ಆಸ್ಟ್ರೇಲಿಯ ಎದುರು ಭಾರತ ಅಮೋಘ ಗೆಲುವು

ಸೈಂಟ್‌ ಲೂಸಿಯಾ: ಇಲ್ಲಿನ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಗೆಲುವು ದಾಖಲಿಸಿದೆ. ಇದರೊಂದಿಗೆ ಅಜೇಯ ತಂಡವಾಗಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಇಷ್ಟು ಮಾತ್ರವಲ್ಲದೆ, ಏಕದಿನ ವಿಶ್ವಕಪ್​ನ ಫೈನಲ್​ ಸೋಲಿಗೆ ಟೀಂ ಇಂಡಿಯಾ ಸರಿಯಾಗಿ ಸೇಡು ತೀರಿಸಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾ ನಿರಾಶಾದಾಯಕ ಆರಂಭ ಕಂಡಿತು. 6 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು. ನಂತರ ತಂಡದ ಇನ್ನಿಂಗ್ಸ್ ಕೈಗೆತ್ತಿಕೊಂಡ ನಾಯಕ ರೋಹಿತ್ ಅಬ್ಬರದ ಬ್ಯಾಟಿಂಗ್ ಆರಂಭಿಸಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನ ರೋಹಿತ್ ವೃತ್ತಿಜೀವನದಲ್ಲಿ ಅತ್ಯಂತ ವೇಗದ ಅರ್ಧಶತಕ ಎನಿಸಿಕೊಂಡಿತು. ಇನ್ನೊಂದು ಬದಿಯಲ್ಲಿ ರಿಷಬ್ ಪಂತ್ ಕೂಡ ಅವಕಾಶ ಸಿಕ್ಕಾಗ ಬಿಗ್ ಶಾಟ್ ಆಡಿ ಇನ್ನಿಂಗ್ಸ್​ನ ವೇಗ ಹೆಚ್ಚಿಸಿದರು. ಹೀಗಾಗಿ ಈ ಜೋಡಿ ಆಸ್ಟ್ರೇಲಿಯಕ್ಕೆ ತಲೆನೋವಾಗಿ ಪರಿಣಮಿಸಿತು. 15 ರನ್ ಬಾರಿಸಿದ್ದ ಪಂತ್, ಮಾರ್ಕಸ್ ಸ್ಟೊಯಿನಿಸ್​ಗೆ ಬಲಿಯಾದರು. ಇಷ್ಟರೊಳಗೆ ರೋಹಿತ್ ಮತ್ತು ಪಂತ್ ನಡುವೆ ಎರಡನೇ ವಿಕೆಟ್‌ಗೆ 87 ರನ್‌ಗಳ ಜೊತೆಯಾಟ ಕಂಡು ಬಂದಿತ್ತು.

ಪಂತ್ ವಿಕೆಟ್ ಬಳಿಕ ಅಖಾಡಕ್ಕಿಳಿದ ಸೂರ್ಯಕುಮಾರ್ ಯಾದವ್, ರೋಹಿತ್ ಜೊತೆಗೂಡಿ ವೇಗವಾಗಿ ರನ್ ಕಲೆಹಾಕಿದರು. ಈ ವೇಳೆ ರೋಹಿತ್‌ಗೆ ವಿಶ್ವಕಪ್‌ನಲ್ಲಿ ವೇಗದ ಶತಕ ಬಾರಿಸುವ ಅವಕಾಶವಿತ್ತು. ಆದರೆ ರೋಹಿತ್ ನರ್ವಸ್ ನೈಂಟಿಗೆ ಬಲಿಯಾದರು. ರೋಹಿತ್ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 92 ರನ್ ಗಳಿಸಿ ಮಿಚೆಲ್ ಸ್ಟಾರ್ಕ್​ ಎಸೆತದಲ್ಲಿ ಔಟಾದರು. ರೋಹಿತ್ ನಂತರ ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಸಣ್ಣ ಆದರೆ ಪ್ರಮುಖ ನಾಕ್‌ಗಳನ್ನು ಆಡಿದರು. ಇದರಿಂದಾಗಿ ಟೀಂ ಇಂಡಿಯಾ 200ರ ಗಡಿ ತಲುಪಲು ಸಾಧ್ಯವಾಯಿತು.
ಸೂರ್ಯಕುಮಾರ್ ಯಾದವ್ 31 ರನ್ ಮತ್ತು ಶಿವಂ ದುಬೆ 28 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ತಲಾ 27 ರನ್ ಮತ್ತು 9 ರನ್ ಬಾರಿಸಿ ಅಜೇಯರಾಗಿ ಮರಳಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಲಾ 2 ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್ 1 ವಿಕೆಟ್ ಪಡೆದರು.

206 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಅನುಭವಿ ಡೇವಿಡ್ ವಾರ್ನರ್ 6 ರನ್ ಬಾರಿಸಿ ಔಟಾದರು. ಆ ಬಳಿಕ ಜೊತೆಯಾದ ಟ್ರಾವಿಸ್ ಹೆಡ್ ಹಾಗೂ ನಾಯಕ ಮಿಚೆಲ್ ಮಾರ್ಷ್ ಎರಡನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟ ಮಾಡಿದರು. ಹೀಗಾಗಿ ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡ ಈ ಪಂದ್ಯವನ್ನು ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ ಭಾರತೀಯ ಬೌಲರ್‌ಗಳು ಬಲವಾದ ಪುನರಾಗಮನವನ್ನು ಮಾಡಿ, ಗೆಲುವಿನ ಅಭಿಯಾನವನ್ನು ಮುಂದುವರಿಸಿದರು. ಭಾರತದ ಪರ ವೇಗಿ ಆರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದರೆ, ಕುಲದೀಪ್ ಯಾದವ್ ಎರಡು ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 43 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 76 ರನ್ ಗಳಿಸಿದರೆ, ಎರಡೆರಡು ಜೀವದಾನಗಳ ಲಾಭ ಪಡೆದ ಮಿಚೆಲ್ ಮಾರ್ಷ್​ 28 ಎಸೆತಗಳಲ್ಲಿ 37 ರನ್​ ಬಾರಿಸಿ ಔಟಾದರು. ಗ್ಲೆನ್ ಮ್ಯಾಕ್ಸ್​ವೆಲ್ ಇನ್ನಿಂಗ್ಸ್ 20 ರನ್​ಗಳಿಗೆ ಅಂತ್ಯಗೊಂಡರೆ, ಆ ಬಳಿಕ ಬಂದ ಯಾವೊಬ್ಬ ಬ್ಯಾಟರ್​ನಿಂದಲೂ ಗಮನಾರ್ಹ ಪ್ರದರ್ಶನ ಕಂಡುಬರಲಿಲ್ಲ. ಹೀಗಾಗಿ ಆಸೀಸ್ ತಂಡ ಭಾರತದ ಮುಂದೆ ಮಂಡಿಯೂರಬೇಕಾಯಿತು.





























































































































error: Content is protected !!
Scroll to Top