ಬೆಂಗಳೂರು : ನಾಡಿನಾದ್ಯಂತ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆಮಾಡಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ಗವಿಪುರದಲ್ಲಿರುವ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ದೇವಾಲಯ ಇಂದು ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಗವಿಗಂಗಾಧರ ದೇವಸ್ಥಾನದ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಲಿದ್ದು, ಈ ವಿಶೇಷ ಕೌತುಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೂರ್ಯ ದಕ್ಷಿಣಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ ಸೂರ್ಯ ಕಿರಣವು ಶಿವ ಲಿಂಗವನ್ನು ಸ್ಪರ್ಶಿಸಲಿದೆ. ಹೀಗಾಗಿ ಇಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಸಂಜೆ 5.20 ರಿಂದ 5.23 ನಿಮಿಷದವರೆಗೆ ಸೂರ್ಯರಶ್ಮಿ ಗವಿಗಂಗಾಧರೇಶ್ವರ ಲಿಂಗ ಸ್ಪರ್ಶಿಸಲಿದೆ. ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಆರಂಭವಾಗಿದ್ದು, ಮುಂಜಾನೆಯಿಂದಲೇ ಭಕ್ತರ ದಂಡು ಹರಿದುಬರುತ್ತಿದೆ. ಭಕ್ತರು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇವಾಲಯದ ಹೊರಭಾಗದಲ್ಲಿ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. 2 ಎಲ್ಇಡಿ ಹಾಗೂ 5 ಟಿವಿಗಳ ವ್ಯವಸ್ಥೆ ಮಾಡಲಾಗಿದೆ. ದೇವರನ್ನು ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಅರ್ಚಕರನ್ನು ಬಿಟ್ಟರೆ ಇನ್ನುಳಿದ ಯಾರಿಗೂ ದೇವಸ್ಥಾನ ಒಳ ಪ್ರವೇಶಕ್ಕೆ ಅನುಮತಿ ನೀಡಲಾಗಿಲ್ಲ.





































