ಸಂವಿಧಾನಿಕ ಹಕ್ಕು ಮತ್ತು ಕರ್ತವ್ಯಗಳು

ನಮ್ಮ ಭಾರತ ದೇಶದ ಸಂವಿಧಾನದ ಮೂಲಕ ಖಾತರಿಪಡಿಸಿದ ಪ್ರತಿಯೊಂದು ಮೂಲಭೂತ ಹಕ್ಕುಗಳನ್ನು ಕಾನೂನುಬದ್ಧವಾಗಿ ಚಲಾಯಿಸಲು ದೇಶದ ಪ್ರತಿಯೊಬ್ಬ ಪ್ರಜೆಯು ಸ್ವತಂತ್ರಿಕನಾಗಿರುತ್ತಾನೆ. ಹೀಗಾಗಿ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದ ಎಲ್ಲಾ ಪ್ರಜೆಗಳು ಸಮಾನ ರೀತಿಯ ಹಕ್ಕನ್ನು ಹೊಂದಿರುತ್ತಾರೆ. ಪ್ರಸ್ತುತ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕೃತಿಕ ಮತ್ತು ವಿಧೇಯ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕು ಈ ರೀತಿಯಾಗಿ ಒಟ್ಟು 6 ವಿವಿಧ ಮೂಲಭೂತ ಹಕ್ಕುಗಳನ್ನು ಭಾರತೀಯ ಪ್ರಜೆಗಳು ಹೊಂದಿರುತ್ತಾರೆ. ಈ ಮೇಲ್ಕಾಣಿಸಿದ ಮೂಲಭೂತ ಹಕ್ಕುಗಳಿಗೆ ರಕ್ಷಣೆಯನ್ನು ನೀಡುವಲ್ಲಿ ಸರಕಾರವು ವಿಫಲವಾದಲ್ಲಿ ಭಾದಿತ ವ್ಯಕ್ತಿಯು ಭಾರತ ಸಂವಿಧಾನದ 226ನೇ ವಿಧಿಯ ಪ್ರಕಾರ ರಾಜ್ಯದ ಉಚ್ಛ ನ್ಯಾಯಾಲಯವನ್ನು ಸಂಪರ್ಕಿಸಿ ಪರಿಹಾರವನ್ನು ಪಡೆಯಲು ಅರ್ಹನಾಗಿರುತ್ತಾನೆ. ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆಯು ಸಹ ಕೆಲವು ಮೂಲಭೂತ ಕರ್ತವ್ಯಗಳನ್ನು ಪರಿಪಾಲಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಅಂದರೆ ಪ್ರತಿಯೊಬ್ಬ ಪ್ರಜೆಯು ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗಳಿಗೆ ಗೌರವವನ್ನು ನೀಡಿ ಸಂವಿಧಾನ ಮತ್ತು ಆಶೋತ್ತರಗಳಿಗೆ ಬದ್ಧನಾಗಿರಬೇಕು.

