ರಾಮನುಂ ಭರತನುಂ ತಬ್ಬಿಕೊಂಡತ್ತಂದು|
ಪ್ರೇಮಾಶ್ರುವುಕ್ಕಿ ನದಿಯಾಗಿ ಪರಿವಂದು||
ಸೀಮೆಯಂ ಮುಟ್ಟಿತಲ ಬಾಂಧವ್ಯ ಸೌಂದರ್ಯ|
ಕ್ಷೇಮವದು ಜೀವನಕೆ -ಮಂಕುತಿಮ್ಮ|
ರಾಮ, ಭರತರಿಬ್ಬರೂ ಪ್ರೀತಿಯಿಂದ ತಬ್ಬಿಕೊಂಡು ಪರಸ್ಪರರಿಗಾಗಿ ಕಣ್ಣೀರು ಹರಿಸಿದ ಸಂದರ್ಭ ಇಬ್ಬರೂ ಭಾವೋದ್ವೇಗದಿಂದ ಸುರಿಸಿದ ಪ್ರೀತಿಯ ಕಣ್ಣೀರುವುಕ್ಕಿ ನದಿಯಾಗಿ ಹರಿದದ್ದು ಸಹೋದರ ಬಾಂಧವ್ಯದ ಸೌಂದರ್ಯವನ್ನು ತುತ್ತತುದಿಗೆ ಮುಟ್ಟಿಸಿತ್ತು. ಇಂತಹ ಅನನ್ಯ ಕ್ಷಣ ಮಾನವನ ಬದುಕಿಗೆ ಕ್ಷೇಮವನ್ನು ಉಂಟುಮಾಡುತ್ತದೆ ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ನಮ್ಮ ಬದುಕಿನಲ್ಲಿ ಅಣ್ಣ-ತಮ್ಮನ ಸಂಬಂಧಕ್ಕೆ ವಿಶೇಷವಾದ ಪ್ರಾಶಸ್ತ್ಯವಿದೆ. ಆದರೆ “ಹುಟ್ಟುಹುಟ್ಟುತ ಅಣ್ಣತಮ್ಮಂದಿರು; ಬೆಳೆಬೆಳೆಯುತ್ತಾ ದಾಯಾದಿಗಳು” ಎಂಬ ಗಾದೆಯಂತೆ ಎಳೆತನದಲ್ಲಿ ಅನ್ಯೋನ್ಯವಾಗಿರುತ್ತಿದ್ದ ಅಣ್ಣತಮ್ಮಂದಿರು ದೊಡ್ಡವರಾಗುತ್ತಾ ಹೋದಂತೆ ದಾಯಾದಿಗಳಂತೆ ಕಚ್ಚಾಡುವುದನ್ನು ಕಾಣಬಹುದು. ಅದಕ್ಕಾಗಿಯೇ ಡಿವಿಜಿಯವರು ಸವತಿ ಮಕ್ಕಳಾದರೂ ಯಾವ ಸ್ವಾರ್ಥವಿಲ್ಲದೆ ಪ್ರೀತಿಯಿಂದ ಅಪ್ಪಿಕೊಂಡು ಪರಸ್ಪರರಿಗಾಗಿ ಕಣ್ಣೀರು ಹರಿಸಿದ ರಾಮಭರತರ ಉದಾಹರಣೆಯನ್ನು ನಮಗೆ ಕೊಡುತ್ತಾರೆ.
ಭಾವನೆಗಳೆ ಬದುಕನ್ನು ಪೋಷಿಸುವುದು ಮತ್ತು ಬಾಂಧವ್ಯವನ್ನು ಬೆಸೆಯುವುದು. ಇಂದಿನ ಆಧುನಿಕ ಬದುಕನ್ನು ಅವಲೋಕಿಸುವಾಗ ಭಾವನೆಗಳನ್ನು ಬದಿಗೆ ಸರಿಸಿ ಜೀವನ ವ್ಯಾವಹಾರಿಕವಾಗುತ್ತಿದೆ ಎಂದು ಎನ್ನಿಸಿದ್ದುಂಟು. ಇದಕ್ಕೆ ಮುಖ್ಯ ಕಾರಣ ನಾನು ಎನ್ನುವ ಅಹಂಕಾರ ಮತ್ತು ನನ್ನದು ಎನ್ನುವ ಮಮಕಾರ. ಇಂತಹ ಸಂದರ್ಭದಲ್ಲಿ ನಿರ್ಮೋಹ ಮತ್ತು ನಿರಹಂಕಾರದ ಪ್ರತೀಕವಾಗಿರುವ ರಾಮ ಮತ್ತು ಭರತರು ನಮಗೆ ಆದರ್ಶಪ್ರಾಯರಾಗುತ್ತಾರೆ.

