ಪರಿಪೂರ್ಣ ಗರ್ಭಗುಡಿಯೊಳಗೆ ರಾಮನ ಪ್ರಾಣಪ್ರತಿಷ್ಠೆ ಎಂದು ಸ್ಪಷ್ಟನೆ
ಅಯೋಧ್ಯೆ : ರಾಮ ಮಂದಿರದ ಗರ್ಭಗುಡಿ ಪರಿಪೂರ್ಣವಾಗಿದೆ. ಮಂದಿರವನ್ನು ಅಲ್ಲೇ ಕಟ್ಟಬೇಕು ಎಂಬುದು ಶತಮಾನಗಳ ಕನಸಾಗಿದೆ. ಮಂದಿರ ಅಲ್ಲೇ ಕಟ್ಟುವೆವು ಎನ್ನುವುದು ಘೋಷಣೆಯೂ ಆಗಿತ್ತು. ಅಯೋಧ್ಯೆ ತೀರ್ಪು ಬರುವ ಮುಂಚೆಯೇ ಕುಹಕದ ಮಾತುಗಳನ್ನು ಆಡುತ್ತಿದ್ದರು. ಇದೀಗ ಇಷ್ಟೆಲ್ಲ ಆದರೂ ವಿರೋಧಿಗಳು ಕುಹಕದ ಮಾತುಗಳನ್ನು ಆಡುತ್ತಿದ್ದಾರೆ. ತೀರ್ಪು ಬಂದ ಎರಡೂವರೆ ವರ್ಷದಲ್ಲಿ ಮಂದಿರ ನಿರ್ಮಾಣ ಆಗಬೇಕಿತ್ತು. ಮಂದಿರ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಾಗ ಸಾಕಷ್ಟು ಸವಾಲು ಎದುರಾಗಿತ್ತು. ತಳಪಾಯ ನಿರ್ಮಾಣ ಮಾಡುವುದು ಕಷ್ಟವಾಗಿತ್ತು. ಇದೀಗ ಭಕ್ತರ ತಾಳ್ಮೆ ಕೆಡಬಾರದು ಎನ್ನುವ ಕಾರಣಕ್ಕೆ ಪ್ರಾಣಪ್ರತಿಷ್ಠೆ ಮಾಡಲಾಗುತ್ತದೆ ಎಂದು ಅಯೋಧ್ಯೆಯ ರಾಮ ಮಂದಿರ ಅಪೂರ್ಣ, ತರಾತುರಿಯ ಉದ್ಘಾಟನೆ ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಟ್ರಸ್ಟಿಯೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ
ರಾಮಮಂದಿರ ಅತ್ಯಂತ ಸುಂದರವಾಗಿದೆ. ಈಗ ಬಾಲರಾಮ ಪ್ರತಿಮೆ ಒಳಬಂದು ಕುಳಿತಿದೆ. ಅದನ್ನು ಗುರುವಾರ ಗರ್ಭಗುಡಿಯಲ್ಲಿ ನಿಲ್ಲಿಸಲಾಗುತ್ತದೆ. ಪೂಜಾ ವಿಧಾನಗಳು ಮುಂದೆ ನಡೆಯಲಿವೆ ಎಂದು ಪೇಜಾವರ ಶ್ರೀ ಹೇಳಿದರು.
ಪ್ರಾಣಪ್ರತಿಷ್ಠೆಗೆ ಮೂರು ಮೂರ್ತಿಗಳಲ್ಲಿ ಒಂದನ್ನು ಆಯ್ಕೆ ಮಾಡುವುದೇ ಕಷ್ಟವಾಗಿತ್ತು. ಅರುಣ್ ಯೋಗಿರಾಜ್ ಕೆತ್ತಿರುವ ಮೂರ್ತಿ ವಿಶೇಷವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮೂರ್ತಿ ಹೇಗಿದೆ ಎನ್ನುವುದನ್ನು ಗರ್ಭಗುಡಿಯಲ್ಲೇ ನೋಡಲಿದ್ದೀರಿ. ಯೋಗಿರಾಜ್ ಅವರ ಕೆತ್ತನೆಯ ಮೂರ್ತಿಯ ಪ್ರಭಾವಳಿಯಲ್ಲಿ ದಶಾವತರವಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯಿಂದ ಪ್ರಾಣ ಪ್ರತಿಷ್ಠಾಪನೆಗೆ ಕೆಲವು ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರನ್ನೂ ಸಂತಸಪಡಿಸಲು ಸಾಧ್ಯವಿಲ್ಲ. ಟ್ರಸ್ಟ್ನಲ್ಲಿ ಇದು ಚರ್ಚೆಗೆ ಬಂದಿಲ್ಲ ಎಂದರು. ಶಂಕರಾಚಾರ್ಯರಿಗೆ ಆಹ್ವಾನ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲರನ್ನೂ ಮಂದಿರ ಉದ್ಘಾಟನೆಗೆ ಕರೆಯಲು ಸಾಧ್ಯವಿಲ್ಲ. ಯಾಕೆಂದರೆ ಪ್ರಧಾನಿ ಬರುವುದರಿಂದ ತುಂಬಾ ಜನರನ್ನು ಕರೆಯಲು ಸಾಧ್ಯವಾಗಿಲ್ಲ. ಹತ್ತಾರು ಜನ ಗುಂಪು ಬರುವಂತೆ ಇಲ್ಲ. ಒಂದು ಕಿ.ಮಿ ನಡೆದುಕೊಂಡೇ ಬರಬೇಕಿದೆ. ಹೀಗಾಗಿ ಈಗ ಅವರು ಬರೋದು ಬೇಡ. ಮುಂಬರುವ ದಿನಗಳಲ್ಲಿ ವೈಭೋವೋಪೇತವಾಗಿ ಬರಬಹುದು ಎಂದರು.

ಮಸೀದಿ ಕೆಡವಿದ ಜಾಗದಲ್ಲೇ ಮಂದಿರ ಕಟ್ಟುತ್ತಿಲ್ಲ ಎನ್ನುವ ಶಿವಸೇನಾ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಆರೋಪಕ್ಕೆ ತಿರುಗೇಟು ನೀಡಿದ ಪೇಜಾವರ ಶ್ರೀ, ಎಲ್ಲೋ ಕುಳಿತು ಏನೇನೋ ಮಾತನಾಡುತ್ತಿದ್ದಾರೆ. ಯಾರು ಮಂದಿರವೇ ಬೇಡ ಎನ್ನುತ್ತಿದ್ದಾರೆಯೋ ಅವರಿಗೆ ಮಂದಿರ ಎಲ್ಲಿ ಕಟ್ಟಿದರೆ ಏನು ಎಂದು ಪ್ರಶ್ನಿಸಿದರು.






























































