ಅಂದು ಕತ್ತಲೆಯ ಕಾಲ. ಸುತ್ತಲಿನ ಜನರ ಮನದಲ್ಲಿ ಮೌಡ್ಯತೆಯು ಮುಸುಕಿ, ಜಾತೀಯತೆ ತಾಂಡವವಾಡುತ್ತಿದ್ದ ಸಮಯ. ಕತ್ತಲೆಯ ಕೋಣೆಗೆ ಸಣ್ಣ ಹಣತೆಯಂತೆ, ಏಳು ಬಣ್ಣಗಳ ನಡುವಿನ ಶ್ವೇತ ಬಣ್ಣದಂತೆ, ಗ್ರಹಣ ಬಡಿದ ಮನಸ್ಸುಗಳಲ್ಲಿನ ಜಾತಕದ ಸೂತಕ ಕಳೆಯಲು ಭೂಮಿಗೆ ಬಂದ ಭಾರತದ ಭಾಗ್ಯವಿಧಾತ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್.
ಬಿ.ಆರ್.ಅಂಬೇಡ್ಕರರ ಬಗ್ಗೆ ಓದುತ್ತಲೇ ಬೆಳೆದವರು ನಾವು. ಶ್ರಮ ಎಂದರೇನು? ಬದಲಾವಣೆ ಎಂದರೇನು? ಛಲ ಎಂದರೇನು? ಎಂಬುವುದಕ್ಕೆ ಉತ್ತರವೇ ಡಾ. ಬಿ. ಆರ್. ಅಂಬೇಡ್ಕರ್. ದಾರಿಯೇ ಕಾಣದ ದಿಕ್ಕಿನಲ್ಲಿ ಹೊಸ ಹೆದ್ದಾರಿ ಸೃಷ್ಟಿಸಿದ ಧೀಮಂತ ನಾಯಕ. ಸಾಮಾನ್ಯವಾಗಿ ನಾವೆಲ್ಲ ಅವಕಾಶಗಳು ಕೈ ಚೆಲ್ಲಿದಾಗ ಹತಾಶರಾಗಿ, ಬದುಕು ಮುಗಿದೇ ಹೋಯಿತೆಂದು ಕಣ್ಣೀರು ಹಾಕುತ್ತ ಕುಳಿತು ಬಿಡುತ್ತೇವೆ. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಅಂತದ್ದಲ್ಲ. ಅವರ ಜೀವನದ ಕುರಿತು ಓದಿದಾಗ ಅವರಲ್ಲಿ ಎದೆಗಾರಿಕೆ ಎಷ್ಟಿತ್ತೆಂಬುವುದು ಮನನವಾಗುತ್ತದೆ, ಜ್ಞಾನವನ್ನು ತನ್ನ ಎದೆಯೊಳಗೆ ಜೀವಂತವಾಗಿರಿಸಿದ ಮಹಾನ್ ನಾಯಕ ಅವರು. ಸಮಾನತೆಯ ಸಂಕಲ್ಪಕ್ಕೆ ಬೆಳಕು ಚೆಲ್ಲಿದವರು.
ಜೀವನ ಮತ್ತು ಶಿಕ್ಷಣ
ಎಪ್ರಿಲ್14, 1891ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬಲ್ಲಿ ರಾಮ್ಜಿ ಸಕ್ಪಾಲ್ ಮತ್ತು ಭೀಮಾಬಾಯಿಯವರ ಮಡಿಲು ತುಂಬಿದ ಕಂದ. ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲೂಕಿನ ಅಂಬೆವಾಡ ಗ್ರಾಮದವರು. ಮಹರ್ ಜಾತಿಯಲ್ಲಿ ಜನಿಸಿದ್ದರಿಂದ, ಜಾತಿಯ ಭೂತ ಜನುಮಕ್ಕೆ ಅಂಟಿ ಬಂದಂತೆ ಬಾಲ್ಯದಿಂದಲೇ ಸಾಮಾಜಿಕ ಅವಮಾನ ಎದುರಿಸುತ್ತಲೇ, ನೋವಿನಿಂದ ನೊಂದು ಬಾಲ್ಯವನ್ನು ಕಳೆದವರು. ಇಂದು ಅವರ ಜನುಮ ದಿನ.