ಕೈಕೇಯಿ ತನ್ನ ಮಗನಿಗೆ ರಾಜ್ಯ ಸಿಗಬೇಕು; ಅವನು ರಾಜನಾಗಿ ಮೆರೆಯಬೇಕು ಎನ್ನುವ ಮಾತೃ ಸಹಜ ಆಸೆಯಿಂದ ಏನೇನೋ ತಂತ್ರವನ್ನು ಮಾಡಿ ಅದು ಕೈಗೂಡುವಂತೆ ಮಾಡಿದರೂ ಮಗ ಭರತ ಅದನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾನೆ. ತಾಯಿಯ ಆಸೆಗಿಂತ ಅವನು ಅಣ್ಣತಮ್ಮನ ಬಾಂಧವ್ಯ ಮುಖ್ಯವೆಂದು ಭಾವಿಸುತ್ತಾನೆ. ನ್ಯಾಯವಾಗಿ ಅಣ್ಣನಿಗೆ ದೊರಕಬೇಕಾಗಿದ್ದನ್ನು ತಾನು ಬಯಸಿದ್ದರೆ ಅದು ತಪ್ಪಾಗುತ್ತದೆ ಎನ್ನುವ ನೈತಿಕ ಪ್ರಜ್ಞೆ ಅವನಲ್ಲಿ ಜಾಗ್ರತಗೊಳ್ಳುತ್ತದೆ. ಕಾಡಿಗೆ ಹೋಗಿ ಅಣ್ಣನಲ್ಲಿ ನಿನ್ನದೇ ರಾಜ್ಯ ನೀನೇ ರಾಜನಾಗಬೇಕು ಎಂದು ಬೇಡಿಕೊಳ್ಳುತ್ತಾನೆ. “ಇಲ್ಲಿ ರಾಜ್ಯದ ಒಡೆತನದ ಪ್ರಶ್ನೆಗಿಂತ ತಂದೆಯ ಮಾತನ್ನು ಪಾಲಿಸುವುದು ಮುಖ್ಯ” ಎಂದು ರಾಮ ಭಾವಿಸುತ್ತಾನೆ. ಆ ಪ್ರಕಾರವಾಗಿ ನೀನೆ ರಾಜ ಎಂದು ನಿಸ್ವಾರ್ಥ ಮನಸ್ಸಿನಿಂದ ರಾಮನಾಡುವ ಮಾತುಗಳು ಅಣ್ಣನ ಹಿರಿತನಕ್ಕೆ ಸಾಕ್ಷಿಯಾಗುತ್ತವೆ.
ತಮ್ಮನ ವಿಧೇಯತೆ ಅಣ್ಣನ ಪ್ರಜ್ಞಾವಂತಿಕೆಯ ಹಿರಿತನಕ್ಕೆ ಉದಾಹರಣೆಯಾಗಿರುವ ರಾಮ-ಭರತರ ಪ್ರೀತಿಯ ಅಪ್ಪುಗೆ ಮಾನವನ ಬದುಕಿಗೆ ಆದರ್ಶಪ್ರಾಯವಾದಾಗ ಜೀವನಕ್ಕೆ ಕ್ಷೇಮ ಆಗುತ್ತದೆ ಎನ್ನುವುದೇ ಡಿವಿಜಿಯವರ ಆಶಯ. ತಮಗಾಗಿ ಎಲ್ಲರೂ ಕಣ್ಣೀರು ಸುರಿಸುತ್ತಾರೆ ಆದರೆ ಇತರರಿಗಾಗಿ ಕಣ್ಣೇರು ಹರಿಸುವವರು ಎಲ್ಲೋ ಒಂದೊಂದು ಕಡೆ ಸಿಗಬಹುದು.ಭಾವನೆಗೆ;ಬಾಂಧವ್ಯಕ್ಕೆ ಬೆಲೆ ಕೊಟ್ಟಷ್ಟೂ ಬದುಕಿನ ಮೌಲ್ಯ ಹೆಚ್ಚುತ್ತದೆ ಎನ್ನುವುದನ್ನು ಎಂದಿಗೂ ಮರೆಯಬಾರದು.ಅಣ್ಣತಮ್ಮನ ಪ್ರೀತಿಗೆ ರಾಮ-ಭರತರಿಗಿಂತ ಉತ್ತಮ ಮಾದರಿ ಬೇರೆ ದೊರೆಯಲಾರದು. ಇದನ್ನು ಅರ್ಥಮಾಡಿಕೊಂಡು ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?







































