ಎಲ್ಲ ಸಮಾರಂಭಗಳಿಗೆ ಅನುಮತಿ ಕಡ್ಡಾಯ- ಜನಸಾಮಾನ್ಯರಿಗೆ ಇನ್ನಿಲ್ಲದ ತೊಂದರೆ
ಕಾರ್ಕಳ : ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾದ ಮಾ.16ರಿಂದಲೇ ದೇಶಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ನೀತಿ ಸಂಹಿತೆ ಜಾರಿಯಲ್ಲಿರುವಾಗ ಏನು ಮಾಡಬಹುದು, ಏನು ಮಾಡಬಾರದು ಎಂಬುದರ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ. ಪ್ರತಿ ಚುನಾವಣೆ ನಡೆಯುವಾಗಲೂ ನೀತಿ ಸಂಹಿತೆ ಜಾರಿಗೆ ಬರುವುದು ಅನಿವಾರ್ಯ. ಚುನಾವಣೆಯನ್ನು ನಿಷ್ಪಕ್ಷಪಾತವಾಗಿ, ಅಡ್ಡಿಅಡಚಣೆಗಳಿಲ್ಲದೆ ನಿರ್ಭೀತಿಯಿಂದ ಮತ್ತು ಪಾರದರ್ಶಕವಾಗಿ ನಡೆಸಲು ಚುನಾವಣೆ ನಡೆಸಲು ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೊಳಿಸುತ್ತದೆ. 1960ರಲ್ಲಿ ಕೇರಳದ ಚುನಾವಣೆಯಲ್ಲಿ ಮೊದಲ ಬಾರಿಗೆ ನೀತಿ ಸಂಹಿತೆ ಎಂಬ ಪರಿಕಲ್ಪನೆ ಪ್ರಾಯೋಗಿಕವಾಗಿ ಜಾರಿಯಾಗಿತ್ತು. ಅಲ್ಲಿ ಯಶಸ್ವಿಯಾದ ಬಳಿಕ ಇಡೀ ದೇಶದಲ್ಲಿ ಪಂಚಾಯತ್‌ನಿಂದ ಹಿಡಿದು ಲೋಕಸಭೆ ತನಕ ಎಲ್ಲ ಚುನಾವಣೆಗಳಲ್ಲೂ ನೀತಿ ಸಂಹಿತೆ ಚುನಾವಣೆಯ ಅವಿಭಾಜ್ಯ ಅಂಗವಾಗಿ ಜಾರಿಯಾಗುತ್ತದೆ.
ನೀತಿ ಸಂಹಿತೆ ಜಾರಿಯಲ್ಲಿರುವಾಗ ಇಡೀ ಆಡಳಿತ ವ್ಯವಸ್ಥೆ ಅಧಿಕಾರಿಗಳ ಸುಪರ್ದಿಯಲ್ಲಿರುತ್ತದೆ. ಚುನಾಯಿತ ಸರಕಾರಗಳ ಸಾಕಷ್ಟು ಅಧಿಕಾರ ಮೊಟಕುಗೊಳ್ಳುತ್ತದೆ. ಕನಿಷ್ಠ ಒಂದು ಸಾಮಾನ್ಯ ವರ್ಗಾವಣೆ ಮಾಡುವ ಅಧಿಕಾರವೂ ಈ ಅವಧಿಯಲ್ಲಿ ಸರಕಾರಕ್ಕೆ ಇರುವುದಿಲ್ಲ ಎನ್ನುವುದು ನೀತಿ ಸಂಹಿತೆ ಎಷ್ಟು ಪವರ್‌ಫುಲ್ ಎನ್ನುವುದಕ್ಕೆ ಉದಾಹರಣೆ. ಸಾಮಾನ್ಯವಾಗಿ ನೀತಿ ಸಂಹಿತೆ ರಾಜಕೀಯ ಪಕ್ಷಗಳಿಗೆ ಎಂದು ಜನ ಭಾವಿಸಿರುತ್ತಾರೆ. ಆದರೆ ನೀತಿ ಸಂಹಿತೆ ರಾಜಕೀಯ ಪಕ್ಷಗಳನ್ನು ಮಾತ್ರವಲ್ಲ ಜನಸಾಮಾನ್ಯರ ಬದುಕನ್ನೂ ಬಾಧಿಸುತ್ತದೆ. ಈ ಕಾರಣಕ್ಕೆ ಈ ಲೋಕಸಭೆ ಚುನಾವಣೆಗೆ ಜಾರಿಯಾಗಿರುವ ಸುದೀರ್ಘ ನೀತಿ ಸಂಹಿತೆಗೆ ಭಾರಿ ಆಕ್ಷೇಪ ವ್ಯಕ್ತವಾಗುತ್ತಿದೆ.
