ಕರ್ನಾಟಕ ಸಾರ್ವಜನಿಕ ಆವರಣಗಳ ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ ಅಧಿನಿಯಮ 1974

ಸಾರ್ವಜನಿಕ ಆವರಣಗಳು ಅಂದರೆ ರಾಜ್ಯ ಸರಕಾರಕ್ಕೆ ಸೇರಿದ, ಸರಕಾರವು ಸಾರ್ವಜನಿಕ ಉದ್ದೇಶಕ್ಕಾಗಿ ಹಂಚಲಾದ, ಮೀಸಲಾಗಿ ಇರಿಸಿದ, ರಾಜ್ಯ ಸರಕಾರದ ಪರವಾಗಿ ಗುತ್ತಿಗೆಯ ಮೇಲೆ ಸ್ಥಳೀಯ ಪ್ರಾಧಿಕಾರದವರು, ಸರಕಾರದ ಷೇರು ಬಂಡವಾಳವನ್ನು ಹೊಂದಿರುವ, ಸರಕಾರದ ನಿಯಂತ್ರಣದಲ್ಲಿರುವ ಕಂಪನಿಗಳು, ಯಾವುದೇ ನಿಗಮ ಅಂದರೆ ಪೌರ ನಿಗಮ, ಪಟ್ಟಣ, ನಗರ ಪುರಸಭಾ ಪರಿಷತ್ತು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸರಕಾರದ ವಿವಿಧ ಅಭಿವೃದ್ಧಿ ಮಂಡಳಿಗಳು, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಇವುಗಳಿಗೆ ಸೇರಿದ ಯಾವುದೇ ಭೂಮಿ, ಕಟ್ಟಡ ವಗೈರೆಗಳನ್ನು ಯಾರಾದರೂ ಅನಧಿಕೃತವಾಗಿ ಸ್ವಾಧೀನ ಹೊಂದಿದ್ದಲ್ಲಿ ಅಂತಹ ಸಾರ್ವಜನಿಕ ಆವರಣಗಳನ್ನು ಅನಧಿಕೃತ ಸ್ವಾಧೀನ ಹೊಂದಿರುವ ವ್ಯಕ್ತಿಯನ್ನು ಹೊರಹಾಕುವ ಬಗ್ಗೆ ಕರ್ನಾಟಕ ಸಾರ್ವಜನಿಕ ಆವರಣಗಳ ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ ಅಧಿನಿಯಮ 1974 ಎಂಬ ಕಾನೂನನ್ನು ಕರ್ನಾಟಕ ರಾಜ್ಯ ಸರಕಾರವು ಜಾರಿಗೆ ತಂದಿದ್ದು ಅದೀಗ ಊರ್ಜಿತದಲ್ಲಿರುತ್ತದೆ. ಈ ಪ್ರಕಾರ ರಾಜ್ಯ ಸರಕಾರವು ತನ್ನ ಅಧಿಸೂಚನೆ ಮೂಲಕ ವಿವಿಧ ಪ್ರಾಧಿಕಾರಗಳನ್ನು ರಚಿಸಿ ರಾಜ್ಯ ಸಿವಿಲ್ ಸೇವೆಗಳ ಬಿ-ದರ್ಜೆಯ ಅಧಿಕಾರಿಗಿಂತ ಮೇಲ್ಪಟ್ಟ ಅಧಿಕಾರಿಗಳನ್ನು, ಪ್ರಾಧಿಕಾರದ ಅಧಿಕಾರಿಗಳನ್ನಾಗಿ ನೇಮಿಸಿರುತ್ತದೆ.

