ಭಾರತದ ಮೇಲೂ ಕಣ್ಣಿಟ್ಟಿತ್ತು ಐಸಿಸ್ ಖೋರಸಾನ್
ಕಾರ್ಕಳ : ರಷ್ಯಾದ ಮೇಲೆ ಶುಕ್ರವಾರ ರಾತ್ರಿ ನಡೆದ ಭಯೋತ್ಪಾದಕರ ದಾಳಿ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ರಷ್ಯಾದ ರಾಜಧಾನಿ ಮಾಸ್ಕೊದ ಬಳಿ ನಡೆಯುತ್ತಿದ್ದ ರಾಕ್ಬ್ಯಾಂಡ್ ಸಂಗೀತ ಕಾರ್ಯಕ್ರಮವೊಂದರ ಮೇಲೆ ದಾಳಿ ನಡೆಸಿರುವ ಭಯೋತ್ಪಾದಕರು ಬಾಂಬ್ ಸ್ಫೋಟಿಸಿ ಮತ್ತು ಯದ್ವಾತದ್ವಾ ಗುಂಡು ಹಾರಿಸಿ 60ಕ್ಕೂ ಹೆಚ್ಚು ಮಂದಿಯನ್ನು ಸಾಯಿಸಿ ನೂರಾರು ಜನರನ್ನು ಗಾಯಗೊಳಿಸಿದ್ದಾರೆ. ಸುಮಾರು ಎರಡು ದಶಕಗಳ ಬಳಿಕ ರಷ್ಯಾದಲ್ಲಿ ನಡೆದಿರುವ ಭೀಕರ ನರಮೇಧ ಇದು. ವ್ಲಾದಿಮೀರ್ ಪುಟಿನ್ ದಾಖಲೆಯ ಐದನೇ ಬಾರಿಗೆ ಭಾರಿ ಬಹುಮತದೊಂದಿಗೆ ಅಧ್ಯಕ್ಷ ಹುದ್ದೆ ಉಳಿಸಿಕೊಂಡ ವಾರದಲ್ಲೇ ನಡೆದ ದಾಳಿ ರಷ್ಯಾ ಅವಮಾನದಿಂದ ಕುದಿಯುವಂತೆ ಮಾಡಿದೆ.
ಐಸಿಸ್ ಮುಸ್ಲಿಮ್ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಐಸಿಸ್ನ ಅಫಘಾನಿಸ್ಥಾನದ ಅಂಗವಾದ ಐಸಿಸ್ ಖೋರಸಾನ್ ಈ ಕೃತ್ಯ ಎಸಗಿದೆ. ಇರಾಕ್, ಸಿರಿಯಾ ಮುಂತಾದ ದೇಶಗಳಲ್ಲಿ ಸಕ್ರಿಯವಾಗಿದ್ದ ಐಸಿಸ್ ಉಗ್ರ ಸಂಘಟನೆಯನ್ನು ನಾಶ ಮಾಡಿದಷ್ಟೂ ಅದು ರಕ್ತಬೀಜಾಸುರನಂತೆ ಮತ್ತೆ ಮತ್ತೆ ಮೊಳಕೆಯೊಡೆಯುತ್ತಿದೆ ಎನ್ನುವುದಕ್ಕೆ ಈ ದಾಳಿ ಸಾಕ್ಷಿ. ಐಸಿಸ್ ಖೋರಸಾನ್ ಬಹಳ ಅಪಾಯಕಾರಿಯಾದ ಸಂಘಟನೆ.
ಈ ಐಸಿಸ್ ಖೋರಸಾನ್ ಭಾರತದ ಮೇಲೂ ಒಂದು ಕಣ್ಣಿಟ್ಟಿದೆ. ಕೆಲ ವರ್ಷಗಳ ಹಿಂದೆ ಕೇರಳ, ಮಹಾರಾಷ್ಟ್ರ, ಕರ್ನಾಟಕ ಮತ್ತಿತರ ರಾಜ್ಯಗಳಿಂದ ಯುವಕ – ಯುವತಿಯರು ಹೋಗಿ ಈ ಸಂಘಟನೆ ಸೇರಿದ್ದನ್ನು ನೆನಪಿಸಿಕೊಳ್ಳಬಹುದು. ಇಷ್ಟಕ್ಕೂ ಐಸಿಸ್ಗೆ ರಷ್ಯಾದ ಮೇಲೇಕೆ ಇಷ್ಟು ದ್ವೇಷ ಎನ್ನುವು ಪ್ರಶ್ನೆ ಸುಳಿಯುತ್ತದೆ.
ಸಿರಿಯಾದಲ್ಲಿ ಬಾಷರ್ ಅಸಾದ್ ನೇತೃತ್ವದ ಸರಕಾರವನ್ನು ರಷ್ಯಾ ಬೆಂಬಲಿಸಿರುವುದು ಐಸಿಸ್ ಸಿಟ್ಟಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸಿರಿಯಾದಲ್ಲಿ ಸಕ್ರಿಯವಾಗಿದ್ದ ಐಸಿಸ್ನ ಹೆಡೆಮುರಿಕಟ್ಟುವಲ್ಲಿ ಬಾಷರ್ ಸರಕಾರ ಯಶಸ್ವಿಯಾಗಿದೆ. ರಷ್ಯಾ ಸೇರಿದಂತೆ ಕೆಲವು ದೇಶಗಳು ನೀಡಿದ ಬೆಂಬಲದಿಂದ ಉಗ್ರರ ವಿರುದ್ಧ ಸಿರಿಯಾ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಈ ಕಾರಣಕ್ಕೆ ರಷ್ಯಾವನ್ನು ಇಸ್ಲಾಂ ವಿರೋಧಿ ಮತ್ತು ಅಧ್ಯಕ್ಷ ಪುಟಿನ್ ಅವರನ್ನು ಶತ್ರು ಎಂದು ಐಸಿಸ್ ಪರಿಗಣಿಸಿದೆ. ಇಸ್ಲಾಂ ದೇಶಗಳ ವ್ಯವಹಾರದಲ್ಲಿ ಬೇರೆ ದೇಶಗಳು ಕೈ ಹಾಕುವುದನ್ನು ಐಸಿಸ್ ಇಸ್ಲಾಂ ವಿರೋಧಿ ಎಂದು ಪರಿಗಣಿಸುತ್ತದೆ. ಹೀಗಾಗಿ ಅಮೆರಿಕ, ರಷ್ಯಾ, ಭಾರತ ಮತ್ತಿತರ ದೇಶಗಳನ್ನು ಶತ್ರು ಎಂದು ಪರಿಗಣಿಸಿ ಹೊಂಚು ಹಾಕುತ್ತಿರುತ್ತದೆ. 2014ಕ್ಕಿಂತ ಭಾರತಕ್ಕೂ ಐಸಿಸ್ ದೊಡ್ಡ ಬೆದರಿಕೆಯಾಗಿತ್ತು. ನಂತರ ಭಾರತದಲ್ಲಿ ಅದಕ್ಕೆ ಸಿಗುತ್ತಿರುವ ಬೆಂಬಲ ಕಡಿಮೆಯಾಗಿದ್ದರೂ ಇದೀಗ ರಷ್ಯಾದ ಮೇಲೆ ನಡೆದಿರುವ ದಾಳಿಯ ಹಿನ್ನೆಲೆಯಲ್ಲಿ ಭಾರತ ಕಟ್ಟೆಚ್ಚರದಿಂದ ಇರಬೇಕಾದದ್ದು ಅಗತ್ಯ.































































