ್ಪತ್ರೆ ಬೆಳೆಯುತ್ತಿರುವ ಹೆಬ್ರಿ ಪೇಟೆಗೆ ಅಗತ್ಯವಿದ್ದು, ಜನಪ್ರತಿನಿಧಿಗಳು ಜನರ ಈ ಬೇಡಿಕೆಯತ್ತ ಗಮನ ಹರಿಸಬೇಕಾಗಿದೆ.

ವರದಿ : ರಕ್ಷಿತ್ ಕುಮಾರ ಹೆಬ್ರಿ
ಸದಸ್ಯರು ಕರ್ನಾಟಕ ರಾಜ್ಯ ಕಾರ್ಮಿಕ್ ಪರಿಷತ್





























































































































error: Content is protected !!
Scroll to Top