ಯಾವುದೇ ವ್ಯಕ್ತಿಯು, ಯಾವುದೇ ಸಾರ್ವಜನಿಕ ಆವರಣವನ್ನು ಅನಧಿಕೃತವಾಗಿ ಅಧಿಭೋಗ ಅಂದರೆ ಸ್ವಾಧೀನತೆ ಹೊಂದಿದರೆ ಮತ್ತು ಈ ಸಂದರ್ಭದಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಸಕ್ಷಮ ಅಧಿಕಾರಿಯು ಮೇಲ್ಕಾಣಿಸಿದ ಕಾನೂನಿನ ಪ್ರಕಾರ ತನ್ನ ಅಧಿಕಾರವನ್ನು ಚಲಾಯಿಸಿ ಅನಧಿಕೃತ ಸ್ವಾಧೀನತೆ ಹೊಂದಿರುವ ವ್ಯಕ್ತಿಗೆ ಆತನ ವಿರುದ್ಧ ಯಾತಕ್ಕಾಗಿ ಕ್ರಮ ಕೈಗೊಳ್ಳಬಾರದಾಗಿ ಕಾರಣ ಕೇಳಿ ಕನಿಷ್ಟ 10 ದಿನಗಳ ಅಂತರದ ಲಿಖಿತ ನೋಟೀಸನ್ನು ಜಾರಿಗೊಳಿಸಬಹುದಾಗಿದೆ ಮತ್ತು ಸಕ್ಷಮ ಅಧಿಕಾರಿಯು ಸಂಬಂಧಪಟ್ಟ ವ್ಯಕ್ತಿಯಿಂದ ವಿವರಣೆ ಪಡೆದು ಆ ನಂತರ ನಿರ್ದಿಷ್ಟಪಡಿಸಿದ ದಿನಾಂಕದಂದು ತನಿಖೆ ನಡೆಸಿ ಸೂಕ್ತ ಆದೇಶವನ್ನು ಹೊರಡಿಸಬಹುದಾಗಿದೆ ಮತ್ತು ಅನಧಿಕೃತ ಸ್ವಾಧೀನತೆಯನ್ನು ಹೊಂದಿರುವ ವ್ಯಕ್ತಿಯಿಂದ ಸಾರ್ವಜನಿಕ ಆವರಣದ ಸ್ವಾಧೀನತೆಯನ್ನು ಬಿಡಿಸಿಕೊಂಡು ಆತನನ್ನು ಅಲ್ಲಿಂದ ಹೊರ ಹಾಕಬಹುದಾಗಿದೆ. ಈ ಸಂದರ್ಭದಲ್ಲಿ ಅನಧಿಕೃತ ಸ್ವಾಧೀನತೆ ಹೊಂದಿರುವ ವ್ಯಕ್ತಿಯು ಸಾರ್ವಜನಿಕ ನೌಕರನಾಗಿದ್ದಲ್ಲಿ ಆತನ ಸಂಬಳದಿಂದ ಬಾಡಿಗೆಯನ್ನು ನಷ್ಟದ ಮೊತ್ತವನ್ನು ವಸೂಲು ಮಾಡಬಹುದಾಗಿದೆ. ಈ ರೀತಿಯಾಗಿ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಸಕ್ಷಮ ಅಧಿಕಾರಿಯು ಅಥವಾ ಅಪೀಲು ಅಧಿಕಾರಿಯು ಮಾಡಿದ ಪ್ರತಿಯೊಂದು ಆದೇಶವು ಅಂತಿಮವಾಗಿರತಕ್ಕದ್ದು ಮತ್ತು ಅದನ್ನು ಯಾವುದೇ ಮೂಲ ದಾವೆಯಲ್ಲಿ, ಅರ್ಜಿಯಲ್ಲಿ ಪ್ರಶ್ನಿಸತಕ್ಕದಲ್ಲ ಮತ್ತು ಈ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ ಪ್ರತ್ತವಾದ ಯಾವುದೇ ಅಧಿಕಾರಕ್ಕೆ ಅನುಸಾರವಾಗಿ ಕೈಗೊಂಡ ಅಥವಾ ಕೈಗೊಳ್ಳಬೇಕಾದ ಯಾವುದೇ ಕ್ರಮ ಸಂಬಣಧದಲ್ಲಿ ಯಾವುದೇ ನ್ಯಾಯಾಲಯ ಅಥವಾ ಇತರ ಪ್ರಾಧಿಕಾರವು ಯಾವುದೇ ನಿರ್ಬಂಧಕಾಜ್ಞೆಯನ್ನು ನೀಡಲು ಅವಕಾಶ ಇರುವುದಿಲ್ಲ.









































error: Content is protected !!
Scroll to Top