ಅಸ್ಪೃಶ್ಯ ಕುಟುಂಬದಲ್ಲಿ ಕಷ್ಟ ಸಹಿಷ್ಣುತೆಯ ದಂಪತಿಗೆ ಭೀಮರಾವ್ ಹದಿನಾಲ್ಕನೆಯ ಮಗು. ಭೀಮರಾವ್ ಸತಾರಾದಲ್ಲಿ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿದರು. ಆ ಹೊತ್ತಿಗಾಗಲೇ ಹೆಂಡತಿಯನ್ನು ಕಳೆದುಕೊಂಡು, ಸಂಸಾರ ಬಂಡಿ ಸಾಗಲು ರಾಮ್ ಜಿ ಎರಡನೇ ಮದುವೆ ಆದಾಗ ಭೀಮರಾವ್ ಗೆ ಏನೋ ಸಂಕಟ. ಅವಳು ತನ್ನ ತಾಯಿಯ ಬಟ್ಟೆ, ಒಡವೆ ಧರಿಸಿದರೆ ಮನಸ್ಸಿನಲ್ಲಿ ನೊಂದುಕೊಳ್ಳುತ್ತಿದ್ದರು. ಆಗ ತಮ್ಮೆಲ್ಲ ಒತ್ತಡ ನೋವುಗಳ ನಡುವೆ ಅವರು ತಮ್ಮ ಭವಿಷ್ಯ ಕಂಡುಕೊಂಡುಕೊಳ್ಳ ಬಯಸಿದ್ದು ಓದಿನಲ್ಲಿ. ಆ ಓದು ಸಹ ಅವರಿಗೆ ಸುಲಭವಾಗಿ ಸಿಗಲಿಲ್ಲ. ಅವರ ಪ್ರತಿಭೆಗೆ ಜಾತಿಯ ಬೇಲಿ ಅಡ್ಡಗೋಡೆಯಾಗಿತ್ತು. ಇಂತಹ ಸಮಯದಲ್ಲಿ ಅಂಬೇಡ್ಕರರಿಗೆ ವರವಾಗಿ ನಿಂತದ್ದು ಗುರುಗಳಾದ ಫೇಂಡೆಸ್ ಅಂಬೇಡ್ಕರ್ ಎಂಬವರು. ಅಸ್ಪೃಶ್ಯತೆಯ ಭೂತ ಅವರನ್ನು ಮಾಧ್ಯಮಿಕ ಶಿಕ್ಷಣದಲ್ಲೂ ಕಾಡಿತು.

1897ರಲ್ಲಿ ಅಂಬೇಡ್ಕರ್ ಅವರ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು. ಅವರು ಎಲ್ಫಿನ್‌ಸ್ಟೋನ್ ಹೈಸ್ಕೂಲ್‌ಗೆ ಸೇರಿ ಧೈರ್ಯಗೆಡದೆ ಹತ್ತನೇ ತರಗತಿಯ ಶಿಕ್ಷಣವನ್ನು ಪೂರೈಸಿದರು. ಅಲ್ಲಿಂದ ಬದುಕಿನಲ್ಲಿ ಮತ್ತೊಂದು ತಿರುವು. ಅವರ ಜೀವನ ಸಂಗಾತಿಯಾಗಿ ರಮಾಬಾಯಿ ಅವರ ಆಗಮನ. ಅನಂತರ ಮತ್ತೆ ವಿದ್ಯಾಭ್ಯಾಸ ಆರಂಭಿಸಿದರು. ಅವರು ಬಾಂಬೆ ವಿಶ್ವವಿದ್ಯಾನಿಲಯದಿಂದ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡುವ ಮೂಲಕ ಡಾಕ್ಟರೇಟ್ ಪದವಿಗಳನ್ನು ಪಡೆದರು. 1920ರ ದಶಕದಲ್ಲಿ ಇಂತಹ ಸಾಧನೆ ಮಾಡಿದ ಕೆಲವೇ ಕೆಲವು ಭಾರತೀಯ ವಿದ್ಯಾರ್ಥಿಗಳಲ್ಲಿ ಅವರು ಒಬ್ಬರು. ಹೀಗೆ ಹಗಲು ರಾತ್ರಿ ಓದಿನಲ್ಲಿ ತಲ್ಲೀನರಾಗಿ ತಮ್ಮ ಜ್ಞಾನದ ಹಸಿವು ಇಂಗಿಸಿಕೊಳ್ಳಲು ಸತತ ಶ್ರಮಿಸಿದವರು ಅಂಬೇಡ್ಕರ್.
