ಗಿಲ್ಲಾಳಿ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರ ಆರಾಧನೆ

ಹೆಬ್ರಿ : ಆಚಾರ್ಯ ಮಧ್ವರು ಬಾಲ್ಯದಲ್ಲಿಯೇ ಮೇಧಾವಿಯಾಗಿದ್ದು ತಾಯಿಯ ಸ್ಥಾನದಲ್ಲಿದ್ದು ಗೋವುಗಳ ರಕ್ಷಣೆಯನ್ನು ಮಾಡಿದ್ದಾರೆ. ಅವರ ಆದರ್ಶ ತತ್ವಗಳನ್ನು ಬಾಲ್ಯದಿಂದಲೇ ಅನುಸರಿಸಿಕೊಂಡು ಬಂದ ಶ್ರೀ ವಿಶ್ವೇಶತೀರ್ಥರು ಶ್ರೀ ಕೃಷ್ಣನ ಸೇವೆಯನ್ನು ಮಾಡುತ್ತಾ ಸಮಾಜದ ಒಳಿತಿಗಾಗಿ ದುಡಿದವರು. ಗೋವುಗಳಲ್ಲಿ ಎಲ್ಲ ದೇವತೆಗಳು ವಾಸವಾಗಿದ್ದಾರೆ. ಗೋವುಗಳ ಬಗ್ಗೆ ಮಹಾಭಾರತದಲ್ಲಿ ವೇದವ್ಯಾಸರು ಅನೇಕ ವಿಚಾರಗಳನ್ನು ತಿಳಿಯಪಡಿಸಿದ್ದಾರೆ. ಗೋಮೂತ್ರದಲ್ಲಿ ಭಾಗೀರಥಿ, ಗೋಮಯದಲ್ಲಿ ಲಕ್ಷ್ಮೀ ಸನ್ನಿಹಿತವಾಗಿದ್ದಾಳೆ. ಕಿವಿಯಲ್ಲಿ ಅಶ್ವಿನಿ ದೇವತೆಗಳು, ಹಣೆಯಲ್ಲಿ ರುದ್ರದೇವರು, ನಾಲಗೆಯಲ್ಲಿ ಸರಸ್ವತಿ. ಹೀಗೆ ಪ್ರತಿಯೊಂದು ಅಂಗಾಂಗಗಳಲ್ಲಿ ದೇವತೆಗಳು ಸನ್ನಿಹಿತವಾಗಿರುವ ಆಕಳಿನ ಸೇವೆ ಮಾಡಿದರೆ ಆರೋಗ್ಯ, ನೆಮ್ಮದಿ, ಸಂಪತ್ತು ಸಿಗುತ್ತದೆ ಎಂದು ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು.

ಅವರು ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರ ಆರಾಧನೆ ಅಂಗವಾಗಿ ನಡೆದ ಜಪ, ಪಾರಾಯಣ, ಹೋಮ, ಮಹಾಪೂಜೆ, ಸಂಸ್ಮರಣೆಯಲ್ಲಿ ಪಾಲ್ಗೊಂಡು ಆಶೀರ್ವಚನ ನುಡಿಗಳನ್ನು ಆಡಿದರು.

ಹೆಬ್ರಿ ಮತ್ತು ಸುತ್ತಮುತ್ತಲಿನ ಭಾಗದ ಭಕ್ತರ ನೆರವಿನಿಂದ ಹೆಬ್ರಿ ಗೋಶಾಲೆಯು ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣಗೊಂಡು ಗೋಸೇವೆ ಮಾಡುತ್ತಿರುವುದು ಅತ್ಯಂತ ಪುಣ್ಯದ ಸೇವೆಯಲ್ಲಿ ಪಾಲ್ಗೊಂಡಂತಾಗಿದೆ. ಗಂಧದ ಕೊರಡನ್ನು ತೇದಿದಾಗ ಸುಂದರ ಪರಿಮಳ ಹೇಗೆ ಬರುವುದೋ ಹಾಗೆಯೇ ವಿಶ್ವೇಶತೀರ್ಥರು ಮಾಡಿದ ದೇವರ ಸೇವೆ, ಸಮಾಜ ಸೇವೆಯಿಂದ ಹಿಂದೂ ಸಮಾಜದ ಉನ್ನತಿಗೆ ಪ್ರೇರಣೆ ನೀಡುತ್ತಿರುವುದು ಅತ್ಯಂತ ಸಂತೋಷವನ್ನು ಉಂಟುಮಾಡಿದೆ. ಗುರುಗಳ ಆರಾಧನೆಯಿಂದ ಎಲ್ಲರಿಗೂ ಒಳಿತಾಗಲಿ ಎಂದು ಆಶೀರ್ವಚನ ನೀಡಿದರು.

ವಿದ್ವಾನ್ ಗಣಪತಿ ಭಟ್ ಕಡಂದಲೆ ವಿಶ್ವೇಶತೀರ್ಥ ಗುರುಗಳ ಬಗ್ಗೆ ಸಂಸ್ಮರಣ ನುಡಿಗಳನ್ನಾಡಿದರು. ಗೋಶಾಲೆಯ ಟ್ರಸ್ಟಿಗಳಾದ ರವಿ ರಾವ್, ಭಾರ್ಗವಿ ಐತಾಳ್, ವಿಷ್ಣುಮೂರ್ತಿ ಆಚಾರ್ಯ, ಗಣೇಶ್ ಕಿಣಿ ಬೆಳ್ವೆ, ದಿನೇಶ್ ಪೈ ಮುನಿಯಾಲು, ಐತು ಕುಲಾಲ್, ಶ್ರೀಕಾಂತ್ ಭಟ್ ಅಜೆಕಾರು, ತಾರಾನಾಥ್ ಬಲ್ಲಾಳ್, ಬಾಲಕೃಷ್ಣ ನಾಯಕ್, ವಿಷ್ಣುಮೂರ್ತಿ ನಾಯಕ್, ಗೋಶಾಲೆಯ ಉಸ್ತುವಾರಿ ಸುಬ್ರಮಣ್ಯ ನಾಯಕ್, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸುಧಾಕರ್ ಭಟ್ ಕಾರ್ಕಳ, ಅದಮಾರು ಮಠದ ಸಿಬ್ಬಂದಿ ಪಾಲ್ಗೊಂಡಿದ್ದರು. ಟ್ರಸ್ಟಿ ಪದ್ಮನಾಭ ಆಚಾರ್ಯ ಗಿಲ್ಲಾಳಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರ್ವಹಿಸಿದರು.





























































































error: Content is protected !!
Scroll to Top