ಯಾವುದೇ ಆಹಾರ ಸೇವಿಸುವ ಮುನ್ನ ನಾವು ಸೇವಿಸುವ ಆಹಾರದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಆಯುರ್ವೇದದಲ್ಲಿ ಪ್ರತಿ ಆಹಾರ ದ್ರವ್ಯಗಳಿಗೆ ತನ್ನದೇ ಆದ ರಸ (ರುಚಿ), ವೀರ್ಯ (ಶೀತ ಅಥವಾ ಉಷ್ಣ) ಹಾಗೂ ವಿಪಾಕ (ಜೀರ್ಣ ಆದ ಮೇಲೆ ಪರಿಣಾಮ)ದ ಬಗ್ಗೆ ವಿವರಿಸಿದ್ದಾರೆ. ಕೆಲವು ದ್ರವ್ಯಗಳಿಗೆ ಪ್ರಭಾವ (ತಿಳಿಯದೆ ಇರುವ) ಗುಣಗಳು ಇರುತ್ತದೆ.
ಅಸಾತ್ಮ್ಯ ಆಹಾರ ನಮ್ಮ ಜೀರ್ಣಕ್ರಿಯೆಗೆ ಬಾಧೆ ಉಂಟು ಮಾಡುತ್ತದೆ. ನಾವು ಸೇವಿಸುವ ಆಹಾರ ಆರೋಗ್ಯಕರವಾಗಿರಬಹುದು ಆದರೆ ಕೆಲವೊಮ್ಮೆ ಆಹಾರಗಳು ಒಟ್ಟಿಗೆ ಸೇವಿಸಿದಾಗ ವಿಪರೀತ ಪರಿಣಾಮ ಬೀರುತ್ತದೆ. ತಕ್ಷಣವಲ್ಲದಿದ್ದರೂ ಈ ರೀತಿಯ ಅಭ್ಯಾಸ ಮುಂದುವರಿದರೆ ಆರೋಗ್ಯ ಕುಂದುವುದು ನಿಶ್ಚಿತ. ಇದನ್ನು ವಿರುದ್ಧ ಆಹಾರವೆಂದು ಹೆಸರಿಸಲಾಗಿದೆ.
ವಿರುದ್ಧ ಆಹಾರದ ಪ್ರಕಾರಗಳ ಬಗ್ಗೆ ತಿಳಿದುಕೊಳ್ಳೋಣ:
ದೇಶದ ವಿರುದ್ಧ – ನಾವು ವಾಸಿಸುವ ಸ್ಥಳದಲ್ಲಿ ಬೆಳೆಸಲಾಗುವಂತಹ ಆಹಾರ ಧಾನ್ಯಗಳು ಹಣ್ಣುಗಳು ತರಕಾರಿಗಳು ನಮ್ಮ ದೇಹಕ್ಕೆ ಒಳ್ಳೆಯದು. ಹವಾಮಾನಕ್ಕೆ ತಕ್ಕಂತೆ ಆಹಾರ ಸೇವಿಸುವುದು ಕೂಡ ಮುಖ್ಯ. ಇಲ್ಲದಿದ್ದರೆ ಅದು ದೇಶ ವಿರುದ್ಧವಾಗುತ್ತದೆ. ಉದಾಹರಣೆಗೆ ನಾವು ತಂಪು ಹವಾಮಾನ ಇರುವ ಪ್ರದೇಶದಲ್ಲಿ ವಾಸಿಸುವಾಗ ತಂಪು ಆಹಾರ ಸೇವನೆ ದೇಶ ವಿರುದ್ಧವಾಗುತ್ತದೆ .

ಕಾಲ ವಿರುದ್ಧ- ಋತುಗಳ ಅನುಸಾರ ಆಹಾರವನ್ನು ಸೇವಿಸದೇ ಇರುವುದು ಕಾಲ ವಿರುದ್ಧವಾಗುತ್ತದೆ. ಉದಾಹರಣೆಗೆ ಬೇಸಿಗೆಯಲ್ಲಿ ಉಷ್ಣ ಆಹಾರ ಸೇವನೆ.
