ಪೆನ್ಡ್ರೈವ್ ಹಿಂದಿನ ಕೈ ಡಿ.ಕೆ.ಶಿವಕುಮಾರ್ ಎಂದು ಆರೋಪ
ಬೆಂಗಳೂರು: ಮುಖ್ಯಮಂತ್ರಿಗಳೇ ಅಧಿಕಾರ ಶಾಶ್ವತವಲ್ಲ. ನಿಮ್ಮ ಅಧಿಕಾರ ದುರುಪಯೋಗದ ವಿರುದ್ಧ ಕಾನೂನು ಹೋರಾಟ ಮಾಡಬೇಕಾಗುತ್ತದೆ. ದೇವರಾಜೇಗೌಡ, ಶಿವರಾಮೇಗೌಡ, ಡಿ.ಕೆ ಶಿವಕುಮಾರ್ ಪೆನ್ಡ್ರೈವ್ ವಿತರಣೆ ಹಿಂದೆ ಇದ್ದಾರೆ. ಅರ್ಧ ನಿಮಿಷದಲ್ಲೆ ಎಲ್ಲವೂ ತೀರ್ಮಾನವಾಗಿದೆ. ಪೊಲೀಸರ ರಕ್ಷಣೆಯಲ್ಲಿ ಎಂಟು ಜನ ಸೇರಿದಂತೆ ಕಾರ್ತಿಕ್ ಸಹ ಇದ್ದಾನೆ? ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧನ ತೋರಿಸಿಲ್ಲ? ನ್ಯಾಯಾಲಯಕ್ಕೆ ಹಾಜರು ಪಡಿಸಿಲ್ಲ ಹೇಳಿ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧಿಗಳಿಗೆ ತೊಂದರೆ ಕೊಡುವುದು, ದ್ವೇಷದ ರಾಜಕಾರಣ ಮಾಡುವುದಷ್ಟೆ ಸರಕಾರದ ಕೆಲಸ ಆಗಿದೆ. ಸರಕಾರದ ಪ್ರಾಯೋಜಕತ್ವದಲ್ಲಿ ಮೇ 30ರಂದು ಹಾಸನದಲ್ಲಿ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತರನ್ನು ಪ್ರತಿಭಟನೆಗೆ ಕರೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನನಗೆ ಹೇಳಿದ್ದರೆ ನಾನೇ ಒಂದಿಷ್ಟು ಮಹಿಳೆಯರನ್ನು ಪ್ರತಿಭಟನೆಗೆ ಕಳುಹಿಸುತ್ತಿದ್ದೆ ಎಂದು ವಾಗ್ದಾಳಿ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಬಳಿ ಇರುವವರೆಲ್ಲ ಭಯೋತ್ಪಾದಕರೇ, ಬಹಳಷ್ಟು ಭಯೋತ್ಪಾದಕರು ಅವರ ಸುತ್ತಮುತ್ತ ಇದ್ದಾರೆ. ನನಗೆ ಡಿ.ಕೆ ಶಿವಕುಮಾರ್ ಕಂಡರೆ ಅಸೂಯೆ ಅಂತಾ ಹೇಳಿದ್ದಾರೆ. ನಾನು ಯಾಕೆ ಅವರನ್ನು ನೋಡಿ ಅಸೂಯೆ ಪಡಲಿ? ವಿಡಿಯೋ ಮಾಡಿರುವುದು ಒಂದು ಭಾಗ. ವಿಡಿಯೋವನ್ನು ಚುನಾವಣೆಗಾಗಿ ವಿತರಿಸಿದ್ದು ಅಪರಾಧ ಅಲ್ವಾ? ವಿಡಿಯೋ ಮಾಡಿದ್ದಕ್ಕಿಂತ ಅದನ್ನು ಹಂಚಿದ್ದು ಹೆಚ್ಚು ಅಪರಾಧ ಅಲ್ವಾ? ಎಂದು ಪ್ರಶ್ನಿಸಿದರು.

