ಕುವೆಂಪು ಅವರ ಪಂಚಸೂತ್ರ ಬದುಕಿಗೆ ಸ್ಫೂರ್ತಿ – ನರಸಪ್ಪ
ಕಾರ್ಕಳ : ವಿಶ್ವಮಾನವತೆಯ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರು ಮನುಜ ಮತ, ವಿಶ್ವ ಪಥ, ಸರ್ವೋದಯ, ಸಮನ್ವಯ, ಪೂರ್ಣ ದಷ್ಟಿ ಎಂಬ ಪಂಚ ಸೂತ್ರ ತಿಳಿಸಿದವರು. ಈ ಸೂತ್ರಗಳು ಶಾಂತಿಯುತ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ಕಾರ್ಕಳ ತಹಶೀಲ್ದಾರ್ ನರಸಪ್ಪ ಹೇಳಿದರು.
ಅವರು ಡಿ. 29ರಂದು ನಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸುಸಂಸ್ಕೃತ ನಾಗರಿಕ – ಡಿ. ಆರ್. ರಾಜು
ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಉದ್ಯಮಿ ಡಿ. ಆರ್. ರಾಜು, ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಶಿಕ್ಷಣ ದೊರೆತಾಗ ಸುಸಂಸ್ಕೃತ ಸಮಾಜ ನಿರ್ಮಾಣವಾಗುವುದು ಎಂದರು.
ಉದ್ಯಮಿ ಸತೀಶ್ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಉಮಾನಾಥ್, ಉಪಾಧ್ಯಕ್ಷೆ ಸುರೇಖಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ನಾಗೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸನ್ನು ವಂದಿಸಿದರು.
ಕೀಳರಿಮೆ ಬೇಡ – ಲೋಕೇಶ್
ಭಿತ್ತಿಪತ್ರ ಅನಾವರಣಗೊಳಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಎ. ಲೋಕೇಶ್, ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಿವೆ. ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಯಾವುದೇ ರೀತಿಯ ಕೀಳರಿಮೆ ಬೇಡ. ಬದಲಾಗಿ ಹೆಮ್ಮೆ ಇರಲಿ ಎಂದು ಹೇಳಿದ ಅವರು ನನ್ನ ಮಕ್ಕಳೂ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ತಿಳಿಸಿದರು.






























