ಅಗ್ನಿ ವಿರುದ್ಧ– ನಮ್ಮ ಜಠರಾಗ್ನಿಯ ಪ್ರಕಾರ ಆಹಾರವನ್ನು ಸೇವಿಸದೇ ಇರುವುದು ಅಗ್ನಿ ವಿರುದ್ಧವಾಗುತ್ತದೆ. ಉದಾಹರಣೆಗೆ ವಾತಪ್ರಕೃತಿಯ ಮನುಷ್ಯರ ಪಾಚಕಾಗ್ನಿ ವಿಷಮವಾಗಿರುತ್ತದೆ. ಅಂದರೆ ಕೆಲವೊಮ್ಮೆ ಜೀರ್ಣವಾಗುತ್ತದೆ ಕೆಲವೊಮ್ಮೆ ಜೀರ್ಣವಾಗುವುದಿಲ್ಲ. ಪಿತ್ತ ಪ್ರಕೃತಿಯ ವ್ಯಕ್ತಿಯ ಜಠರಾಗ್ನಿ ತೀಕ್ಷ್ಣವಾಗಿರುತ್ತದೆ. ಅಂಥವರಿಗೆ ಆಹಾರ ಜೀರ್ಣವಾಗುವುದು ಬೇಗ. ಆದ್ದರಿಂದ ಪಿತ್ತ ಪ್ರಕೃತಿಯ ಮನುಷ್ಯರು ಉಪವಾಸ ಮಾಡುವುದು ಉಚಿತವಲ್ಲ. ಕಫ ಪ್ರಕೃತಿಯ ಮನುಷ್ಯನಿಗೆ ಮಂದಾಗ್ನಿ ವಿರುತ್ತದೆ. ಆದ್ದರಿಂದ ಗುರು ಆಹಾರ ಸೇವನೆ ಕಫಪ್ರಕೃತಿಯವರಿಗೆ ಒಳ್ಳೆಯದಲ್ಲ.
ಮಾತ್ರ ವಿರುದ್ಧ – ಮಾತ್ರ ಎಂದರೆ ಪ್ರಮಾಣ. ಉದಾಹರಣೆಗೆ ಜೇನುತುಪ್ಪ ಹಾಗೂ ತುಪ್ಪವನ್ನು ಸಮಪ್ರಮಾಣದಲ್ಲಿ ಸೇವಿಸುವುದು ಮಾತ್ರ ವಿರುದ್ಧ. ತುಪ್ಪ ಹಾಗೂ ಜೇನುತುಪ್ಪವನ್ನು ಅಸಮ ಪ್ರಮಾಣದಲ್ಲಿ ಸೇವಿಸಬಹುದು
ಸಾತ್ಮ್ಯ ವಿರುದ್ಧ- ನಮ್ಮ ದೇಹ ಪ್ರಕೃತಿಯ ಅನುಸಾರ ಆಹಾರ ಸೇವಿಸಬೇಕು ಇಲ್ಲದಿದ್ದರೆ ಅದು ಸಾತ್ಮ್ಯ ವಿರುದ್ಧವಾಗುತ್ತದೆ. ಕೆಲವೊಂದು ಆಹಾರ ನಮ್ಮ ದೇಹಕ್ಕೆ ಸಾತ್ಮ್ಯವಿರುತ್ತದೆ ಅದನ್ನು ನಾವು ಉಪಯೋಗಿಸಬೇಕು. ಉದಾಹರಣೆಗೆ ಕಫಪ್ರಕೃತಿಯ ವ್ಯಕ್ತಿಗೆ ಖಾರ ಆಹಾರ ಒಳ್ಳೆಯದು ಆದರೆ ಸಿಹಿ ಆಹಾರ ಕಫವನ್ನು ವೃದ್ಧಿಸುತ್ತದೆ ಅದು ಕಫಪ್ರಕೃತಿಯ ವ್ಯಕ್ತಿಗೆ ಸಾತ್ಮ್ಯವಲ್ಲ.
