ಮಳೆಗಾಲದಲ್ಲಿ ಈ ನಿಯಮಗಳನ್ನು ಪಾಲಿಸಿ

ಋತು ಬದಲಾದಂತೆ ಹೇಗೆ ವಾತಾವರಣ ಬದಲಾಗುತ್ತದೆಯೊ ಅದೇ ರೀತಿ ದೇಹದೊಳಗಿನ ವಾತಾವರಣ ಕೂಡ ಬದಲಾಗುತ್ತದೆ. ಆದ್ದರಿಂದ ಋತುಗಳಿಗೆ ಹೊಂದಿಕೊಂಡು ಹೋಗುವ ಆಹಾರ ವಿಹಾರಗಳ ಬಗ್ಗೆ ಆಯುರ್ವೇದದಲ್ಲಿ ಹೇಳಿದೆ. ಇದಕ್ಕೆ ಋತುಚರ್ಯ ಎಂದು ಕರೆಯುತ್ತಾರೆ. ಈಗ ವರ್ಷಋತು ನಡೆಯುತ್ತಿದೆ ಇದರ ಬಗ್ಗೆ ತಿಳಿದುಕೊಳ್ಳೋಣ.
ವರ್ಷ ಋತುವಿನಲ್ಲಿ ವಾತ ಹಾಗೂ ಕಫ ದೋಷವು ಉಲ್ಬಣಗೊಳ್ಳುವುದರಿಂದ ವಾತ ಹಾಗೂ ಕಫ ಹರ ಆಹಾರ ಹಾಗೂ ಜೀವನ ಶೈಲಿಯನ್ನು ಪಾಲಿಸಬೇಕು.

ಆಹಾರ ಹೀಗಿರಲಿ
ಮಳೆಗಾಲದಲ್ಲಿ ನಮ್ಮ ಜೀರ್ಣಶಕ್ತಿಯು ಸಾಧಾರಣವಿರುವುದರಿಂದ ಲಘು ಆಹಾರವನ್ನು ಸೇವಿಸಬೇಕು. ಬಿಸಿ ಹಾಗೂ ಶುಚಿಯಾದ ಆಹಾರವನ್ನು ಸೇವಿಸಿ. ಅಡುಗೆಯಲ್ಲಿ ಶುಂಠಿ, ಜೀರಿಗೆ, ಕೊತ್ತಂಬರಿ, ಕಾಳು ಮೆಣಸು, ಲವಂಗ, ದಾಲ್ಚಿನ್ನಿ, ಬೆಳ್ಳುಳ್ಳಿ, ಅರಿಶಿಣ, ಸೈಂಧವ ಲವಣ, ಹಿಂಗನ್ನು ಬಳಸಿರಿ. ಶುದ್ಧ ತುಪ್ಪ, ಜೇನುತುಪ್ಪ, ಹಳೆಯ ಅಕ್ಕಿ, ಬೇಳೆ, ಕಾಳು, ಮಜ್ಜಿಗೆ ಒಳ್ಳೆಯದು. ಬಿಸಿ ನೀರನ್ನು ಸೇವಿಸಿ. ಮಳೆಯ ನೀರು ಒಳ್ಳೆಯದು ಇದನ್ನು ದಿವ್ಯೋದಕವೆಂದು ಕರೆಯುತ್ತಾರೆ. ತರಕಾರಿಗಳ ಸೂಪು, ಬೇಳೆಯ ಸೂಪ್ ಮಾಡಿ ಕುಡಿಯಿರಿ.

ಮಳೆಗಾಲದಲ್ಲಿ ಶೀತ, ಕೆಮ್ಮು ಕಾಡುವುದರಿಂದ ಕಷಾಯ ಮಾಡಿ ಕುಡಿಯಿರಿ. ಕಷಾಯ ಮಾಡುವ ವಿಧಾನ. ಒಂದು ಗ್ಲಾಸ್ ನೀರಿಗೆ ಅರ್ಧ ಚಮಚ ಅರಿಶಿನ, ಅರ್ಧ ಚಮಚ ಕಾಳು ಮೆಣಸಿನ ಹುಡಿ, ಸ್ವಲ್ಪ ಬೆಲ್ಲ, ನಾಲ್ಕು ತುಳಸಿಯ ಎಲೆ ಹಾಕಿ ಅರ್ಥ ಬರುವವರೆಗೆ ಕುದಿಸಿ ಸೋಸಿ ಬೇಕಾದರೆ ಹಾಲನ್ನು ಬೆರೆಸಿ ಬಿಸಿ ಬಿಸಿ ಕುಡಿಯಿರಿ. ಇದನ್ನು ವಾರಕ್ಕೆ ಮೂರು ಸಲ ಕುಡಿಯಬಹುದು.

ಏನು ಸೇವಿಸಬಾರದು
ಹಸಿರು ಎಲೆಯ ತರಕಾರಿ, ಮೊಸರು, ಕರಿದ ಪದಾರ್ಥ, ಫ್ರಿಜ್‌ನಲ್ಲಿಟ್ಟ ಆಹಾರ, ಕೋಲ್ಡ್ ಡ್ರಿಂಕ್ಸ್, ಐಸ್ಕ್ರೀಂ ಸೇವಿಸಬೇಡಿ.

ಜೀವನಶೈಲಿ ಹೀಗಿರಲಿ
ಹಗಲಿನಲ್ಲಿ ನಿದ್ದೆ ಮಾಡಬೇಡಿ. ಸುತ್ತ ಮುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳಿ. ಮನೆಯ ಹೊರಗಡೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ಕರ್ಪೂರ, ಲವಂಗದ ಧೂಪವನ್ನು ಹಚ್ಚಿ. ಬಟ್ಟೆ ಒದ್ದೆಯಾದರೆ ತಕ್ಷಣ ಅದನ್ನು ಬದಲಿಸಿ. ಫಂಗಲ್ ಇನ್ಫೆಕ್ಷನ್ ಆಗುವ ಸಂಭವವಿರುತ್ತದೆ. ಚರ್ಮದ ರೋಗವನ್ನು ತಡೆಯಲು ಸ್ನಾನದ ನೀರಿನಲ್ಲಿ ಏಳೆಂಟು ಕಹಿ ಬೇವಿನ ಎಲೆಯನ್ನು ಹಾಕಿ ಅಥವಾ ಕಹಿಬೇವಿನ ಎಣ್ಣೆಯನ್ನು ಹಾಕಿ ಸ್ನಾನ ಮಾಡಿರಿ. ಮಳೆಗಾಲದಲ್ಲಿ ಅಧಿಕ ದಣಿವಾಗುವ ಕೆಲಸವನ್ನು ಮಾಡಬೇಡಿ. ಪಂಚಕರ್ಮದಲ್ಲಿ ಬಸ್ತಿ ಕರ್ಮ ಮಳೆಗಾಲದಲ್ಲಿ ಮಾಡಲಾಗುವುದು. ಇದು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.





















































































































































error: Content is protected !!
Scroll to Top