ಇಬ್ಬರೇ ಕಲಾವಿದರು ಎರಡು ಗಂಟೆ ವೇದಿಕೆಯನ್ನು ಆವರಿಸಿದ ರೀತಿಯೇ ಅದ್ಭುತ
ಖ್ಯಾತ ನಟ, ನಿರ್ದೇಶಕ ಶಂಕರನಾಗ್ ಒಮ್ಮೆ ಹೇಳಿದ ಮಾತು – ಸಿನೆಮಾಕ್ಕೆ ಇರುವ ಎಲ್ಲಾ ಸಾಧ್ಯತೆಗಳೂ ನಾಟಕಕ್ಕಿವೆ. ಆದರೆ ನಾಟಕಕ್ಕೆ ಇರುವ ಸಾಧ್ಯತೆಗಳು ಸಿನೆಮಾಕ್ಕೆ ಇಲ್ಲ. ಈ ಮಾತುಗಳು ನಮಗೆ ಕನ್ವಿನ್ಸ್ ಆಗಬೇಕಾದರೆ ‘ಕಣಿವೆಯ ಹಾಡು’ ನಾಟಕವನ್ನು ಮಿಸ್ ಮಾಡದೆ ನೋಡಬೇಕು.
ಕಣಿವೆಯ ಹಾಡು – ಒಂದು ಅದ್ಭುತ ಭಾವತೀವ್ರತೆಯ ನಾಟಕ
ಮೈಸೂರಿನ ನಟನ ರಂಗ ಸಂಸ್ಥೆಯು ಪ್ರಸ್ತುತ ಪಡಿಸಿದ ಈ ಅದ್ಭುತ ಭಾವತೀವ್ರತೆಯ ನಾಟಕವು ವೇದಿಕೆಯೇರಿದ್ದು ಮಾರ್ಚ್ 22ನೇ ತಾರೀಕು ಕಾರ್ಕಳದಲ್ಲಿ. ಕಾರ್ಕಳದ ಶ್ರೇಷ್ಠ ಸಂಸ್ಥೆಯಾದ ರಂಗ ಸಂಸ್ಕೃತಿ ಇದರ ದಶಮಾನೋತ್ಸವದ ನಾಟಕ ಹಬ್ಬದ ಎರಡನೇ ದಿನದ ನಾಟಕವಾಗಿ.

ನಾಟಕದ ರಚನೆ ಯಾರು?
ದಕ್ಷಿಣ ಆಫ್ರಿಕಾದ ಖ್ಯಾತ ನಾಟಕಕಾರ ಅತೊಲ್ ಫ್ಯುಗಾರ್ಡ್ ಅವರು ಬರೆದ ನಾಟಕವಿದು. ನಾಟಕದ ಬರವಣಿಗೆಯಲ್ಲಿ ಆತನನ್ನು ಶೇಕ್ಸಪಿಯರಗೆ ಸಮ ಎಂದು ಸಾಹಿತ್ಯಲೋಕ ಕರೆಯುತ್ತದೆ. ಈ ಕಣಿವೆಯ ಹಾಡು ನಾಟಕದ ತೂಕವೂ ಹಾಗೆಯೇ ಇದೆ. ಅದನ್ನು ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದವರು ಡಾಕ್ಟರ್ ಮೀರಾ ಮೂರ್ತಿ. ಮೂಲ ನಾಟಕ THE VALLEY SONG ಇದ್ದದ್ದು ಕನ್ನಡಕ್ಕೆ ಬರುವಾಗ ಕಣಿವೆಯ ಹಾಡು ಆಗಿದೆ. ಅದನ್ನು ರಂಗದಲ್ಲಿ ಸಾಕ್ಷಾತ್ಕಾರ ಮಾಡಿದವರು ಖ್ಯಾತ ರಂಗ ನಿರ್ದೇಶಕ ಡಾಕ್ಟರ್ ಶ್ರೀಪಾದ ಭಟ್ ಅವರು. ಈ ನಾಟಕದಲ್ಲಿ ಅವರು ರವೀಂದ್ರನಾಥ ಟ್ಯಾಗೋರ್ ಮತ್ತು ವೊಲ್ ಸೋಯೆಂಕ ಅವರ ಹಾಡುಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಬಳಸಿಕೊಂಡಿದ್ದಾರೆ. ಸಂಗೀತ ನೀಡಿದವರು ಅನುಷ್ ಶೆಟ್ಟಿ ಮತ್ತು ಮುನ್ನಾ ಮೈಸೂರು. ವೇದಿಕೆಯ ಮೇಲೆ 2 ಘಂಟೆ ಕಂಡವರು ನಟನ ನಾಟಕ ಸಂಸ್ಥೆಯ ಪ್ರಿನ್ಸಿಪಾಲ್ ಆದ ಮೇಘ ಸಮೀರ ಮತ್ತು ಅದ್ಭುತ ನಟಿ ದಿಶಾ ರಮೇಶ್ ಅವರು.
