ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ನಾಲ್ಕು ತಿಂಗಳಲ್ಲಿ ಮುಗಿಸಲು ಹೈಕೋರ್ಟ್‌ ಆದೇಶ

ಕಾರ್ಕಳ: ಬೈಲೂರಿನ ಉಮಿಕ್ಕಲ್‌ ಬೆಟ್ಟದ ಪರಶುರಾಮನ ಥೀಮ್‌ ಪಾರ್ಕ್‌ ವಿಚಾರ ಮುನ್ನೆಲೆಗೆ ಬಂದಿದೆ. ಶುಕ್ರವಾರ ಬೆನ್ನುಬೆನ್ನಿಗೆ ಮೂರು ಬೆಳವಣಿಗೆಗಳು ನಡೆದಿದ್ದು, ಥೀಂ ಪಾರ್ಕ್‌ ಮತ್ತೆ ಜನರ ಕುತೂಹಲಕ್ಕೆ ಕಾರಣವಾಗಿದೆ. ಕಂಚಿನ ಮೂರ್ತಿ ಸ್ಥಾಪನೆಗೆ ಸಂಬಂಧಿಸಿ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಪೊಲೀಸ್‌ ಬಂದೋಬಸ್ತ್ ಒದಗಿಸಲು ಕೋರಿ ಕಾಮಗಾರಿ ನಿರ್ವಹಿಸುತ್ತಿರುವ ಕ್ರಿಶ್‌ ಆರ್ಟ್‌ ವರ್ಲ್ಡ್ ಸಲ್ಲಿಸಿರುವ ಮನವಿಯನ್ನು ಕಾನೂನು ರೀತಿ ಪರಿಗಣಿಸಿ ಎರಡು ವಾರಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದ್ದು, ಆ ಪ್ರಕಾರ ಮೂರ್ತಿಯ ಉಳಿದ ಭಾಗವನ್ನು ತೆರವುಗೊಳಿಸುತ್ತಿದ್ದಾಗ ಜಿಲ್ಲಾಧಿಕಾರಿಯವರು ಬಂದು ಕಾಮಗಾರಿ ನಿಲ್ಲಿಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್‌ ನಾಯಕ ಉದಯಕುಮಾರ್‌ ಶೆಟ್ಟಿ ಮುನಿಯಾಲ್‌ ಪತ್ರಿಕಾಗೋಷ್ಠಿ ನಡೆಸಿ ಮೂರ್ತಿ ನಕಲಿ ಎಂದು ಸಾಬೀತುಪಡಿಸಲು ಉಳಿದಿದ್ದ ಸಾಕ್ಷ್ಯ ನಾಶವಾಗುತ್ತಿದೆ. ಮೂರ್ತಿಯ ಕಾಮಗಾರಿಯನ್ನು ಕ್ರಿಶ್‌ ಆರ್ಟ್‌ ವರ್ಲ್ಡ್‌ನ ಕೃಷ್ಣ ನಾಯ್ಕ್‌ ಬದಲಾಗಿ ಬೇರೆಯವರು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಮೂರ್ತಿ ನಿರ್ಮಾಣದ ಕಾಮಗಾರಿ ನಿರ್ವಹಿಸುವ ಕುರಿತು ಕ್ರಿಶ್‌ ಆರ್ಟ್‌ ವರ್ಲ್ಡ್‌ನ ಮಾಲಕ ಕೃಷ್ಣ ನಾಯಕ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ನಾಲ್ಕು ತಿಂಗಳಲ್ಲಿ ಮೂರ್ತಿ ಕಾಮಗಾರಿ ಮುಗಿಸಬೇಕೆಂದು ನಿರ್ಮಿತಿ ಕೇಂದ್ರಕ್ಕೆ ಅದೇಶಿಸಿದೆ.
