ಹೆಬ್ರಿ : ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಯಲ್ಲಿ ವಿಪ್ರ ಬಾಲಕ – ಬಾಲಕಿಯರ 10ದಿನಗಳ ಧಾರ್ಮಿಕ ಶಿಕ್ಷಣ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಏ.11ರಂದು ನಡೆಯಿತು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದರ ಮಾರ್ಗದರ್ಶನದಲ್ಲಿ ಶಿಬಿರ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ನಡೆಸುತ್ತಿರುವ ಧಾರ್ಮಿಕ ಶಿಕ್ಷಣ ಶಿಬಿರವನ್ನು ಅರ್ಚಕ ಹೆಬ್ರಿ ಶ್ರೀಕಾಂತ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜೀವನದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಬಿರವು ಬಹಳಷ್ಟು ಪ್ರಯೋಜನಕಾರಿಯಾಗಿದೆ ಎಂದರು.
ಗೋಶಾಲಾ ಟ್ರಸ್ಟ್ ನ ವಿದ್ವಾನ್ ಪದ್ಮನಾಭ ಆಚಾರ್ಯ ಗಿಲ್ಲಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವನದಲ್ಲಿ ಧಾರ್ಮಿಕ ಚಿಂತನೆ ಅತ್ಯಗತ್ಯ, ಬಾಲ್ಯದಿಂದಲೇ ದೇವರ ಬಗ್ಗೆ ನಂಬಿಕೆ, ನಮ್ಮ ಸಂಸ್ಕೃತಿಯ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಸುಮಾರು 60 ವರ್ಷಗಳ ಹಿಂದೆಯೇ ಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಇದನ್ನು ಆರಂಭಿಸಿದವರಾಗಿದ್ದಾರೆ ಎಂದರು.
ಶಿಬಿರದ ಅಧ್ಯಾಪಕ ವಿಕಾಸ ಆಚಾರ್ಯ ಮಾತನಾಡಿ, ಜೀವನದಲ್ಲಿ ಶ್ರೇಯಸ್ಸು, ಸನಾತನ ಧರ್ಮದ ಅರಿವನ್ನು ಮೂಡಿಸಲು ಇಂತಹ ಧಾರ್ಮಿಕ ಶಿಬಿರಗಳು ಅವಶ್ಯಕ ಎಂದರು.
ಈ ಸಂದರ್ಭ ಶಿಬಿರದ ಅಧ್ಯಾಪಕರಾದ ಶ್ರೀವಾಸ ಆಚಾರ್ಯ, ಶ್ರೀಧಾಮ ಆಚಾರ್ಯ, ಗೋಶಾಲೆಯ ಟ್ರಸ್ಟ್ ನ ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯ ಗಿಲ್ಲಾಳಿ, ವ್ಯವಸ್ಥಾಪನ ಸಮಿತಿ ಸದಸ್ಯರು, ಶಿಬಿರಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ವಂದಿಸಿದರು.






























