ಸಮಾಜ ಸುಧಾರಣಾ ಕಾರ್ಯಗಳು
ಅಸಮಾನತೆಯ ನೋವುಂಡು ಬೆಳೆದು, ಜಗದ ಜ್ಞಾನವ ಗಳಿಸಿ, ಬದುಕಿನುದ್ದಕ್ಕೂ ಹೋರಾಡಿ, ಬುದ್ಧನ ವೈಚಾರಿಕತೆಯಲ್ಲಿ ಬೆಳೆದ ಭಾರತದ ಭಾಗ್ಯವಿಧಾತ, ಜಗದ ಕಣ್ಣನು ತೆರೆಸಿದಾತ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್. ಮಹಿಳಾ ಸಶಕ್ತೀಕರಣ, ಮಕ್ಕಳ ಶಿಕ್ಷಣ, ಜಾತ್ಯತೀತ ರಾಷ್ಟ್ರದ ಕನಸು ಹೀಗೆ ಸಾವಿರ ಸಾಮಾಜಿಕ ಕನಸುಗಳನ್ನು ನನಸು ಮಾಡುವಲ್ಲಿ ಶ್ರಮಿಸಿದವರು. ಕಾರ್ಮಿಕರ ಕಾನೂನು ರೂಪಿಸಿದವರು, ಕುಡಿಯುವ ನೀರಿನ ಹಕ್ಕು ಕೊಡಿಸಿದ, ಪ್ರತಿ ಹೆಣ್ಣಿಗೂ ಗೌರವದ ಬದುಕು ನೀಡಲು ಶ್ರಮಿಸಿದ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್.

ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾನ್ ಚೇತನ. ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕ. ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞ. ಭಾರತ ಸಂವಿಧಾನ ಶಿಲ್ಪಿಯೆಂದೇ ಖ್ಯಾತರಾದ ಮಹಾನ್ ಮಾನವತಾವಾದಿ.
ಭಾರತದ ತಳ ಸಮುದಾಯಗಳ ಆತ್ಮ ಸ್ಥೈರ್ಯಕ್ಕೆ ಅಡಿಗಲ್ಲಾಗಿ ನಿಂತು ಶತಮಾನಗಳ ಶೋಷಣೆಗೆ ಸಂವಿಧಾನ ರಚನೆಯ ಮೂಲಕ ವಿದಾಯ ಹೇಳಿದ ಭಾರತದ ಸಂವಿಧಾನದ ಪಿತಾಮಹ, “ಬಾಬಾಸಾಹೇಬ್” ಎಂದೇ ಕರೆಯಲ್ಪಡುವ ಡಾ. ಭೀಮ್ ರಾವ್ ರಾಮ್‌ಜಿ ಅಂಬೇಡ್ಕರ್ ಅವರು ಮಹಾನ್ ಶಿಕ್ಷಣತಜ್ಞ, ನ್ಯಾಯಶಾಸ್ತ್ರಜ್ಞ, ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ ಮತ್ತು ಭಾರತೀಯ ಸಾಮಾಜಿಕ ರಚನೆಯನ್ನು ಸುಧಾರಿಸಲು ಪಟ್ಟುಬಿಡದೆ ಹೋರಾಡಿದ ಭಾರತದ ಶ್ರೇಷ್ಠ ರಾಜಕೀಯ ನಾಯಕರಲ್ಲಿ ಒಬ್ಬರು. ಅವರು ಸದಾ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಸಿದ್ಧರಾಗಿದ್ದ ದೂರದೃಷ್ಟಿಯ ವ್ಯಕ್ತಿ. ತಮ್ಮ ರಾಜಕೀಯ ಜೀವನದುದ್ದಕ್ಕೂ, ಸಮಾಜದ ಕಲ್ಯಾಣಕ್ಕಾಗಿ ವಿಶೇಷವಾಗಿ ಮಹಿಳೆಯರು ಮತ್ತು ದೀನದಲಿತರಿಗಾಗಿ ಕೆಲಸ ಮಾಡಿದವರು.

