ಮೊಳಗಿದೆ ಜಯಕಾರ; ಕೃಷ್ಣನ ಅವತಾರದ 8 ಸ್ತಬ್ಧಚಿತ್ರಗಳ ಆಕರ್ಷಣೆ
ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಪರ್ಯಾಯ ಸರ್ವಜ್ಞ ಪೀಠವೇರುವ ಮುನ್ನಾ ಕ್ಷಣದ ಮೆರವಣಿಗೆ ಇಂದು ನಸುಕಿನ ಹೊತ್ತು ಬಹಳ ಆಕರ್ಷಕವಾಗಿ ನಡೆಯಿತು. ಸ್ವಾಮೀಜಿ ದಂಡತೀರ್ಥದಲ್ಲಿ ಪುಣ್ಯಸ್ನಾನ ನೆರವೇರಿಸಿ ಆಗಮಿಸುತ್ತಿದ್ದಂತೆ ನಸುಕಿನ ಹೊತ್ತು ಮೆರವಣಿಗೆಗೆ ಚಾಲನೆ ನೀಡಲಾಯಿತು. ಕಿನ್ನಿಮೂಲ್ಕಿ ಸ್ವಾಗತಗೋಪುರದ ಬಳಿಯಿಂದ ಆರಂಭಗೊಂಡ ಭವ್ಯ ಮೆರವಣಿಗೆಗೆ ಜೋಡುಕಟ್ಟೆಯಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಮಠದ ಪಟ್ಟದ ದೇವರೊಂದಿಗೆ ಕೂಡಿಕೊಂಡರು. ಮೆರವಣಿಗೆಯುದ್ದಕ್ಕೂ ಸೇರಿದ್ದ ಭಕ್ತ ಸಮೂಹ ಶ್ರೀಕೃಷ್ಣ ದೇವರಿಗೆ, ಶ್ರೀಪಾದರಿಗೆ ಜಯಕಾರ ಹಾಕಿದರು.
ಮೆರವಣಿಗೆಯಲ್ಲಿ ಸ್ಥಳೀಯ ಕಲಾತಂಡಗಳು ಸಹಿತ ನಾಸಿಕ್ ಡೋಲು, ತಾಸೆ, ಕೃಷ್ಣನ ಅವತಾರಕ್ಕೆ ಸಂಬಂಧಿಸಿದ 8 ಸ್ತಬ್ಧಚಿತ್ರಗಳು, ಗೀತೆಯ ನಾಣ್ಣುಡಿ ಇರುವ 4 ಟ್ಯಾಬ್ಲೋಗಳು ಸಹಿತ ಸರಕಾರಿ ಇಲಾಖೆಯ ಟ್ಯಾಬ್ಲೋಗಳು, ಕೇರಳ-ಭಾರತೀಯ ಶೈಲಿಯ ವಿವಿಧ ಮಾದರಿಯ ಚೆಂಡೆಗಳು, ಕುಣಿತ ಭಜನೆ, ಜನಪದ ಕಲೆ, ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಮಕ್ಕಳಿಂದ ಪಾರಾಯಣ, ವೈವಿಧ್ಯಮಯ ಕೋಲಾಟ, ಕುಣಿತ ಭಜನೆ, ಬಳ್ಳಾರಿಯ ಕೋಲಾಟ, ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು, ಪರಶುರಾಮನ ಬೃಹತ್ ವಿಗ್ರಹ, ಹುಲಿಯ ಸ್ತಬ್ಧಚಿತ್ರ, ಚಿಲಿಪಿಲಿ ಗೊಂಬೆಗಳು, ಚೆಂಡೆ, ವಯೋಲಿನ್, ಜನಪದ ಕಲೆಗಳು, ಮಧ್ವಗಾನ ಯಾನ, ಕುಣಿತ ಭಜನೆ, ವಿಷ್ಣು ಸಹಸ್ರನಾಮ ಶ್ಲೋಕಗಳು, ಪೌರಾಣಿಕ ಸನ್ನಿವೇಶದ ಸ್ತಬ್ಧಚಿತ್ರಗಳು ಜನಾಕರ್ಷಣೆಯಾಗಿದ್ದವು.

ವಿಶ್ವ ಗೀತಾಪರ್ಯಾಯವಾಗಿ ಮುಂದಿನ ಎರಡು ವರ್ಷ ಶ್ರೀಕೃಷ್ಣ ಪೂಜಾ ಕೈಂಕರ್ಯ ನೆರವೇರಿಸಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದಲ್ಲಿ ಜನರು ಬಹಳ ಸಂಭ್ರಮದಿಂದ ಪಾಲ್ಗೊಂಡರು. ಇಡೀ ಉಡುಪಿ ನಗರ ಕಳೆದ ಒಂದು ವಾರದಿಂದ ಜಗಮಗಿಸುತ್ತಿದ್ದು, ನಿನ್ನೆ ರಾತ್ರಿಯಿಡೀ ಜನರು ನಿದ್ದೆ ಮಾಡದೆ ಪರ್ಯಾಯಯದ ಸಡಗರವನ್ನು ಅನುಭವಿಸಿದರು.
