ಪೊಲೀಸ್ ಠಾಣೆಗೆ ನುಗ್ಗಿ ಜೀಪ್ ಧ್ವಂಸ, ಕಲ್ಲು ತೂರಾಟ
ಬೆಂಗಳೂರು: ಮಟ್ಕಾ ದಂಧೆ ಆರೋಪಿ ಲಾಕಪ್‌ನಲ್ಲಿ ಸಾವಿಗೀಡಾದ ಬಳಿಕ ಆತನ ಬಂಧುಗಳು ಪೊಲೀಸ್ ಠಾಣೆಗೆ ಕಲ್ಲು ತೂರಿ, ಪೊಲೀಸ್ ಜೀಪನ್ನು ಮಗುಚಿ ಹಾಕಿ, ಠಾಯೊಳಗೆ ನುಗ್ಗಿ ದಾಂಧಲೆ ಎಸಗಿದ ಘಟನೆ ದಾವಣಗೆರೆಯ ಚೆನ್ನಗಿರಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.
ಮಟ್ಕಾ ಆಡಿಸುತ್ತಿದ್ದ ಆದಿಲ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆತನನ್ನು ಬಿಪಿ ಲೋ ಆದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆದಿಲ್ ಮೃತಪಟ್ಟಿದ್ದಾನೆ. ಪೊಲೀಸರ ಹಿಂಸೆಯಿಂದ ಆದಿಲ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಕುಟುಂಬಸ್ಥರು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕುಟುಂಬಸ್ಥರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪೊಲೀಸ್ ಜೀಪನ್ನು ಧ್ವಂಸಗೊಳಿಸಿ, ಪಲ್ಟಿ ಮಾಡಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಕೂಡಾ ಗಾಯಗೊಂಡಿದ್ದಾರೆ.
ಶುಕ್ರವಾರ ಪೊಲೀಸರು ಆದಿಲ್ ಎಂಬ ವ್ಯಕ್ತಿಯನ್ನು ಕರೆತಂದಿದ್ದರು. ಬಳಿಕ ಆತ ಕುಸಿದು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆತ ಪೊಲೀಸ್ ಠಾಣೆಯಲ್ಲಿ 7 ನಿಮಿಷ ಕೂಡ ಇರಲಿಲ್ಲ. ಕುಟುಂಬಸ್ಥರು ಲಾಕಪ್ ಡೆತ್ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಕೂಡ ಸಿಸಿ ಕ್ಯಾಮೆರಾ ಇದೆ. ಎಲ್ಲ ಪರಿಶೀಲನೆ ಮಾಡಲಾಗುತ್ತಿದೆ. ಪ್ರಾಮಾಣಿಕ ತನಿಖೆ ಮಾಡುತ್ತೇವೆ. ಮೃತರ ತಂದೆ ದೂರು ಕೊಟ್ಟಿದ್ದಾರೆ, ತನಿಖೆ ಆಗುತ್ತಿದೆ ಎಂದು ಪೊಲೀಸ್ ವರಿಷ್ಠರು ಹೇಳಿದ್ದಾರೆ.






























