ಈ ಬಾರಿ ಮಾ.16ರಿಂದ ಆರಂಭಗೊಂಡು ಜೂನ್ 4ರ ತನಕ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅಂದರೆ ಮಾರ್ಚ್‌ನ 15 ದಿನ ಏಪ್ರಿಲ್ ಮತ್ತು ಮೇ ಪೂರ್ತಿ ತಿಂಗಳುಗಳು ಹಾಗೂ ಜೂನ್‌ನ ಏಳು ದಿನ ಸೇರಿದರೆ ಬರೋಬ್ಬರಿ 80 ದಿನ ಜನ ಬಿಗಿ ನಿರ್ಬಂಧಗಳ ಅಡಿಯಲ್ಲಿ ಬದುಕಬೇಕಾಗುತ್ತದೆ. ಇಷ್ಟು ಸುದೀರ್ಘ ಅವಧಿಯ ನೀತಿ ಸಂಹಿತೆ ಅಗತ್ಯವಿದೆಯೇ ಎನ್ನುವುದು ಪ್ರಸ್ತುತ ಚರ್ಚೆಯಲ್ಲಿರುವ ವಿಚಾರ.
ಈಗ ಕರಾವಳಿಯ ಉದಾಹರಣೆಯನ್ನೇ ತೆಗೆದುಕೊಂಡರೆ ಇಲ್ಲಿ ಚುನಾವಣೆ ನಡೆಯುವುದು ಏ.26ರಂದು. ಫಲಿತಾಂಶಕ್ಕಾಗಿ ಜೂ.4ರ ತನಕ ಕಾಯಬೇಕು. ದೇಶದ ಉಳಿದ ಭಾಗಗಳಲ್ಲಿ ಚುನಾವಣೆ ಮುಗಿಯುವ ತನಕವೂ ಕರಾವಳಿಯ ಜನ ನೀತಿ ಸಂಹಿತೆಯಡಿಯಲ್ಲೇ ಬದುಕಬೇಕು. ಇದು ಅತಾರ್ಕಿಕವಾದ ಕ್ರಮ ಎನ್ನುವುದು ಜನರ ವಾದ. ಏ. 26ರ ನಂತರ ಕರಾವಳಿಯಲ್ಲಿ ಚುನಾವಣೆ ಸಂಬಂದಿ ಯಾವುದೇ ರಾಜಕೀಯ ಚಟುವಟಿಕೆ ನಡೆಯುವುದಿಲ್ಲ. ಆದರೂ ನೀತಿ ಸಂಹಿತೆ ಜಾರಿಯಲ್ಲಿಟ್ಟಿರುವುದು ಯಾಕೆ? ಚುನಾವಣೆ ಮುಗಿದ ಬಳಿಕ ನೀತಿ ಸಂಹಿತೆ ತೆರವುಗೊಳಿಸಿ ಮತ ಎಣಿಕೆಗಾಗುವಾಗ ವಾಪಸು ಜಾರಿಗೆ ತರಬಹುದು ಎನ್ನುವುದು ಜನ ಕೊಡುತ್ತಿರುವ ಸಲಹೆ.
ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರಕಾರಿ ಕೆಲಸ ಕಾರ್ಯಗಳು ಯಾವುದೂ ಆಗುವುದಿಲ್ಲ ಎಂಬ ಕಾರಣಕ್ಕೆ ಜನರಿಗೆ ಅನಾನುಕೂಲವಾಗುವುದು ಒಂದೆಡೆಯಾದರೆ, ಪ್ರತಿಯೊಂದು ಕಾರ್ಯಕ್ರಮಕ್ಕೂ ಅನುಮತಿ ಪಡೆದುಕೊಳ್ಳಬೇಕು ಎನ್ನುವುದು ಹೆಚ್ಚು ಕಿರಿಕಿರಿ ಉಂಟು ಮಾಡುತ್ತಿರುವ ವಿಷಯ.