ಮಹಾನುಭಾವರು 1980ರಲ್ಲೇ ಸಿಡಿ ಫ್ಯಾಕ್ಟರಿ ಓಪನ್ ಮಾಡಿದ್ದರು. ಅಧಿಕಾರ ಯಾರ ಅಪ್ಪನ ಮನೆ ಆಸ್ತಿಯೂ ಅಲ್ಲ. ರಾಜಕೀಯದಲ್ಲಿ ಏಳುಬೀಳು ಅದು ಭಗವಂತನ ಇಚ್ಚೆ. ಇದರಲ್ಲಿ ಅಸೂಯೆ ಯಾಕೆ? ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮ್ಮದು. ಎಲ್ಲ ಅಧಿಕಾರವನ್ನು ನಾವು ನೋಡಿಯಾಗಿದೆ. ನಮಗೆ ಅಧಿಕಾರ ಬೇಡ ಅಂದರೂ ಬಂದಿದೆ. ನಾವು ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ನಿಮಗೆ ಇದು ಗೊತ್ತಿರಲಿ ಎಂದರು.
ಪೆನ್ ಡ್ರೈವ್ ಹಗರಣದ ಮೂಲ ವ್ಯಕ್ತಿ ಕಾರ್ತಿಕ್. ಕಾರ್ತಿಕ್ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಇಟ್ಟುಕೊಂಡು ಡಿ.ಕೆ ಸುರೇಶ್ ಬಳಿಗೆ ಮೊದಲು ಹೋಗಿದ್ದನು. ನಂತರ ವಿಡಿಯೋಗಳನ್ನು ಶಿವಕುಮಾರ್ ಕಾಪಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ನನ್ನ ಬಳಿ ಇರುವ ಪೆನ್ಡ್ರೈವ್ ನಿಮ್ಮ ಸರ್ಕಾರದ ವರ್ಗಾವಣೆಯ ಭ್ರಷ್ಟಾಚಾರದ್ದು. ಅದನ್ನು ನಾನು ಈಗ ಬಿಟ್ಟರೆ ಅದು ನನ್ನದೇ ಸೃಷ್ಟಿ ಅಂತ ನೀವು ಹೇಳುತ್ತೀರಿ. ಎಸ್ಐಟಿಗೆ ಇದುವರೆಗೂ ಕೊಟ್ಟ ಯಾವ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ ಹೇಳಿ? ನನ್ನ ಅವಧಿಯಲ್ಲಿ ಯಾವ ಪ್ರಕರಣವನ್ನು ಎಸ್ಐಟಿಗೆ ಕೊಟ್ಟಿರಲಿಲ್ಲ. ನಾನು ಪ್ರಜ್ವಲ್ ಪರ ಇಲ್ಲ, ಆರೋಪ ಸಾಬೀತಾದ್ರೆ ಶಿಕ್ಷೆ ಕೊಡಿ ಎಂದರು.
ಮೈತ್ರಿಗೂ ಪೆನ್ಡ್ರೈಗೂ ಸಂಬಂಧ ಇಲ್ಲ. ಪ್ರಜ್ವಲ್ ಕರ್ನಾಟಕದಲ್ಲಿ ಇದ್ದಾಗಲೇ ನನ್ನ ಸಂಪರ್ಕದಲ್ಲಿ ಇರಲಿಲ್ಲ ಇನ್ನೂ ಈಗ ಇರುತ್ತಾನಾ? ಪೆನ್ಡ್ರೈವ್ ಪ್ರಕರಣದಿಂದ ದೇವೇಗೌಡರ ಕುಟುಂಬಕ್ಕೆ ಸ್ವಲ್ಪ ಡ್ಯಾಮೆಜ್ ಆಗಿದೆ. ನಾನು ಈಗ ಏನಾದರೂ ವಿದೇಶಕ್ಕೆ ಹೋದರೆ ಪ್ರಜ್ವಲ್ ರಕ್ಷಣೆಗೆ ಹೋಗಿದ್ದಾರೆ ಅಂತ ಇವರು ಸುದ್ದಿ ಹಬ್ಬಿಸಿ ಬಿಡುತ್ತಾರೆ. ಯಾವ ಕರ್ಮ ಗ್ರಹಚಾರ ನಮಗೆ. ಪ್ರಜ್ವಲ್ ವಿದೇಶಕ್ಕೆ ಹೋಗುವುದು ಗೊತ್ತಾಗಿದ್ದರೆ ನಾನು ಅವತ್ತೆ ಅವನನ್ನು ತಡೆಯುತ್ತಿದ್ದೆ ಎಂದಿದ್ದಾರೆ.






























