ದಲಿತ ಹಕ್ಕುಗಳನ್ನು ಸಾಧಿಸಲು ಹೋರಾಡಿದರು. ಮಹಾಡ್ ಸತ್ಯಾಗ್ರಹ ಚಳವಳಿಯ ನಾಯಕರಾಗಿ ದಲಿತ ಸಮುದಾಯಕ್ಕೆ ಮೂಲಭೂತ ಮಾನವ ಹಕ್ಕುಗಳನ್ನು ಪಡೆಯಲು, ದಲಿತರ ಮೇಲಿನ ಸಾಮಾಜಿಕ ತಾರತಮ್ಯವನ್ನು ಕೊನೆಗಾಣಿಸಲು ಬಯಸಿದ್ದರು. ಮಹಡ್‌ನಲ್ಲಿ ದಲಿತರಿಗೆ ಚೌಡರ್ ಟ್ಯಾಂಕ್‌ನಿಂದ ನೀರು ಬಳಸಲು ಅವಕಾಶ ನೀಡದಿರುವುದರಿಂದ ಚಳವಳಿ ಪ್ರಾರಂಭವಾಗಿ ಅಂಬೇಡ್ಕರರ ಅವಿರತ ಹೋರಾಟದಿಂದಾಗಿ ಮಹಾಡ್ ಪುರಸಭೆಯು 1927ರಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಜನರಿಗೂ ಕೆರೆಯ ನೀರನ್ನು ಬಳಸಲು ಅವಕಾಶ ಕಲ್ಪಿಸುವ ನಿರ್ಣಯವನ್ನು ಅಂಗೀಕರಿಸಿತು. ಅಸ್ಪೃಶ್ಯತೆಯ ವಿರುದ್ಧ ಹೋರಾಡಲು ಮೂಕ ನಾಯಕ, ಬಹಿಷ್ಕೃತ ಭಾರತ ಮತ್ತು ಸಮತಾ ಜನತಾ ಎಂಬ ವಾರಪತ್ರಿಕೆಗಳನ್ನು ಪ್ರಕಟಿಸಿದರು. ಜುಲೈ 1924 ರಲ್ಲಿ ಅಸ್ಪೃಶ್ಯತೆಯ ದುಷ್ಪರಿಣಾಮಗಳ ವಿರುದ್ಧ ಹೋರಾಡಲು ಬಹಿಷ್ಕೃತ ಹಿತಕಾರಿಣಿ ಸಭಾವನ್ನು ಸ್ಥಾಪಿಸಿದರು. ಆ ಮೂಲಕ ಕಿರಿಯರಿಗೆ ಮತ್ತು ಹಿರಿಯರಿಗೆ ಉಚಿತ ಶಾಲೆಯನ್ನು ಪ್ರಾರಂಭಿಸಲಾಯಿತು.
ಊಳಿಗಮಾನ್ಯ ಅಸಮಾನತೆ ಮತ್ತು ಜಾತಿ ಪದ್ಧತಿಯಂತಹ ಸಾಮಾಜಿಕ ಅನಿಷ್ಟಗಳನ್ನು ಬೇರು ಸಮೇತ ಕಿತ್ತೆಸೆದು ಸಮಾಜವನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶದಿಂದ ಹೋರಾಡಿದರು. ಜನಸಾಮಾನ್ಯರ ಶಿಕ್ಷಣದಿಂದ ಮಾತ್ರ ಸಾಮಾಜಿಕ ವಿಮೋಚನೆ ಸಾಧ್ಯ ಎಂದು ಅರಿತುಕೊಂಡು, ‘ಶಿಕ್ಷಣ ಆಂದೋಲನ ಸಂಘಟಿಸಿ’ ಎಂಬ ಘೋಷ ವಾಕ್ಯದೊಂದಿಗೆ ಸಾಮಾಜಿಕ ಸುಧಾರಣೆಗಳ ಆಂದೋಲನದ ಸೈದ್ಧಾಂತಿಕ ತಳಹದಿಯನ್ನು ಸಾಕಾರಗೊಳಿಸಿದರು.