ಅರ್ಜಿದಾರರಾದ ಕ್ರಿಶ್‌ ಆರ್ಟ್‌ ವರ್ಲ್ಡ್ ಅವರ 2024ರ ಜ.9ರ ಮನವಿಯಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಿರ್ಮಿತಿ ಕೇಂದ್ರ ಏ.22ರಂದು ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಎರಡು ವಾರಗಳಲ್ಲಿ ಪರಿಗಣಿಸುವಂತೆ ನಿರ್ಮಿತಿ ಕೇಂದ್ರಕ್ಕೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಕಾಮಗಾರಿ ಪೂರ್ಣಗೊಳಿಸಿಕೊಡುವಂತೆ ನಿರ್ಮಿತಿ ಕೇಂದ್ರ ಕ್ರಿಶ್‌ ಆರ್ಟ್‌ ವರ್ಲ್ಡ್‌ಗೆ ಕೇಳಿಕೊಂಡಿತ್ತು. ಆದರೆ ಪರಶುರಾಮನ ಮೂರ್ತಿಯ ಸೊಂಟದಿಂದ ಕೆಳಗೆ ಎರಡು ಕಾಲುಗಳನ್ನು ತೆಗೆಯಲು ಅವಕಾಶ ನೀಡಿದ್ದಲ್ಲಿ ಹಾಗೂ ಸದ್ಯ ಮೂರ್ತಿ ಇರುವ ಸ್ಥಳದಲ್ಲಿ ಭಯದ ವಾತವಾರಣವಿರುವ ಕಾರಣ ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡಿ ಮೂರ್ತಿ ಸೊಂಟದಿಂದ ಕೆಳಗೆ ಕಾಲಿನ ಭಾಗವನ್ನು ತೆಗೆದು ಪುನಾರಚಿಸಿ ಹಸ್ತಾಂತರಿಸಲು ಸುಮಾರು 6 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಕ್ರಿಶ್‌ ಆರ್ಟ್‌ ವರ್ಲ್ಡ್ ಮನವಿ ಸಲ್ಲಿಸಿತ್ತು. ಇದನ್ನು ಪರಿಗಣಿಸದ ಕಾರಣ ಕ್ರಿಶ್‌ ಆರ್ಟ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಕಾಮಗಾರಿಯ ಒಪ್ಪಂದದಂತೆ ಮೂಲವೆಚ್ಚ 1.83 ಕೋ. ರೂ., ಜಿಎಸ್‌ಟಿ ಹಾಗೂ ಇತರ ತೆರಿಗೆಗಳನ್ನು ಸೇರಿಸಿ ಅಂತಿಮ ವೆಚ್ಚ 2.04 ಕೋ. ರೂ.ಗಳಂತೆ ಕ್ರಿಶ್‌ ಆರ್ಟ್‌ ವರ್ಲ್ಡ್ ಕಾಮಗಾರಿ ಪೂರ್ಣಗೊಳಿಸಬೇಕು. ಮೂರ್ತಿ ಹಸ್ತಾಂತರಿಸುವ ಮೊದಲು ನಿರ್ಮಿತಿ ಕೇಂದ್ರ ನಡೆಸುವ ತಾಂತ್ರಿಕ ಪರಿಶೀಲನೆಗೆ ಕ್ರಿಶ್‌ ಆರ್ಟ್‌ ವರ್ಲ್ಡ್ ಸಹಕರಿಸಿಬೇಕು. ಕೋರ್ಟ್‌ ಆದೇಶ ಹೊರಡಿಸಿದ ದಿನಾಂಕದಿಂದ ಮುಂದಿನ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಹಣ ಹಿಂದಿರುಗಿಸಬೇಕು ಎಂದು ನಿರ್ಮಿತಿ ಕೇಂದ್ರವು ಹೈಕೋರ್ಟ್‌ಗೆ ನೀಡಿರುವ ಮುಚ್ಚಳಿಕೆಯಲ್ಲಿ ಕ್ರಿಶ್‌ ಆರ್ಟ್‌ ವರ್ಲ್ಡ್‌ಗೆ ಷರತ್ತು ವಿಧಿಸಿದೆ.

ಜಿಲ್ಲಾಧಿಕಾರಿ ತಡೆ
ಹೈಕೋರ್ಟ್‌ ಆದೇಶದಂತೆ ಶುಕ್ರವಾರ ಕಾಮಗಾರಿ ನಡೆಯುತ್ತಿದ್ದಾಗ ದಿಢೀರ್‌ ಜಿಲ್ಲಾಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದು ಮಧ್ಯಾಹ್ನದ ವೇಳೆಗೆ ಕೆಲಸ ಮತ್ತೆ ಸ್ಥಗಿತಗೊಂಡಿದೆ.