ಬುಧವಾರ ಬೆಳಗ್ಗೆಯಿಂದಲೇ ಶ್ರೀ ಕೃಷ್ಣಮಠ ಆವರಣದಲ್ಲಿ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಎರಡು ವರ್ಷಗಳ ಪರ್ಯಾಯ ಪೂಜಾ ಕಾರ್ಯ ಪೂರ್ಣಗೊಳಿಸಿದ ಕೃಷ್ಣಾಪುರ ಮಠದ ಸಿಬಂದಿಯವರು ತಮ್ಮ ಸೊತ್ತುಗಳನ್ನು ಶ್ರೀ ಕೃಷ್ಣಮಠದಿಂದ ತಮ್ಮ ಮಠಕ್ಕೆ ಕೊಂಡೊಯ್ಯುವ ಮತ್ತು ಮುಂದಿನ ಎರಡು ವರ್ಷಗಳ ಪರ್ಯಾಯ ಪೂಜೆ ನಡೆಯುವ ಪುತ್ತಿಗೆ ಮಠದಿಂದ ಅಗತ್ಯದ ಸೊತ್ತುಗಳನ್ನು ಶ್ರೀಕೃಷ್ಣಮಠಕ್ಕೆ ತರುವ, ಶ್ರೀಮಠದ ವ್ಯವಸ್ಥೆಗೆ ತಕ್ಕಂತೆ ಕಚೇರಿ ಇತ್ಯಾದಿಗಳನ್ನು ಸಿದ್ಧಪಡಿಸುವ ದೃಶ್ಯಗಳು ಕಂಡುಬಂದವು. ಬುಧವಾರ ಮಧ್ಯಾಹ್ನ ಕೃಷ್ಣಾಪುರ ಮಠದಿಂದ ಪರ್ಯಾಯದ ಕೊನೆಯ ಅನ್ನಸಂತರ್ಪಣೆ ನಡೆದ ಬಳಿಕ ಸೂರೆ ಬಿಡುವ ಕಾರ್ಯಕ್ರಮ ನಡೆಯಿತು.


ಪುತ್ತಿಗೆ ಮಠವನ್ನು ವಿವಿಧ ಹೂವು, ಗೆಂದಾಳೆ ಎಳನೀರು, ಅಡಿಕೆ ಗೊನೆ ಹೀಗೆ ವಿವಿಧ ಬಗೆಯ ವಸ್ತುಗಳಿಂದ ಅಲಂಕರಿಸಲಾಗಿತ್ತು. ಇದರ ಜತೆಗೆ ವಿದ್ಯುದ್ದೀಪದ ಅಲಂಕಾರ ಇನ್ನಷ್ಟು ಮೆರಗು ನೀಡಿತ್ತು. ಮಠದ ಒಳಗೆ ಪಟ್ಟದ ದೇವರ ಗುಡಿಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಜನರು ಪುತ್ತಿಗೆ ಮಠದ ಎದುರು ಸೇರಿ ಸೆಲ್ಫಿ ಕ್ಲಿಕ್ಕಿಸುವುದು, ಫೋಟೊ ತೆಗೆಯುವುದರಲ್ಲಿ ನಿರತರಾಗಿದ್ದರು.
ಇಂದು ಬೆಳಗ್ಗೆ ಮತ್ತು ಸಂಜೆ ದರ್ಬಾರ್ ನಡೆಯಲಿದ್ದು, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸನ್ಮಾನ, ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ರಾಶಿ ರಾಶಿ ಹೊರೆಕಾಣಿಕೆ
ಪುತ್ತಿಗೆ ಪರ್ಯಾಯಕ್ಕೆ ದಾಖಲೆ ಪ್ರಮಾಣದಲ್ಲಿ ಹೊರೆ ಕಾಣಿಕೆ ಹರಿದು ಬಂದಿದೆ. ಹೊರೆಕಾಣಿಕೆ ಸಂಗ್ರಹಿಸಲು ನಿರ್ಮಿಸಿದ್ದ ಉಗ್ರಾಣ ತುಂಬಿ ತುಳುಕಿದೆ. ಜ.9ರಿಂದ ಉಡುಪಿ ಮತ್ತು ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಹೊರೆ ಕಾಣಿಕೆ ಬಂದಿದೆ. ವಿವಿಧ ಸಂಘ, ಸಂಸ್ಥೆ, ಸಂಘಟನೆಗಳಿಂದ ಅಕ್ಕಿ, ಸಕ್ಕರೆ, ಬೆಲ್ಲ, ದವನ ಧಾನ್ಯ, ಬೇಳೆ, ಕಾಳು, ತರಕಾರಿ, ಹಣ್ಣು ಮೊದಲಾದ ದಿನಸಿ ಸಾಮಾಗ್ರಿಗಳು ಬಂದಿವೆ. ಪರ್ಯಾಯದ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಅನ್ನದಾನ ಮಾಡಲು ಈ ಹೊರೆಕಾಣಿಕೆಗಳು ಬಳಕೆಯಾಗುತ್ತವೆ. ಬಳಿಕ ನಿತ್ಯ ಅನ್ನದಾನಕ್ಕೆ ಉಪಯೋಗಿಸಲಾಗುವುದು. ಹೊರೆಕಾಣಿಕೆಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿತ್ತು. ಇವುಗಳನ್ನು ನೋಡಲೇಂದೇ ಜನ ಬರುತ್ತಿದ್ದರು.
ಕೃಷ್ಣಮಠದ ಪರಿಸರ ಸೇರಿದಂತೆ ಉಡುಪಿಯ ವಿವಿಧ ಭಾಗಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತರು ತಾವು ಇದ್ದಲ್ಲಿಂದಲೇ ನೋಡಲು ಅನುಕೂಲವಾಗುವಂತೆ ದೊಡ್ಡ ಸ್ಕ್ರೀನ್ಗಳ ವ್ಯವಸ್ಥೆ ಮಾಡಲಾಗಿತ್ತು. ಇಡೀ ಪ್ರಕ್ರಿಯೆಯನ್ನು ಲಕ್ಷಾಂತರ ಭಕ್ತರು ಲೈವ್ ಮೂಲಕ ಆಸ್ವಾದನೆ ವಿಶೇಷವಾಗಿದೆ.
































