ಹಿಂದುಳಿದವರ ಉನ್ನತೀಕರಣಕ್ಕಾಗಿ
1945ರಲ್ಲಿ ಸ್ಥಾಪಿತವಾದ “ಪೀಪಲ್ಸ್ ಎಜುಕೇಶನ್ ಸೊಸೈಟಿ”ಯ ಬೆಂಬಲದ ಅಡಿಯಲ್ಲಿ, ಅನೇಕ ಶಾಲೆಗಳು, ಕಾಲೇಜುಗಳು, ಹಾಸ್ಟೆಲ್ಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಸ್ವತಂತ್ರ ಭಾರತದಲ್ಲಿ ಹೊಸ ಸಂವಿಧಾನವನ್ನು ರಚಿಸಿದಾಗ, ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾಗಿ ಭಾರತದಲ್ಲಿ ಹಿಂದುಳಿದ ಸಮುದಾಯದ ಕಲ್ಯಾಣ ಮತ್ತು ಅಭಿವೃದ್ಧಿಯನ್ನು ಖಾತರಿಪಡಿಸಿದರು. ಇದು ಹಿಂದುಳಿದ ಸಮುದಾಯಗಳಿಗೆ ಉದ್ಯೋಗ, ಶಿಕ್ಷಣ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಪರಿಚಯಿಸಿತು.
ರಾಜ್ಯದ ಆರ್ಥಿಕ ಪರಿವರ್ತನೆಗೆ ರಾಜ್ಯವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅವರು ನಂಬಿದ್ದರು. ಅದರಂತೆ ಅವರು ಭೂಮಿಯ ರಾಷ್ಟ್ರೀಕರಣ ಮತ್ತು ಸಣ್ಣ ಗುಂಪುಗಳ ಸಾಗುವಳಿದಾರರಿಗೆ ಭೂಮಿಯನ್ನು ಗುತ್ತಿಗೆ ನೀಡುವ ಪರವಾಗಿ ಪ್ರತಿಪಾದಿಸಿದರು. ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಸಹಕಾರಿ ಸಂಘಗಳನ್ನು ರಚಿಸಿದರು. ಕೃಷಿಯಿಂದ ಹೆಚ್ಚುವರಿ ಕಾರ್ಮಿಕರನ್ನು ಇತರ ಉತ್ಪಾದಕ ಜೀವನೋಪಾಯಗಳಿಗೆ ಸ್ಥಳಾಂತರಿಸಲು ಕೈಗಾರಿಕೀಕರಣದ ಅಗತ್ಯವನ್ನು ಅವರು ಅರಿತುಕೊಂಡರು.
ಭಾರತೀಯ ಸಂವಿಧಾನದ 370ನೇ ವಿಧಿಯನ್ನು ಅಂಬೇಡ್ಕರ್ ವಿರೋಧಿಸಿದ್ದರು. ಸಂವಿಧಾನದ 370ನೇ ವಿಧಿಯು ತಾರತಮ್ಯ ಮತ್ತು ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯ ತತ್ವಗಳ ವಿರುದ್ದ ಎಂದು ಅಂಬೇಡ್ಕರ್ ಅದನ್ನು ನಿರಾಕರಿಸಿದ್ದರು. ಸಮಗ್ರ ಹಿಂದೂ ಕೋಡ್ ಮಸೂದೆಯನ್ನು ಭಾರತೀಯ ಸಂಸತ್ತು ಕೈಬಿಟ್ಟಾಗ ಭಾರತದ ಮೊದಲ ಕಾನೂನು ಸಚಿವ ಹುದ್ದೆಗೆ ಅಂಂಬೇಡ್ಕರ್ ಅವರು ರಾಜೀನಾಮೆ ನೀಡಿದರು. ಈ ಮಸೂದೆಯಲ್ಲಿ ಎರಡು ಮುಖ್ಯ ಉದ್ದೇಶಗಳನ್ನು ಹೊಂದಿತ್ತು- ಮೊದಲನೇಯದಾಗಿ, ಸಾಮಾಜಿಕ ಅಸಮಾನತೆ ಮತ್ತು ಜಾತಿ ಅಸಮಾನತೆಗಳನ್ನು ತೊಡೆದುಹಾಕುವುದು. ಎರಡನೇಯದಾಗಿ, ಹಿಂದೂ ಮಹಿಳೆಯರ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುವುದು, ಅವರ ಹಕ್ಕುಗಳನ್ನು ಕಾಪಾಡುವುದು ಆಗಿತ್ತು. ಅಂಬೇಡ್ಕರ್ ಈ ಸಮಗ್ರ ಹಿಂದೂ ಕೋಡ್ ಮಸೂದೆ ಜಾರಿಗೆ ತರಲು ಮೂರು ವರ್ಷಗಳ ಕಾಲ ಹೋರಾಡಿದರು. ಇದರ ಫಲವಾಗಿ ಮಹಿಳೆಯರಿಗೆ ಹಲವು ಪ್ರಮುಖ ಹಕ್ಕುಗಳನ್ನು ನೀಡಿತು.