ದೋಷ ವಿರುದ್ಧ– ದೋಷಗಳ ಅನುಸಾರ ಆಹಾರ ಸೇವಿಸದೇ ಇರುವುದು ದೋಷ ವಿರುದ್ಧವಾಗುತ್ತದೆ. ಉದಾಹರಣೆಗೆ ವಾತಪ್ರಕೃತಿಯ ಮನುಷ್ಯನಿಗೆ ರೂಕ್ಷ ಹಾಗೂ ಶೀತ ಆಹಾರ ಒಳ್ಳೆಯದಲ್ಲ. ಅದು ವಾತ ದೋಷವನ್ನು ಹೆಚ್ಚಿಸುತ್ತದೆ ಅಂಥವರಿಗೆ ಸ್ನಿಗ್ಧ ಹಾಗೂ ಉಷ್ಣ ಆಹಾರ ಸೇವನೆ ಒಳ್ಳೆಯದು.
ಸಂಸ್ಕಾರ ವಿರುದ್ಧ – ಆಯುರ್ವೇದದಲ್ಲಿ ಅಡುಗೆ ಮಾಡುವ ವಿಧಾನವನ್ನು ಸಂಸ್ಕಾರವೆಂದು ಹೇಳುತ್ತಾರೆ. ಆಹಾರ ಮಾಡುವ ವಿಧಾನ ನಮ್ಮ ದೇಹಕ್ಕೆ ಅನೂಕೂಲವಿಲ್ಲದಿದ್ದರೆ ಅದನ್ನು ಸಂಸ್ಕಾರ ವಿರುದ್ಧ ಎಂದು ಹೇಳುತ್ತಾರೆ. ಉದಾಹರಣೆಗೆ ಮೊಸರನ್ನುಬಿಸಿ ಮಾಡುವುದು ಅಥವಾ ಜೇನುತುಪ್ಪವನ್ನು ಬಿಸಿ ಮಾಡುವುದು ಉಚಿತವಲ್ಲ. ಅದು ಸಂಸ್ಕಾರ ವಿರುದ್ಧವಾಗುತ್ತದೆ. ಮೊಸರನ್ನು ಬಿಸಿ ಮಾಡಬಾರದು ಹಾಗೆಯೇ ಜೇನು ತುಪ್ಪವನ್ನು ಬಿಸಿ ಮಾಡದೆ ಸೇವಿಸಬೇಕು.
ವೀರ್ಯ ವಿರುದ್ಧ- ಯಾವುದೇ ಪದಾರ್ಥವಿರಲಿ ಅದರ ಸ್ವಭಾವ ಶೀತವೀರ್ಯ ಅಥವಾ ಉಷ್ಣವೀರ್ಯವಿರುತ್ತದೆ. ಸಾಮಾನ್ಯ ಭಾಷೆಯಲ್ಲಿ ಶೀತ ಅಥವಾ ಉಷ್ಣ ಪದಾರ್ಥವೆನ್ನುತ್ತೇವೆ. ನಾವು ಉಷ್ಣವೀರ್ಯ ಹಾಗೂ ಶೀತವೀರ್ಯ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು. ಅದು ವೀರ್ಯ ವಿರುದ್ಧವಾಗುತ್ತದೆ. ಉದಾಹರಣೆಗೆ ಮೀನು ಹಾಗೂ ಹಾಲು ಒಟ್ಟಿಗೆ ಸೇವಿಸಬಾರದು. ಮೀನು ಉಷ್ಣ ಸ್ವಭಾವಿರುತ್ತದೆ ಹಾಗೂ ಹಾಲು ಶೀತ ಸ್ವಭಾವಿರುತ್ತದೆ. ಆದುದರಿಂದ ಅದನ್ನು ಒಟ್ಟಿಗೆ ಸೇವಿಸಬಾರದು.
ಕೋಷ್ಟ ವಿರುದ್ಧ- ಆಯುರ್ವೇದದ ಪ್ರಕಾರ ದೇಹ ಪ್ರಕೃತಿಗೆ ಅನುಸಾರ ಕ್ರೂರ ಕೋಷ್ಟ, ಮಧ್ಯಮ ಕೋಷ್ಟ, ಮೃದು ಕೋಷ್ಟವೆಂದು ವಿಂಗಡಿಸಲಾಗಿದೆ. ನಮ್ಮ ದೇಹದ ಪಚನ ಕ್ರಿಯೆಯ ಕ್ಷಮತೆ ಮಲ ತ್ಯಾಗ ಮಾಡುವ ಅಭ್ಯಾಸ ಇದನ್ನೆಲ್ಲ ತಿಳಿದು ಆಹಾರ ಸೇವನೆ ಮಾಡಬೇಕು. ಇಲ್ಲದಿದ್ದರೆ ಅದು ಕೋಷ್ಟ ವಿರುದ್ಧವಾಗುತ್ತದೆ. ಉದಾಹರಣೆಗೆ ಪಿತ್ತ ಪ್ರಕೃತಿಯ ಮನುಷ್ಯರಿಗೆ ಮೃದು ಕೋಷ್ಟವಿರುತ್ತದೆ. ಅವರಿಗೆ ಅತ್ಯಧಿಕ ಹಾಗೂ ಗುರು ಆಹಾರಸೇವನೆ ಉಚಿತವಲ್ಲ.