ನಾಟಕದ ಥೀಮ್ ಏನು?
ಈ ನಾಟಕದ ಪ್ರಧಾನ ಪಾತ್ರಗಳು ಎಂದರೆ ಅಬ್ರಹಾಂ ಜೊಂಕರ್ ಎಂಬ ರೈತ ಮತ್ತು ಆತನ ಮೊಮ್ಮಗಳು ವೆರೋನಿಕಾ ಜೊಂಕರ್. ಅವರು ಒಬ್ಬರನ್ನು ಒಬ್ಬರು ತುಂಬಾ ಪ್ರೀತಿ ಮಾಡುವವರು. ಆದರೆ ಅವರ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಅಬ್ರಹಾಂ ಭೂತಕಾಲದ ನೆನಪುಗಳಲ್ಲಿ ನರಳುವವನು. ವೆರೋನಿಕಾ ಭವಿಷ್ಯದ ಸುಂದರವಾದ ಕನಸುಗಳನ್ನು ಹೆಣೆಯುವ ಆಧುನಿಕ ಹುಡುಗಿ. ಆಕೆ ಚಂದ ಹಾಡು ಹೊಸೆಯುತ್ತಾಳೆ. ಗಟ್ಟಿಯಾದ ಧ್ವನಿಯಲ್ಲಿ ಹಾಡುತ್ತಾಳೆ ಮತ್ತು ಸೊಗಸಾಗಿ ಕುಣಿಯುತ್ತಾಳೆ.

ಅಬ್ರಹಾಂ ಗುಲಾಮಗಿರಿಯ ಮನಸ್ಥಿತಿಯವನು. ಬ್ರಿಟಿಷ್ ಅಧಿಕಾರಿಗಳ ದಯಾಭಿಕ್ಷೆಗೆ ಬಾಯಿ ತೆರೆದು ಕೂತವನು. ಮೊಮ್ಮಗಳು ಸ್ವಾಭಿಮಾನಿ. ಜೀತ ಅನ್ನುವುದು ಸಾವಿಗೆ ಸಮ ಎನ್ನುತ್ತಾಳೆ. ತನ್ನ ಭವಿಷ್ಯವನ್ನು ಹುಡುಕಿಕೊಂಡು ನಗರಕ್ಕೆ ಹೊರಟು ನಿಲ್ಲುತ್ತಾಳೆ. ಆಗ ಅಬ್ರಹಾಂ ಮನಸಿನಲ್ಲಿ ಬರುವ ಆತಂಕ, ಗೊಂದಲಗಳು. ಹಿಂದೆ ಆದ ಕಹಿಘಟನೆಗಳ ನೆರಳಿನಲ್ಲಿ ಆತ ನೋವು ಪಡುತ್ತಾನೆ ಮತ್ತು ಆಕೆಯನ್ನು ತಡೆಯುತ್ತಾನೆ. ಆಗ ನಡೆಯುವ ವೈಚಾರಿಕ ಸಂಘರ್ಷ, ಜನರೇಶನ್ ಗ್ಯಾಪ್ ಇವುಗಳನ್ನು ಈ ನಾಟಕವು ಸಶಕ್ತವಾಗಿ ತೋರಿಸುತ್ತ ಹೋಗುತ್ತದೆ. ಅಬ್ರಹಾಂ ತನ್ನ ತೀರಿಹೋದ ಹೆಂಡತಿಯ ಕಹಿ ನೆನಪು, ಓಡಿ ಹೋದ ಹಿರಿಯ ಮೊಮ್ಮಗಳ ಕಹಿ ಘಟನೆಗಳ ನೋವಿನಲ್ಲಿ ನಲುಗುತ್ತಾನೆ. ಮೊಮ್ಮಗಳು ಒಂದು ಕಡೆ ಅಜ್ಜನನ್ನು ಕನ್ವಿನ್ಸ್ ಮಾಡಲು ಪ್ರಯತ್ನ ಮಾಡುತ್ತಾಳೆ. ಮತ್ತೊಂದು ಕಡೆ ತನ್ನ ಹಾಡುವ ಕನಸುಗಳನ್ನು ಕೈಬಿಡಲಾಗದೆ ದ್ವಂದ್ವಕ್ಕೆ ಸಿಲುಕುತ್ತಾಳೆ. ಈ ಭಾವನಾ ಸಂಘರ್ಷದಲ್ಲಿ ಕೊನೆಗೆ ಗೆಲ್ಲುವುದು ಯಾರು? ಅನ್ನೋದನ್ನು ತಿಳಿಯಲು ನೀವು ಇಡೀ ನಾಟಕವನ್ನು ನೋಡಬೇಕು.

ಅಜ್ಜ ಮತ್ತು ವೆರೋನಿಕಾ
ಎರಡು ಘಂಟೆಯ ಈ ನಾಟಕದ ವೇದಿಕೆಯಲ್ಲಿ ಕಾಣುವ ಕಲಾವಿದರು ಇಬ್ಬರೇ. ಒಬ್ಬರು ಶ್ರೇಷ್ಠ ಕಲಾವಿದ ಮೇಘ ಸಮೀರ. ಮತ್ತೊಬ್ಬರು ಮಂಡ್ಯ ರಮೇಶ್ ಅವರ ಪ್ರತಿಭೆಯನ್ನು ಆಪೋಶನ ಮಾಡಿಕೊಡು ಬಂದಿರುವ ಅವರ ಮಗಳು ದಿಶಾ ರಮೇಶ್. ಹೆಚ್ಚು ಪ್ರಾಪರ್ಟಿ ಕೂಡ ಇಲ್ಲಿ ಬಳಕೆ ಮಾಡಿಲ್ಲ. ಆದರೂ ಈ ನಾಟಕದ ಒಂದು ಸಂಭಾಷಣೆ, ಒಂದು ದೃಶ್ಯ ಕೂಡ ಮಿಸ್ ಮಾಡದೆ ಪ್ರೇಕ್ಷಕರು ಕಣ್ಣು ತುಂಬಿಸಿಕೊಳ್ಳುತ್ತಾರೆ ಅಂದರೆ ಅದಕ್ಕೆ ಕಾರಣ ಅವರಿಬ್ಬರ ಅಭಿನಯವೆ!