ಜಾತಿ ಅಥವಾ ಇನ್ನಿತರ ಕಾರಣಕ್ಕಾಗಿ ಸಮಾಜದಲ್ಲಿ ಹತ್ತಿಕ್ಕಲಾಗುತ್ತಿದ್ದ ಸಮುದಾಯದ ರಕ್ಷಣೆಗಾಗಿ ಮುಂಚೂಣಿಯಲ್ಲಿರುತ್ತಿದ್ದ ಅಂಬೇಡ್ಕರ್ ಅವರು ಈ ಹೋರಾಟವನ್ನು ತನ್ನ ಜನಾಂಗ ಅಥವಾ ಸಮುದಾಯದಕ್ಕೆ ಸೀಮಿತಗೊಳಿಸದೆ ಪ್ರತಿಯೊಬ್ಬರ ಪಾಲಿಗೂ ಹೋರಾಡುತ್ತಾ, ಎಲ್ಲಾ ನಾಗರಿಕರ ನ್ಯಾಯಕ್ಕಾಗಿ ಮತ್ತು ಸಬಲೀಕರಣದಲ್ಲೂ ಪಾತ್ರವಹಿಸಿದರು. ಅದೇ ಸಂವಿಧಾನವನ್ನು ಭಾರತದಲ್ಲಿ ನಾವು ಉಳಿಸಬೇಕಾದರೆ ಆಧುನಿಕ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಸಂವಿಧಾನದ ಮೌಲ್ಯ ಮತ್ತು ಉದ್ದೇಶಗಳು ಹಾಗೂ ಅದರ ಅಗತ್ಯತೆಗಳ ಬಗ್ಗೆ ಮುಂದಿನ ವಿದ್ಯಾರ್ಥಿ ತಲೆಮಾರಿಗೆ ತಲುಪಿಸುವಂತಹ ಕೆಲಸವನ್ನು ಶಾಲಾ-ಕಾಲೇಜುಗಳಿಂದಲೇ ಮಾಡಬೇಕಾಗುತ್ತದೆ. ಜ್ಞಾನದಿಂದಲೇ ನಿರ್ಮಿತವಾದ ಸಂವಿಧಾನ, ಅದರ ಉಳಿವು ಕೂಡ ವಿದ್ಯೆಯಿಂದಲೇ ಮಾತ್ರ ಸಾಧ್ಯ. ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳನ್ನು ಕಟ್ಟಿ ಹಾಕಲು ಶಿಕ್ಷಣವೇ ಒಂದು ಅಸ್ತ್ರವೆಂದು ಬಲವಂತವಾಗಿ ನಂಬಿಕೊಂಡಿದ್ದ ಅವರು, ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣದ ಬಗ್ಗೆ ಜಾಗೃತಿಯನ್ನು ನೀಡಿ, ಅವರನ್ನು ವಿದ್ಯಾವಂತರನ್ನಾಗಿಸಿ, ತಾವಾಗಿ ಅವರ ಸಾಮಾಜಿಕ ಸ್ಥಿತಿ, ಆರ್ಥಿಕ ಸುಧಾರಣೆ ಮತ್ತು ರಾಜಕೀಯ ಸ್ವಾತಂತ್ರ್ಯ ಕಂಡುಕೊಳ್ಳುವ ತನಕ ಅವರ ಬೆಂಬಲವಿರುತ್ತಿತ್ತು.

ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಕಾನೂನಿನ ಮುಂದೆ ಎಲ್ಲ ನಾಗರಿಕರೂ ಸಮಾನರು ಎನ್ನುವ ರೀತಿಯಲ್ಲಿ ಸಂವಿಧಾನವನ್ನು ರೂಪಿಸಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಮತ್ತು ಪ್ರಭಾವಶಾಲಿ. ಅವರೊಬ್ಬ ಶ್ರೇಷ್ಠ ಚಿಂತಕ. ಅಂಬೇಡ್ಕರ್ ಅವರ ಹುಟ್ಟು ಭಾರತದಲ್ಲಾದರೆ ಅವರ ಜ್ಞಾನ ಮತ್ತು ತಿಳುವಳಿಕೆಯ ಪರಿಶ್ರಮದಿಂದ ಅಖಂಡ ಜಗತ್ತನ್ನ ತಲುಪುವಲ್ಲಿ ಯಶಸ್ವಿಯಾಗಿದ್ದಾರೆಂದು ಹೆಮ್ಮೆಯಿಂದ ಭಾರತೀಯರು ಹೇಳಿಕೊಳ್ಳಲೇಬೇಕು.