ಅವಸ್ಥೆ ವಿರುದ್ಧ- ನಮ್ಮ ದೇಹದ ಸ್ಥಿತಿಯನ್ನು ಗಮನಿಸಿ ಆಹಾರವನ್ನು ಸೇವಿಸಬೇಕು. ಇಲ್ಲದಿದ್ದರೆ ಅದು ಅವಸ್ಥಾ ವಿರುದ್ಧವಾಗುತ್ತದೆ. ಉದಾಹರಣೆಗೆ ಅತ್ಯಧಿಕ ದೈಹಿಕ ಶ್ರಮ ಪಡುವವರು, ಅಧಿಕ ವ್ಯಾಯಾಮ ಮಾಡುವವರ ದೇಹದಲ್ಲಿ ವಾತ ವೃದ್ಧಿಯಾಗಿರುತ್ತದೆ. ಅಂಥವರು ವಾತವನ್ನು ವೃದ್ಧಿಸುವ ಆಹಾರವನ್ನು ಸೇವಿಸಿದರೆ ಅದು ಅವಸ್ಥಾ ವಿರುದ್ಧವಾಗುತ್ತದೆ. ಇನ್ನೊಂದು ಉದಾಹರಣೆ ಕಫ ಪ್ರಕೃತಿಯ ಮನುಷ್ಯರು ಅಧಿಕ ನಿದ್ದೆ ಮಾಡುವುದು, ಕೆಲಸ ಮಾಡದೇ ಇರುವುದು ಅವಸ್ಥಾ ವಿರುದ್ಧ.
ಕ್ರಮ ವಿರುದ್ಧ- ಆಯುರ್ವೇದದಲ್ಲಿ ದಿನಚರ್ಯೆ ಹಾಗು ಋತುಚರ್ಯೆಗಳಲ್ಲಿ ನಿಯಮಗಳ ವರ್ಣನೆಯಿದೆ. ಆ ನಿಯಮಗಳನ್ನು ಪಾಲಿಸದೇ ಇದ್ದರೆ ಅದು ಕ್ರಮ ವಿರುದ್ಧವಾಗುತ್ತದೆ. ಆಯುರ್ವೇದದಲ್ಲಿ ಆಹಾರ ಸೇವನೆ ಮಾಡುವಾಗ ಷಟ್ ರಸಯುಕ್ತ ಆಹಾರ ಸೇವನೆಯನ್ನು ಹೇಳಿದ್ದಾರೆ. ಊಟ ಮಾಡುವಾಗ ಸಿಹಿ ಪದಾರ್ಥವನ್ನು ಮೊದಲಿಗೆ ಹಾಗೂ ಊಟದ ಕೊನೆಗೆ ಕಷಾಯ ರಸವಿರುವ ಆಹಾರ ಸೇವನೆ ಮಾಡಬೇಕು.
ಪರಿಹಾರ ವಿರುದ್ಧ– ಬಿಸಿ ಆಹಾರ ಸೇವಿಸಿದ ತಕ್ಷಣ ತಂಪು ಆಹಾರ ಅಥವಾ ಪಾನೀಯ ಸೇವಿಸುವುದು ಪರಿಹಾರ ವಿರುದ್ಧವಾಗುತ್ತದೆ. ಹಾಗೆ ಸೇವಿಸಬಾರದು.