ಅಜ್ಜ ಮತ್ತು ಮೊಮ್ಮಗಳ ಕೆಮಿಸ್ಟ್ರಿಯು ಇಲ್ಲಿ ಅದ್ಭುತವಾಗಿ ಮ್ಯಾಚ್ ಆಗಿದೆ. ಮೇಘ ಸಮೀರ ತನ್ನ ಗತಿಸಿಹೋದ ಹೆಂಡತಿಯ ಜೊತೆಗೆ ಏಕಾಂತದಲ್ಲಿ ಮಾತಾಡುವಾಗ, ಬ್ರಿಟಿಷ್ ಅಧಿಕಾರಿಗಳ ಮುಂದೆ ನಡು ಬಗ್ಗಿಸಿ ದೈನ್ಯತೆಯಲ್ಲಿ ಮಾತಾಡುವಾಗ, ಮೊಮ್ಮಗಳ ಹಾಡನ್ನು ಜೋಗುಳ ಮಾಡಿಕೊಂಡು ಮೈಮರೆತು ನಿದ್ರಿಸುವಾಗ ರೋಮಾಂಚನದ ಅಲೆಗಳನ್ನು ಸೃಷ್ಟಿಸುತ್ತಾರೆ. ದಿಶಾ ರಮೇಶ್ ಉಚ್ಚ ಸ್ತರದಲ್ಲಿ ಪಾಶ್ಚಾತ್ಯ ಹಾಡುಗಳನ್ನು ಹಾಡುವಾಗ, ಅವುಗಳಿಗೆ ನೃತ್ಯ ಮಾಡುವಾಗ, ದೊಡ್ಡ ದೊಡ್ಡ ಕನಸುಗಳನ್ನು ಕಾಣುವಾಗ, ಅಜ್ಜ ದಾಸ್ಯದ ಪರವಾಗಿ ಮಾತಾಡುವಾಗ ಸಿಡಿದು ನಿಲ್ಲುವಾಗ ತಾನು ಎಂತಹ ಪರಿಪೂರ್ಣ ಕಲಾವಿದೆ ಎನ್ನುವುದನ್ನು ಸಾಬೀತು ಪಡಿಸುತ್ತಾರೆ. ಅಜ್ಜ ಮತ್ತು ವೆರೋನಿಕಾ ಎಂಬ ಹಾಡು, ಪಯಣಿಗಾ ಎಂಬ ಹಾಡು ಆಕೆ ಹಾಡುತ್ತ ಪ್ರೇಕ್ಷಕರ ಎದೆಯಲ್ಲಿ ಸಂಭ್ರಮದ ಅಲೆಗಳನ್ನು ಉಂಟುಮಾಡುತ್ತಾರೆ. ಸಿಟ್ಟು, ಪ್ರೀತಿ, ಹತಾಶೆ, ಅಳು, ನಗು, ಖುಷಿ……. ಇವೆಲ್ಲ ಭಾವನೆಗಳ ನಿವೇದನೆಯಲ್ಲಿ ದಿಶಾ ಗೆದ್ದಿದ್ದಾರೆ. ನಾಟಕವನ್ನೂ ಗೆಲ್ಲಿಸಿದ್ದಾರೆ.

ಅವರಿಬ್ಬರ ಬಾಡಿ ಲ್ಯಾಂಗ್ವೇಜ್ ಅವರ ಸ್ವಭಾವಕ್ಕೆ ಪೂರಕವಾಗಿಯೇ ಇದೆ. ಅಜ್ಜ ಬೆನ್ನು ಬಗ್ಗಿಸಿ ದೈನ್ಯತೆಯ ಪ್ರತಿಮೆಯಾಗಿ ನಿಂತರೆ ಮೊಮ್ಮಗಳು ತಲೆ ಎತ್ತಿ ಸ್ವಾಭಿಮಾನದ ಪ್ರತಿಮೆ ಆಗುತ್ತಾಳೆ. ಅವರಿಬ್ಬರ ಸಂವಾದದಲ್ಲಿ ಬರುವ ಮಾತುಗಳಷ್ಟೇ ಪವರ್ಫುಲ್ ಆಗಿರೋದು ಅವರು ಕ್ರಿಯೇಟ್ ಮಾಡುವ ಅರ್ಥಗರ್ಭಿತ ವಿರಾಮಗಳು! ಆ ವಿರಾಮಗಳಲ್ಲಿ ಸಂಗೀತವೂ ಮೌನಕ್ಕೆ ಶರಣಾಗುತ್ತದೆ. ಇಬ್ಬರೇ ಕಲಾವಿದರು ಅಂದಾಜು ಎರಡು ಘಂಟೆ ವೇದಿಕೆಯನ್ನು ಆವರಿಸುವ ರೀತಿಗೆ ಎಲ್ಲ ಪ್ರೇಕ್ಷಕರೂ ಫಿದಾ ಆಗುವುದು ಗ್ಯಾರಂಟೀ. ಅವರಿಬ್ಬರೂ ಹೇಳುವ ಪಂಚಿಂಗ್ ಸಂಭಾಷಣೆಗಳು ಪ್ರೇಕ್ಷಕರನ್ನು ಅಲುಗಾಡಲು ಬಿಡುವುದಿಲ್ಲ.