ಮದುವೆ, ಸೀಮಂತ, ಗೃಹ ಪ್ರವೇಶ, ನಾಮಕರಣದಂಥ ಕೌಟುಂಬಿಕ ಸಮಾರಂಭಗಳಿಗೆ, ಜಾತ್ರೆ, ಕೋಲ, ತಂಬಿಲ, ಉತ್ಸವ, ಪೂಜೆಗಳಂಥ ಸಾರ್ವಜನಿಕ ಕಾರ್ಯಕ್ರಮಗಳಿಗೂ ಸಂಬಂದಪಟ್ಟ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆದಿರಬೇಕು ಎನ್ನುತ್ತದೆ ನೀತಿ ಸಂಹಿತೆ. ಹೇಳಿ ಕೇಳಿ ಇದು ಬೇಸಿಗೆ ಸಮಯ. ಒಂದೆಡೆ ಮದುವೆ ಮತ್ತಿತರ ಸಮಾರಂಭಗಳ ಸೀಸನ್, ಇನ್ನೊಂದೆಡೆ ಜಾತ್ರೆ ಉತ್ಸವಗಳಂಥ ಕಾರ್ಯಕ್ರಮಗಳೂ ನಡೆಯಬೇಕು. ಯಕ್ಷಗಾನ, ನಾಟಕಗಳು ಬಿರುಸಿನಿಂದ ನಡೆಯುವ ಸಂದರ್ಭದಲ್ಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಪ್ರತಿಯೊಂದಕ್ಕೂ ಅನುಮತಿ ಪಡೆಯಬೇಕು, ಅಲ್ಲಿ ವಿಧಿಸುವ ಸಮಯ ಮಿತಿ, ಜನಮಿತಿ ಮತ್ತಿತರ ಷರತ್ತುಗಳನ್ನೆಲ್ಲ ಪಾಲಿಸಬೇಕು. ಇದು ನಿಜಕ್ಕೂ ಪ್ರತಿಯೊಬ್ಬ ನಾಗರೀಕನಿಗೆ ಕಿರಿಕಿರಿಯಾಗುವ ಕೆಲಸ.
ಮದುವೆ ಸೀಸನ್ ಹಾಳಾದರೆ ಫೋಟೋಗ್ರಾಫರ್, ಶಾಮಿಯಾನ, ಕ್ಯಾಟರಿಂಗ್… ಹೀಗೆ ವ್ಯವಹಾರಗಳಿಗೂ ತೊಂದರೆ. ಇದರಿಂದ ಬದುಕು ಕಟ್ಟಿಕೊಂಡವರ ಗತಿ ಏನು. ಯಕ್ಷಗಾನ, ನಾಟಕ, ಕಲಾವಿದರಿಗೂ ಸಮಸ್ಯೆ. ಹಲವು ಕಡೆ ನಾಟಕ, ಯಕ್ಷಗಾನ ಕಾರ್ಯಕ್ರಮ ಅನುಮತಿ ಸಿಗದೇ ರದ್ದು. ಯಕ್ಷಗಾನ ಹತ್ತು ಘಂಟೆಯ ಮೊದಲು ಮುಗಿಸುವುದು ಹೇಗೆ? ಹೀಗೆ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗುತ್ತಾ ಹೋಗುತ್ತಿದೆ. ಏಪ್ರಿಲ್ 26 ಕರಾವಳಿಯಲ್ಲಿ ಚುನಾವಣೆ ಮುಗಿಯುತ್ತದೆ. ಆದರೂ ಜೂನ್ 4ರವರೆಗೆ ನೀತಿ ಸಂಹಿತೆ ಮುಗಿಯೋದಿಲ್ಲ. ಪ್ರಜಾಪ್ರಭುತ್ವದ ಮಹಾಹಬ್ಬದ ಸಂಭ್ರಮದಲ್ಲಿ ಹೀಗೊಂದು ಅನಿವಾರ್ಯ ನೀತಿ ಸಂಹಿತೆಯನ್ನು ಸಹಿಸಿಕೊಳ್ಳಲೇಬೇಕು.
ಜ್ಯೋತಿ ರಮೇಶ್































































