ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಅತಿವೇಗಕ್ಕೆ ಅಮಾಯಕರು ಬಲಿ
ಕಾರ್ಕಳ : ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರ ಕ್ರಾಸ್ ಬಳಿ ಕಾರೊಂದು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವಿಗೀಡಾದ ಘಟನೆ ಎ. 24ರ ಸಂಜೆ ಸಂಭವಿಸಿದೆ. ನಿಟ್ಟೆ ಸಮೀಪದ ಬಜಕಳ ನಿವಾಸಿ ನವೀನ್‌ಚಂದ್ರ ಮೂಲ್ಯ (45) ಮೃತಪಟ್ಟ ದುರ್ದೈವಿ.
ನವೀನ್‌ಚಂದ್ರ ಅವರು ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಪ್ರೇರಣ ಮೂಲ್ಯಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾರ್ಕಳದಿಂದ ನಿಟ್ಟೆಯತ್ತ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಎಸೆಯಲ್ಪಟ್ಟಿದ್ದು ನವೀನ್‌ಚಂದ್ರ ಹಾಗೂ ಪ್ರೇರಣ ಇಬ್ಬರಿಗೂ ಗಂಭೀರ ಸ್ವರೂಪದ ಗಾಯವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ನವೀನ್‌ಚಂದ್ರ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಅತಿಯಾದ ವೇಗ
ಕಾರು ಚಾಲಕ ಹಾಗೂ ಪ್ರಯಾಣಿಕರು ನಿಟ್ಟೆ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ನಿಟ್ಟೆ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಿತಿಮೀರಿದ ವೇಗದಲ್ಲಿ ಕಾರು, ಬೈಕ್ ಚಲಾಯಿಸುತ್ತಿದ್ದು ಈ ಹಿಂದೆಯೂ ಅನೇಕ ಬಾರಿ ಅಪಘಾತವನ್ನುಂಟು ಮಾಡಿದ್ದಾರೆ. ನಿಟ್ಟೆ ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಬೇಜವಾಬ್ದಾರಿ ಚಾಲನೆ, ಮೋಜು ಮಸ್ತಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಕಳೆದ ಬಾರಿ ಅತ್ತೂರು ಹಾಗೂ ಬೆಳ್ಮಣ್ ನಲ್ಲಿ ಸಂಭವಿಸಿದ ಅಪಘಾತಕ್ಕೂ ನಿಟ್ಟೆ ಇಂಜಿನೀಯರಿಂಗ್ ವಿದ್ಯಾರ್ಥಿಗಳೇ ಕಾರಣರಾಗಿದ್ದರು. ವಿದ್ಯಾರ್ಥಿಗಳ ವೇಗಕ್ಕೆ ಕಡಿವಾಣ ಅವಶ್ಯ ಎಂದು ಸಾರ್ವಜನಿಕ ವಲಯದಿಂದ ಅಭಿಪ್ರಾಯ ಕೇಳಿಬರುತ್ತಿದೆ.




