ಉಪಚಾರ ವಿರುದ್ಧ- ರೋಗವಿದ್ದಾಗ ಅದನ್ನು ಪರಿಗಣಿಸದೆ ಆಹಾರ ಸೇವಿಸುವುದು ಉಪಚಾರ ವಿರುದ್ಧವಾಗುತ್ತದೆ. ಉದಾಹರಣೆಗೆ ಆಮ್ಲಪಿತ್ತ ಅಥವಾ ಆ್ಯಸಿಡಿಟಿ ಇರುವವರು ಪಿತ್ತ ಆಹಾರ ಸೇವನೆ ಮಾಡುವುದು ಉಪಚಾರ ವಿರುದ್ಧವಾಗುತ್ತದೆ.
ಪಾಕ ವಿರುದ್ಧ – ಸೇವಿಸುವ ಆಹಾರ ಸರಿಯಾಗಿ ಬೆಂದಿರಬೇಕು. ಉದಾಹರಣೆಗೆ ಅಕ್ಕಿಯನ್ನು ಸರಿಯಾಗಿ ಬೇಯಿಸಬೇಕು ಅಕ್ಕಿ ಅರ್ಧ ಬೆಂದಿರಬಾರದು ಅಥವಾ ಅಧಿಕ ಬೇಯಿಸಬಾರದು.
ಸಂಯೋಗ ವಿರುದ್ಧ- ಸಂಯೋಗ ಎಂದರೆ ಎರಡು ಅಥವಾ ಅಧಿಕ ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದು. ಕೆಲವು ಸಂಯೋಗಗಳು ದೇಹಕ್ಕೆ ಹಾನಿಯುಂಟು ಮಾಡುತ್ತದೆ. ನಾವು ತಿಳಿಯದೆ ಅನೇಕ ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಸೇವಿಸುತ್ತೇವೆ. ಅದು ಒಳ್ಳೆಯದಲ್ಲ. ಉದಾಹರಣೆಗೆ ಹಾಲು ಮತ್ತು ಹಣ್ಣುಗಳು, ಹುಳಿ ಆಹಾರ ಮತ್ತು ಹಾಲು, ಹಣ್ಣಿನ ಮಿಲ್ಕ್ ಶೇಕ್‌ಗಳು, ಹಾಲು ಮತ್ತು ಬಾಳೆಹಣ್ಣು, ಮಾಂಸಾಹಾರ ಮತ್ತು ಹಾಲು, ಮೊಸರು ಮತ್ತು ಹಾಲು ಮುಂತಾದವುಗಳು ಸಂಯೋಗ ವಿರುದ್ಧ.
ಹೃದಯ ವಿರುದ್ಧ- ಮನಸ್ಸಿಲ್ಲದೆ, ದುಃಖದಲ್ಲಿ, ಚಿಂತೆಯಲ್ಲಿರುವಾಗ, ಮಾನಸಿಕ ಒತ್ತಡವಿರುವಾಗ ಆಹಾರ ಸೇವಿಸುವುದು ಒಳ್ಳೆಯದಲ್ಲ. ಇದು ಹೃದಯ ವಿರುದ್ಧವಾಗುತ್ತದೆ.
ಸಂಪದ ವಿರುದ್ಧ- ಬಲಿತ ಹಣ್ಣುಗಳನ್ನು ಮಾತ್ರ ಸೇವಿಸಬೇಕು. ಕೊಳೆತ ಹಾಗು ಅಪಕ್ವ ಹಣ್ಣುಗಳನ್ನು ಸೇವಿಸಬಾರದು .
ವಿಧಿ ವಿರುದ್ಧ- ಆಯುರ್ವೇದದಲ್ಲಿ ಆಹಾರ ಸೇವಿಸುವ ವಿಧಿಯನ್ನು ಹೇಳಲಾಗಿದೆ. ಅದನ್ನು ಅನುಸರಿಸಬೇಕು. ಯಾವಾಗ, ಹೇಗೆ, ಯಾವ ಆಹಾರ, ಎಷ್ಟು ಪ್ರಮಾಣದಲ್ಲಿ ಯಾವ ಅವಸ್ಥೆಯಲ್ಲಿ ಆಹಾರವನ್ನು ಸೇವಿಸಬೇಕೆಂದು ವಿಸ್ತಾರವಾಗಿ ಆಯುರ್ವೇದದಲ್ಲಿ ತಿಳಿಸಲಾಗಿದೆ. ಅದನ್ನು ಆಹಾರವಿಧಿ ಎಂಬ ಶೀರ್ಷಿಕೆಯ ಅಂಕಣದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ನಿಂತು ಆಹಾರ ಸೇವಿಸುವುದು, ಮಾತನಾಡಿ ಆಹಾರ ಸೇವಿಸುವುದು ಮುಂತಾದವುಗಳು ವಿಧಿ ವಿರುದ್ಧ ವಾಗುತ್ತದೆ.
