ಉಡುಗೊರೆ ಕಳುಹಿಸುತ್ತೇನೆ ಎಂದು ನಂಬಿಸಿ ವಂಚನೆ
ಉಡುಪಿ: ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂಬುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಯೋರ್ವ ಬ್ರಹ್ಮಾವರ ಸಮೀಪದ ಪೇತ್ರಿಯ ಮಹಿಳೆಯೋರ್ವರಿಗೆ ಸುಮಾರು 55 ಲ.ರೂ. ವಂಚಿಸಿದ ಕುರಿತು ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೇತ್ರಿ ನಿವಾಸಿ ಲವೀನಾ ಸ್ಟೆಫನಿ ಕ್ರಾಸ್ಟೊ (42) ವಂಚನೆಗೊಳಗಾದ ಮಹಿಳೆ. ಫೇಸ್ಬುಕ್ನಲ್ಲಿ ಮಿಹಿಯಾಲ್ ನೀಲ್ಗೆನ್ ಎಂಬ ವ್ಯಕ್ತಿ ತಾನು ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂಬುದಾಗಿ ಪರಿಚಯಿಸಿಕೊಂಡು, ನಂತರ ವಾಟ್ಸಾಪ್ನಲ್ಲಿ ಚಾಟಿಂಗ್ ನಡೆಸಿ ಸ್ನೇಹಿತನಾಗಿದ್ದ. 2024ರ ಫೆಬ್ರವರಿ 15ರಂದು ಮಹಿಳೆಗೆ ಗಿಫ್ಟ್ ಕಳುಹಿಸುವುದಾಗಿ ಹೇಳಿದ್ದಾನೆ. ಬಳಿಕ ದಿಲ್ಲಿಯ ಪಾರ್ಸೆಲ್ ಆಫೀಸ್ನಿಂದ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿ ಕರೆ ಮಾಡಿ ಜರ್ಮನಿಯಿಂದ ಬಂದಿರುವ ಪಾರ್ಸೆಲ್ನಲ್ಲಿ ಜ್ಯುವೆಲರಿ ಮತ್ತು ಯುರೋ ಕರೆನ್ಸಿ ಇದ್ದು, ಇದನ್ನು ಪಡೆಯಲು ಪಾರ್ಸೆಲ್ ಚಾರ್ಜ್, ಮನಿ ಲ್ಯಾಂಡಿಂಗ್ ಸರ್ಟಿಫಿಕೇಟ್, ಕಸ್ಟಂ ಸರ್ಟಿಫಿಕೇಟ್ ಹಾಗೂ ಹಣ ಪಾವತಿಸಬೇಕು ಎಂದು ತಿಳಿಸಿದ್ದಾನೆ. ಅದನ್ನು ನಂಬಿ ಬ್ಯಾಂಕ್ ಖಾತೆಗಳಿಗೆ, ಗೂಗಲ್ ಪೇಗೆ ಹಂತ ಹಂತವಾಗಿ ಒಟ್ಟು ರೂಪಾಯಿ 54,74,000 ರೂ. ವರ್ಗಾಯಿಸಿದ್ದಾರೆ.
ಆದರೆ ಮಹಿಳೆಗೆ ಪಾರ್ಸೆಲ್ ಬಂದಿಲ್ಲ ಹಾಗೂ ಪಾವತಿಸಿದ ಹಣವೂ ವಾಪಾಸು ಸಿಕ್ಕಿಲ್ಲ. ಮೋಸ ಹೋದದ್ದು ಅರಿವಾದ ಬಳ:ಿಕ ಮಹಿಳೆ ದೂರು ದಾಖಲಿಸಿದ್ದಾರೆ.






























