ಪ್ರತಿಯೊಬ್ಬ ಪ್ರಜೆಯು ಸ್ವಾತಂತ್ರ್ಯ ಚಳವಳಿಯ ಆದರ್ಶ ತತ್ವಗಳನ್ನು ಪಾಲನೆ ಮಾಡುವ, ದೇಶದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗಳನ್ನು ಎತ್ತಿ ಹಿಡಿಯುವ ಮತ್ತು ಅದರ ರಕ್ಷಣೆ ಮಾಡುವ, ದೇಶದ ರಕ್ಷಣೆ ಮಾಡುವ ಹಾಗೂ ತುರ್ತು ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಕರೆ ನೀಡಿದಾಗ ದೇಶಕ್ಕಾಗಿ ಸೇವೆಯನ್ನು ಒದಗಿಸುವ, ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ಅಥವಾ ವಿಭಾಗೀಯ ವಿವಿಧತೆಗಳಿಗೆ ಮೀರಿ ಭಾರತದ ಎಲ್ಲಾ ಪ್ರಜೆಗಳ ಪೈಕಿ ಸಾಮರಸ್ಯ ಮತ್ತು ಸಹೋದರತ್ವದ ಭಾವನೆಯನ್ನು ಬೆಳೆಸುವ, ಮಹಿಳೆಯರ ವ್ಯಕ್ತಿತ್ವಕ್ಕೆ ಕುಂದು ತರುವ ಯಾವುದೇ ರೂಢಿಗಳನ್ನು ತ್ಯಜಿಸುವ, ನಮ್ಮ ದೇಶದ ಸಮ್ಮಿಶ್ರ ಸಂಸ್ಕೃತಿಯ ಶ್ರೀಮಂತಿಕೆಯ ಮೌಲ್ಯವನ್ನು ಗೌರವಿಸುವ ಮತ್ತು ರಕ್ಷಣೆ ಮಾಡುವ, ಅರಣ್ಯ, ಸರೋವರ ನದಿಗಳು, ಕಾಡು ಪ್ರಾಣಿಗಳನ್ನೊಳಗೊಂಡ ಪ್ರಾಕೃತಿಕ ಪರಿಸರವನ್ನು ರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ, ವೈಜ್ಞಾನಿಕ ಇಚ್ಛೆ, ಮಾನವತೆ ಮತ್ತು ಸುಧಾರಣೆಗಳ ಅಭಿವೃದ್ಧಿ ಮಾಡುವ, ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಯನ್ನು ಮಾಡುವ ಮತ್ತು ಹಿಂಸೆಯನ್ನು ತ್ಯಜಿಸುವ, ವ್ಯಕ್ತಿಗತವಾಗಿ ಅಥವಾ ಸಾಮೂಹಿಕವಾಗಿ ಚಟುವಟಿಕೆಯ ಮೂಲಕ ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸುವ, ಅಪ್ರಾಪ್ತ ವಯಸ್ಸಿನ ಮಕ್ಕಳ ಪಾಲಕ ಅಥವಾ ಸಂರಕ್ಷಕ ಅತನ ಸಂರಕ್ಷಣೆಯಲ್ಲಿರುವ ಮಕ್ಕಳ ಶಿಕ್ಷಣಕ್ಕಾಗಿ ಸೂಕ್ತ ಅವಕಾಶಗಳನ್ನು ಒದಗಿಸುವ ವಿವಿಧ ಮೂಲಭೂತ ಕರ್ತವ್ಯಗಳನ್ನು ಪರಿಪಾಲಿಸುವ ಸಂವಿಧಾನಿಕ ಕರ್ತವ್ಯದ ಜವಾಬ್ದಾರಿಯನ್ನು ತನ್ನ ಮೂಲಭೂತ ಹಕ್ಕುಗಳೊಂದಿಗೆ ಹೊಂದಿರುತ್ತಾನೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಜವಾಬ್ದಾರಿಯು ಸಂಪೂರ್ಣವಾಗಿ ಸರಕಾರದ ಮೇಲಿರುತ್ತದೆ. ಯಾವುದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವ, ರಕ್ಷಣೆ ನೀಡುವ, ಹಕ್ಕುಗಳ ಉಲ್ಲಂಘನೆಗೆ ಒಳಗೊಂಡ ಭಾದಿತ ವ್ಯಕ್ತಿಗಳಿಗೆ ನೆರವು ನೀಡುವ ಮಹತ್ತರವಾದ ಜವಾಬ್ದಾರಿಯನ್ನು ಸರಕಾರವು ಹೊಂದಿರುತ್ತದೆ. ಈ ಉದ್ದೇಶದಿಂದ ಸರಕಾರವು ಮಾನವ ಹಕ್ಕುಗಳ ಆಯೋಗವನ್ನು ರಚಿಸಿದ್ದು, ಸರಕಾರದ ಇಲಾಖೆಯಿಂದ ಯಾವುದೇ ವ್ಯಕ್ತಿಯ ಮಾನವ ಹಕ್ಕಿನ ಉಲ್ಲಂಘನೆ ಆದ ಸಂದರ್ಭದಲ್ಲಿ ಸ್ವಪ್ರೇರಣೆಯಿಂದ ಅಥವಾ ಲಿಖಿತ ಅರ್ಜಿಯ ಆಧಾರದಲ್ಲಿ ದೂರನ್ನು ದಾಖಲಿಸಿಕೊಂಡು ಮಾನವ ಹಕ್ಕಿನ ಉಲ್ಲಂಘನೆಗೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅಪರಾಧಿಗಳಿಗೆ ಶಿಕ್ಷೆಯನ್ನು ಮತ್ತು ಭಾದಿತ ವ್ಯಕ್ತಿಗೆ ಸೂಕ್ತ ಪರಿಹಾರವನ್ನು ಕೊಡಿಸುವ ಅಧಿಕಾರವನ್ನು ಹೊಂದಿರುತ್ತದೆ.

















































error: Content is protected !!
Scroll to Top