ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳು 11 ವರ್ಷದ ಬಳಿಕ ಸೆರೆ

ಬೆಂಗಳೂರು: ಅತ್ಯಾಚಾರ ಎಸಗಿ ಕೊಲೆ ಮಾಡಿ ಶವವನ್ನು ಎಸೆದಿದ್ದ ಪ್ರಕರಣವೊಂದರ ಆರೋಪಿಗಳನ್ನು ಪೊಲೀಸರು 11 ವರ್ಷಗಳ ಬಳಿಕ ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗಿಲ್ಲವೆಂದು ಕೈಚೆಲ್ಲಿ ಎರಡು ಬಾರಿ ಅಂತಿಮ ವರದಿ ಸಲ್ಲಿಸಿದ್ದರೂ ಕೃತ್ಯ ಸಂಭವಿಸಿ 11 ವರ್ಷಗಳ ನಂತರ ಸಿಐಡಿ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಪತ್ನಿ ವಿಜಯಾ ಪೈ ಕರ್ತವ್ಯದಿಂದ ಮನೆಗೆ ಹಿಂತಿರುಗಿಲ್ಲವೆಂದು ಬಾಲಕೃಷ್ಣ ಪೈ ಎಂಬವರು ಸಂಜಯನಗರ ಪೊಲೀಸ್ ಠಾಣೆಯಲ್ಲಿ 2013ರ ಫೆಬ್ರವರಿ 15 ರಂದು ದೂರು ದಾಖಲಿಸಿದ್ದರು. ಅಂದೇ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತುಕದಹಳ್ಳಿಯ ನೀಲಗಿರಿ ತೋಪಿನಲ್ಲಿ ವಿಜಯಾ ಮೃತ ದೇಹ ಪತ್ತೆಯಾಗಿತ್ತು.

ಈ ಪ್ರಕರಣದ ತನಿಖೆಯನ್ನು ಕೈಗೊಂಡ ಸ್ಥಳೀಯ ಪೊಲೀಸರು ಪ್ರಕರಣದಲ್ಲಿ ಪತಿ ಬಾಲಕೃಷ್ಣ ಪೈ ಕೈವಾಡ ಶಂಕಿಸಿ ಅವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಕೆಲವು ದಿನಗಳ ನಂತರ ಈ ಪ್ರಕರಣದಲ್ಲಿ ಬಾಲಕೃಷ್ಣ ಪೈ ರವರ ಕೈವಾಡವಿಲ್ಲವೆಂದು ಮತ್ತು ಪ್ರಕರಣದ ಆರೋಪಿಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಿ ಅಂತಿಮ ವರದಿ ಸಲ್ಲಿಸಿದ್ದರು.

ಆದರೆ, ಪೊಲೀಸರ ಈ ಸಿ ವರದಿ ವಿರುದ್ಧ ಬಾಲಕೃಷ್ಣ ಪೈ ಹೈಕೋರ್ಟ್‌ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ಈ ಪ್ರಕರಣದ ವಿಸ್ತೃತ ತನಿಖೆ ನಡೆಸುವಂತೆ ಹೈಕೋರ್ಟ್ ಪ್ರಕರಣವನ್ನು ಸಿಐಡಿ ಘಟಕಕ್ಕೆ ವಹಿಸಿತ್ತು. ಸಿಐಡಿ ತನಿಖಾಧಿಕಾರಿಗಳು ಈ ಮಹಿಳೆಯು ಕಾಣೆಯಾದ ದಿನದಂದು ದೊರೆತ ಕೆಲವು ಸಾಕ್ಷ್ಯಾಧಾರಗಳನ್ನು ಆಳವಾಗಿ ವಿಶ್ಲೇಷಣೆ ಮಾಡಿದಾಗ ಈ ಮಹಿಳೆಯ ಹತ್ಯೆಯಲ್ಲಿ ದೀಪಕ್ ಸಿ ಎಂಬಾತನ ಕೈವಾಡವಿರುವ ಸುಳಿವು ಲಭ್ಯವಾಯಿತು. ಈ ಸುಳಿವನ್ನು ಆಧರಿಸಿ ತನಿಖೆ ನಡೆಸಿದಾಗ ಕೊಲೆಯಾದ ಮಹಿಳೆಯನ್ನು ಮಹಾಲಕ್ಷ್ಮೀ ಲೇಔಟ್ ಶಾಖೆ ಕೆನರಾ ಬ್ಯಾಂಕ್‌ನ ಮ್ಯಾನೇಜರ್ ನರಸಿಂಹಮೂರ್ತಿ ಹಾಗೂ ಈತನ ಸಹಚರ ಹರಿಪ್ರಸಾದ್ ಎನ್ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿ, ಶವವನ್ನು ನೀಲಗಿರಿ ತೋಪಿನಲ್ಲಿ ಎಸೆದು ಹೋಗಿರುವುದು ಪತ್ತೆಯಾಗಿದೆ. ಮೃತ ಮಹಿಳೆಯ ಪತಿಯೂ ಇದೇ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಹತ್ಯೆ ಅತ್ಯಂತ ಕ್ಲಿಷ್ಟಕರ ಪ್ರಕರಣವಾಗಿತ್ತು. ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿ, ಶವವನ್ನು ಅಜ್ಞಾತ ಸ್ಥಳದಲ್ಲಿ ಬಿಸಾಡಿದ್ದ ಈ ಪ್ರಕರಣದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸ್ಥಳೀಯ ಪೊಲೀಸರು ಎರಡು ಬಾರಿ ಸಿ ಅಂತಿಮ ವರದಿಯನ್ನು ಸಲ್ಲಿಸಿದ್ದ ಪ್ರಕರಣವಾಗಿತ್ತು. ಆದರೂ ಕೃತ್ಯ ಸಂಭವಿಸಿ 11 ವರ್ಷಗಳು ಕಳೆದಿದ್ದರೂ ಸಿಐಡಿ ಘಟಕದ ತನಿಖಾಧಿಕಾರಿಗಳು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.





























































































































error: Content is protected !!
Scroll to Top