ಸರಕಾರದ ಒತ್ತಡದಿಂದ ಕೋರ್ಟ್‌ ಆದೇಶ ಇದ್ದರೂ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ ಮುಖಂಡ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಬೈಲೂರಿನ ಪರಶುರಾಮನ ಮೂರ್ತಿ ಕಂಚಿನದ್ದಲ್ಲ, ನಕಲಿ ಎಂದು ಹೇಳಲು ಕೊನೆಯ ಸಾಕ್ಷಿ ಉಳಿದಿತ್ತು. ಅದನ್ನು ತೆರವುಗೊಳಿಸುವ ಹುನ್ನಾರ ನಡೆಯುತ್ತಿದ್ದು, ನಮ್ಮ ಪ್ರಬಲ ವಿರೋಧವಿದೆ ಎಂದು ಹೇಳಿದ್ದಾರೆ.
ಈಗಾಗಲೇ ಮೂರ್ತಿಯ ಅರ್ಧ ಭಾಗ ತೆರವುಗೊಳಿಸಲಾಗಿದೆ. ಮಳೆಗಾಲದಲ್ಲಿ ನೀರು ತುಂಬಿದರೆ ಮೂರ್ತಿ ಮುರಿದು ಬೀಳಬಹುದು ಎಂಬ ಕಾರಣ ನೀಡಿ ಟಾರ್ಪಾಲು ಹೊದೆಸವುದಾಗಿ ತಿಳಿಸಿದ್ದರು. ಈಗ ಹೈಕೋರ್ಟ್‌ ಆದೇಶದಂತೆ ಮೂರ್ತಿಯ ಬಾಕಿ ಭಾಗವನ್ನು ತೆರವುಗೊಳಿಸಿ ಶಿಲ್ಪಿಗೆ ಕೊಡುತ್ತಾರೆಂಬ ವಿಷಯ ತಹಶೀಲ್ದಾರ್‌ ಮೂಲಕ ತಿಳಿಯಿತು. ಇದು ಉಳಿದ ಸಾಕ್ಷ್ಯವನ್ನೂ ನಾಶ ಮಾಡುವ ಪ್ರಯತ್ನ ಎಂದು ಆರೋಪಿಸಿದರು.
ಕೆಂಪೇಗೌಡ, ಶಿವಾಜಿಯ ಮೂರ್ತಿಗಳನ್ನು ನಿರ್ಮಿಸಿದ ಹಲವು ಪ್ರತಿಭೆಗಳು ರಾಜ್ಯದಲ್ಲಿದ್ದಾರೆ. ಆದರೂ ಜಿಎಸ್‌ಟಿ ಡಿಫಾಲ್ಟರ್‌ ಆಗಿರುವ ಕೃಷ್ಣ ನಾಯ್ಕ ಅವರಿಗೆ ಯಾವುದೇ ಅರ್ಹತೆ ಇಲ್ಲದಿದ್ದರೂ ಮೂರ್ತಿ ಮಾಡಲು ನೀಡಲಾಗಿದೆ ಎಂದು ಆಪಾದಿಸಿದ ಅವರು, ಈಗ ತರಾತುರಿಯಲ್ಲಿ ಮೂರ್ತಿಯ ಉಳಿದ ಭಾಗವನ್ನು ಕೃಷ್ಣ ನಾಯಕ್‌ರಿಗೆ ನೀಡಿ ಏನು ಸಾಧಿಸುವುದಿದೆ? ಇದು ಸಾಕ್ಷ್ಯ ಅಳಿಸುವ ಹುನ್ನಾರವಲ್ಲದೇ ಮತ್ತೇನೂ ಅಲ್ಲ ಎಂದರು.
ಕೃಷ್ಣ ನಾಯಕ್‌ ಅವರಿಗೆ ಪುನಃ ಕೆಲಸ ನೀಡಬಾರದು. ನಿರ್ಮಿತಿ ಕೇಂದ್ರದವರಿಗೆ ಈ ಮೂರ್ತಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು. ಸಂಪೂರ್ಣ ತನಿಖೆಯ ಬಳಿಕವೇ ಪರಿಣಿತರಿಂದ ಥೀಂ ಪಾರ್ಕ್‌ ಕೆಲಸ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.











































error: Content is protected !!
Scroll to Top