ವಿರುದ್ಧ ಆಹಾರ ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳು
ಪದೇ ಪದೆ ವಿರುದ್ಧ ಆಹಾರ ಸೇವನೆಯಿಂದ ತ್ವಚೆಯ ವಿಕಾರಗಳು, ಅಂಧತ್ವ, ಕುಷ್ಟರೋಗ, ತ್ವಚೆಯ ಅಲರ್ಜಿ, ಅಜೀರ್ಣದ ಸಮಸ್ಯೆಗಳು, ಪದೇ ಪದೇ ಜ್ವರ ಬರುವುದು, ಕರುಳಿನ ರೋಗ, ಭಗಂದರ, ಜಠರ ಸಂಬಂಧಿ ರೋಗಗಳು ಸಂಭವಿಸುತ್ತದೆ.
ವಿರುದ್ಧ ಆಹಾರವನ್ನು ಹೇಗೆ ಬಿಡಿಸುವುದು
ವಿರುದ್ಧ ಆಹಾರವನ್ನು ನಾವು ಸೇವಿಸಲೇಬಾರದು. ನಾವು ಪದೇಪದೇ ವಿರುದ್ಧ ಆಹಾರವನ್ನು ಸೇವಿಸಿದಾಗ ಅದು ನಮ್ಮ ಶರೀರಕ್ಕೆ ಸಾತ್ಮ್ಯವಾಗಿಬಿಡುತ್ತದೆ ಅದನ್ನು ಒಮ್ಮೆಲೆ ಬಿಟ್ಟರೆ ದೇಹಕ್ಕೆ ಹಾನಿಯುಂಟಾಗುತ್ತದೆ. ಆದುದರಿಂದ ನಾವು ಸೇವಿಸುವ ಆಹಾರದಲ್ಲಿ ಕಾಲು ಅಂಶ ಅಪಥ್ಯ ಆಹಾರವನ್ನು ತ್ಯಜಿಸಿ ಕಾಲುಭಾಗ ಪಥ್ಯಯ ಆಹಾರವನ್ನು ಸೇವಿಸಬೇಕು. ಹೀಗೆಯೇ ಕ್ರಮೇಣ ಅರ್ಧಭಾಗ ಮುಕ್ಕಾಲು ಭಾಗ ಕೊನೆಯಲ್ಲಿ ಪೂರ್ತಿಯಾಗಿ ಅಪಥ್ಯ ಆಹಾರವನ್ನು ತ್ಯಜಿಸಿ ಪಥ್ಯ ಆಹಾರವನ್ನು ಸೇವಿಸಬೇಕು.
ವಿರುದ್ಧ ಆಹಾರದ ಚಿಕಿತ್ಸೆ
ವಿರುದ್ಧ ಆಹಾರವನ್ನು ಯಾವತ್ತೂ ಸೇವಿಸಬಾರದು. ತಿಳಿಯದೆ ಸೇವಿಸಿದರೆ ಆಯುರ್ವೆದದಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಹೇಳಲಾಗಿದೆ. ಪಂಚಕರ್ಮದಲ್ಲಿ ವಮನ ಹಾಗೂ ವಿರೇಚನ ಮಾಡುವುದರಿಂದ ಶರೀರವನ್ನು ಶುದ್ದಿ ಕರಿಸಲಾಗುವುದು.
ಯಾವುದೇ ಆಹಾರ ಸೇವಿಸುವ ಮುನ್ನ ಅದರ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಮಾತು ಸುಳ್ಳಲ್ಲ.











































