ಭರತವಾಕ್ಯ
ಅಜ್ಜ ಮತ್ತು ಮೊಮ್ಮಗಳ ನವಿರು ಪ್ರೀತಿ, ಎರಡು ವಿಭಿನ್ನ ಜನರೇಶನ್ ಪಾತ್ರಗಳು ಯೋಚನೆ ಮಾಡುವ ವಿಧಾನ, ಅತೀತಗಳಿಂದ ಹೊರಬಂದು ಕನಸುಗಳನ್ನು ಕಟ್ಟಬೇಕು ಅಜ್ಜ ಎಂದು ವೆರೋನಿಕಾ ಹೇಳುವ ಮಾತುಗಳು, ನಾನು ನಗರಕ್ಕೆ ಹೋಗಿ ಬದುಕನ್ನು ಕಟ್ಟಿಕೊಳ್ಳಲು ನಿನ್ನ ಆಶೀರ್ವಾದ ಬೇಕು ಅಜ್ಜಾ ಎನ್ನುವ ಮೊಮ್ಮಗಳ ಮಾತುಗಳು, ನಿಮ್ಮನ್ನು ಎಂದಿಗೂ ಧಿಕ್ಕರಿಸಿ ಹೋಗಲಾರೆ ಅಜ್ಜ ಎನ್ನುವ ಆರ್ದ್ರತೆ, ನಾನು ಎಂದಿಗೂ ಓಡಿ ಹೋಗುವ ಮೊಮ್ಮಗಳು ಅಲ್ಲ ಅಜ್ಜ ಎನ್ನುವ ಮೊಮ್ಮಗಳ ಭರವಸೆಯ ಮಾತುಗಳು…ನಾಟಕ ನೋಡಿ ಹೊರಬಂದ ನಂತರವೂ ಮರೆತು ಹೋಗುವುದಿಲ್ಲ ಅಂದರೆ ಅದು ನಾಟಕದ ಗೆಲುವು. ಇಡೀ ನಾಟಕದ ಉದ್ದಕ್ಕೂ ಭಾವತೀವ್ರತೆಯ ಅಭಿನಯ ಮಾಡಿ ಪ್ರೇಕ್ಷಕರನ್ನು ಕೂಡ ಅದೇ ಭಾವತೀವ್ರತೆಯಲ್ಲಿ ಕಟ್ಟಿಹಾಕಿದ ಮೇಘ ಸಮೀರ ಮತ್ತು ದಿಶಾ ರಮೇಶ್ ಅವರಿಗೆ ನಮ್ಮ ಚಪ್ಪಾಳೆಗಳು ಮೀಸಲಾಗಿರಲಿ. ವಿವಿಧ ರಂಗತಂತ್ರಗಳ ಮೂಲಕ ನಾಟಕವನ್ನು ನಿರ್ದೇಶನ ಮಾಡಿದ ಡಾಕ್ಟರ್ ಶ್ರೀಪಾದ ಭಟ್ ಅವರಿಗೆ ಕೂಡ ನಮ್ಮ ಮೆಚ್ಚುಗೆಯಿರಲಿ. ಇಂತಹ ಸುಂದರ ನಾಟಕವನ್ನು ಕಾರ್ಕಳದ ರಂಗವೇದಿಕೆಯಲ್ಲಿ ಸಾಕ್ಷಾತ್ಕಾರ ಮಾಡಿದ ರಂಗ ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷ ಎಸ್ ನಿತ್ಯಾನಂದ ಪೈ ಮತ್ತವರ ತಂಡಕ್ಕೆ ನಮ್ಮ ಅಭಿನಂದನೆಗಳು ಮೀಸಲಿರಲಿ.






















