ಪರಶುರಾಮ ಥೀಮ್‌ ಪಾರ್ಕ್‌ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಖೇದಕರ

ಕಾರ್ಕಳ : ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ, ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಸಚಿವರಾಗಿದ್ದ ಸಂದರ್ಭ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಕಳವನ್ನು ದೇಶವ್ಯಾಪಿ ಗುರುತಿಸಬೇಕೆನ್ನುವ ದೂರದೃಷ್ಟಿ ಹಾಗೂ ವಿಭಿನ್ನ ಪರಿಕಲ್ಪನೆಯೊಂದಿಗೆ ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲೂರು ಉಮಿಕಲ್ ಬೆಟ್ಟದಲ್ಲಿ ಐತಿಹಾಸಿಕ ಪರಶುರಾಮ ಥೀಮ್ ಪಾರ್ಕ್ ಸ್ಥಾಪನೆಗೊಂಡಿತ್ತು. ಆದರೆ, ಅಂದಿನಿಂದಲೂ ಅಭಿವೃದ್ಧಿಯನ್ನು ಹೀಯಾಳಿಸಿಕೊಂಡು ಬರುತ್ತಿರುವ ಕಾಂಗ್ರೆಸ್ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಖೇದಕರ ಎಂದು ಯರ್ಲಪಾಡಿ ಗ್ರಾ. ಪಂ. ಅಧ್ಯಕ್ಷ ಸುನಿಲ್ ಹೆಗ್ಡೆ ಪ್ರಕಟನೆಯಲ್ಲಿ ಹೇಳಿದ್ದಾರೆ.

ಥೀಮ್ ಪಾರ್ಕ್ ನಿರ್ಮಾಣದ ಟೆಂಡರ್ ವಹಿಸಿಕೊಂಡ ನಿರ್ಮಿತಿ ಕೇಂದ್ರದವರು ಮೂರ್ತಿಯಲ್ಲಿ ಸಣ್ಣಪುಟ್ಟ ಬದಾಲಾವಣೆಗಳು ಇರುವುದರಿಂದ ಮಂದುವರೆದ ಕಾಮಗಾರಿಗಾಗಿ ಮೂರ್ತಿಯ ಕೆಲವು ಭಾಗಗಳನ್ನು ತೆರವುಗೊಳಿಸಿ ಕಾಮಗಾರಿಯಲ್ಲಿ ತೊಡಗಿದ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರವು ಈ ಯೋಜನೆಯ ಅನುದಾನವನ್ನು ತಡೆಹಿಡಿದಿತ್ತು. ಇದರಿಂದಾಗಿ ಕಾಮಗಾರಿ ಸ್ಥಗಿತವಾಗಿದ್ದು ಅಭಿವೃದ್ಧಿಗೆ ನೇರವಾಗಿ ಕಾಂಗ್ರೆಸ್ ಅಡ್ಡಿ ಮಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ, ಈ ವಿಚಾರವನ್ನು ಮರೆಮಾಚಿ ಗ್ರಾಮದ ಜನಸಾಮಾನ್ಯರ ಭಾವನೆಗಳಿಗೆ ನೇರವಾಗಿ ಧಕ್ಕೆ ಮಾಡಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ ಎಂದು ಸುನಿಲ್‌ ಆರೋಪಿಸಿದರು.

ಕ್ಷೇತ್ರದ ಅಭಿವೃದ್ಧಿಯನ್ನು ಸಹಿಸದೆ ಹೀಯಾಳಿಸುವುದರ ಮೂಲಕ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲೂ ಅಭಿವೃದ್ಧಿ ವಿರೋಧಿ ರಾಜಕೀಯಕ್ಕೆ ಮುಂದಾಗಿರುವುದು ಖಂಡನೀಯ ಎಂದ ಸುನಿಲ್‌ ಹೆಗ್ಡೆ ಈ ಬಗ್ಗೆ ಗ್ರಾಮಸ್ಥರು ಗೊಂದಲಕ್ಕೊಳಗಾಗದೇ, ಕಾಂಗ್ರೆಸ್‌ನ ಹೀನ ಮನಸ್ಥಿತಿಯ ರಾಜಕೀಯಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.











































































error: Content is protected !!
Scroll to Top