ಪ್ರಪಂಚದ ಎಷ್ಟೋ ದೇಶಗಳಲ್ಲಿ ಅವರ ಜೀವನದ ಕುರಿತು ಅಧ್ಯಯನಗಳನ್ನು ಮಾಡುವುದಲ್ಲದೇ, ಅಧ್ಯಯನ ಕೇಂದ್ರಗಳನ್ನು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ, ಅವರ ಬದುಕು ಜಗತ್ತಿಗೆ ಆದರ್ಶವೆಂದು ತೋರಿಸಿಕೊಡುತ್ತಿದ್ದಾರೆ. ಶೋಷಿತರ, ನಿರ್ಗತಿಕರ ಮತ್ತು ಅವಕಾಶ ವಂಚಿತರ ಪಾಲಿಗೆ ನ್ಯಾಯ ಒದಗಿಸಲು ಹೋರಾಟದ ದಾರಿ ಹಿಡಿಯುವ ಹೋರಾಟಗಾರರಿಗೆ ಅಂಬೇಡ್ಕರ್ ಅವರು ನಡೆಸಿರುವ ಭಾಷಣಗಳು, ಬರಹಗಳು ಹಾಗೂ ಅವರ ಜೀವನಗಾಥೆಯೇ ಉತ್ತೇಜನಕಾರಿಯಾಗಿದೆ.
ವಿಪರ್ಯಾಸವೆಂದರೆ ಇಂದಿಗೂ ನಮ್ಮ ಭಾರತದಲ್ಲಿ ಅಸ್ಪೃಶ್ಯತೆ ಎಂಬುವುದು ಸಂಪೂರ್ಣ ಅಳಿಯದೆ ಅಸಮಾನತೆ ತೊಲಗಿ ಹೋಗದಿರುವುದು. ಭಾರತಿಯರಾದ ನಾವು ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಪುಷ್ಟಿ ನೀಡುವಲ್ಲಿ ಕೈ ಜೋಡಿಸೋಣ. ಇವರ ಜೀವನ ಚರಿತ್ರೆ ಮತ್ತು ಹೋರಾಟ ನಮಗೆ, ಮುಂಬರುವ ತಲೆಮಾರಿನ ಭಾರತೀಯರಿಗೆ ಮಾರ್ಗದರ್ಶನವಾಗಲಿ. ಭಾರತದ ಸಂವಿಧಾನವನ್ನು ಶ್ರೇಷ್ಠ ಸಂವಿಧಾನವನ್ನಾಗಿಸಿದ ಸಂವಿಧಾನ ಶಿಲ್ಪಿಗೆ ನಾವು ತಲೆ ಬಾಗೋಣ.
ಬೆಳಕಲ್ಲೂ ಕತ್ತಲೆಯ ಜೀವನ ಮಾಡುವವರಿಗೆ ಕತ್ತಲಲ್ಲಿಯೇ ನಡೆದು, ಸಾಧಿಸಿದವನ ಕಥೆಯನ್ನು ಹೇಳಬೇಕಿದೆ. “ಸಮಯ, ಸಾಧಕನ ಸೊತ್ತು ವಿನಃ ಹಗಲುಗನಸಿನಲ್ಲಿ ಮಾರು ಹೋಗುವವನದಲ್ಲ” ಎಂಬುದನ್ನು ಯುವ ಪೀಳಿಗೆಗೆ ತಿಳಿಸುವ ಅವಶ್ಯಕತೆ ಎಲ್ಲರಿಗೂ ಇದೆ. ಕಾಲೆಳೆಯುವವ ಸದಾ ಕಾಲ ಕೆಳಗೆ ಇರುತ್ತಾನೆ. ಸಾಧಿಸುವ ಛಲ ಎದೆಯಲ್ಲಿರಿಸಿ ಪ್ರತಿ ಮನಮನದಲ್ಲೂ ಅಂಬೇಡ್ಕರ್ ಜನಿಸುವಂತಾಗಲಿ.
















































