ರಾಜಪಥ-ಭಾರತದ ರಜತ ಪರದೆಯ ಮೊದಲ ನಾಯಕಿ ದೇವಿಕಾರಾಣಿ

ಭಾರತೀಯ ಸಿನಿಮಾ ರಂಗ ನೂರು ವರ್ಷ ಪೂರ್ತಿ ಮಾಡಿದಾಗ ಪರಿಣತರು ಒಂದು ಕಡೆ ಕೂತು ಭಾರತೀಯ ಸಿನೆಮಾ ರಂಗದ ಜನಪ್ರಿಯತೆಗೆ ಕಾರಣರಾದವರ ಹೆಸರುಗಳನ್ನು ಪಟ್ಟಿ ಮಾಡಲು ತೊಡಗಿದರು. ಆಶ್ಚರ್ಯ ಏನೆಂದರೆ ಅವರೆಲ್ಲರು ಮಾಡಿದ ಪಟ್ಟಿಯಲ್ಲಿ ಒಂದು ಹೆಸರು ತುತ್ತತುದಿಯಲ್ಲಿ ಬಂದು ನಿಂತಿತು. ಆ ಹೆಸರು ಖಂಡಿತವಾಗಿ ದೇವಿಕಾರಾಣಿ ರೋರಿಚ್ ಆಗಿತ್ತು.
ಆಕೆ ಭಾರತದ ಸಿನೆಮಾ ರಂಗ ಕಂಡ ಮೊತ್ತಮೊದಲ ಆಧುನಿಕ ನಾಯಕಿ ಎಂಬ ಕೀರ್ತಿಯನ್ನು ಪಡೆದಿದ್ದಾರೆ.

ದೇವಿಕಾ ರಾಣಿ ಜನಿಸಿದ್ದು ಆಂಧ್ರಪ್ರದೇಶದ ವಿಶಾಖಪಟ್ಟಣದ ವಾಲ್ಟೇರ್ ಎಂಬಲ್ಲಿ(1908 ಮಾರ್ಚ್ 30). ತಂದೆ ಬಹುಪ್ರಸಿದ್ದ ಸರ್ಜನ್ ಆಗಿದ್ದವರು. ಆಕೆ ಮೂಲತಃ ಬಂಗಾಳಿ. ಸಂಬಂಧದಲ್ಲಿ ರವೀಂದ್ರನಾಥ್ ಠಾಗೋರ್ ಅವರ ಮರಿ ಮೊಮ್ಮಗಳು. ಶ್ರೀಮಂತಿಕೆ ಅವರ ಮನೆಯ ಪಡಸಾಲೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿತ್ತು. ಅದರಿಂದಾಗಿ ಆಕೆ ತನ್ನ ಒಂಬತ್ತನೆಯ ವಯಸ್ಸಿಗೆ ಲಂಡನ್ನಿಗೆ ಹೋಗಿ ನಾಟಕ, ಸಂಗೀತ ಶಾಲೆಯನ್ನು ಸೇರಿದರು. ರಂಗಭೂಮಿ, ವಾಸ್ತು ಶಾಸ್ತ್ರ, ವಸ್ತ್ರ ವಿನ್ಯಾಸ, ರಂಗಸಜ್ಜಿಕೆ, ಪ್ರಸಾದನ ಕಲೆ ಎಲ್ಲವನ್ನೂ ಕಲಿತರು.

ಅದೇ ಹೊತ್ತಿಗೆ ಬ್ಯಾರಿಸ್ಟರ್ ಆಗುವ ಕನಸು ಹೊತ್ತು ಲಂಡನ್ನಿಗೆ ಬಂದಿದ್ದ ಹಿಮಾಂಶು ರಾಯ್ ಎಂಬ ತರುಣನ ಪ್ರೀತಿಯ ಬಲೆಗೆ ಬಿದ್ದರು. ಅವರ ಮದುವೆ ಕೂಡ ನಡೆದು ಹೋಯಿತು. ಆತ ದೇವಿಕಾ ಅವರಿಗಿಂತ 16 ವರ್ಷ ದೊಡ್ಡವನು ಮತ್ತು ಅವನಿಗೆ ಮೊದಲೇ ಮದುವೆ ಆಗಿ ಒಂದು ಮಗು ಕೂಡ ಇತ್ತು. ಗಂಡ, ಹೆಂಡತಿ ಇಬ್ಬರೂ ಜರ್ಮನಿಗೆ ಹೋಗಿ ಸಿನೆಮಾ ನಿರ್ಮಾಣದ ಕಲೆಯನ್ನು ಕಲಿತರು. ದೇವಿಕಾರಾಣಿ ಆಗ ಹಲವು ಅಮೆರಿಕನ್‌ ಮತ್ತು ಜರ್ಮನ್ ಭಾಷೆಯ ಸಿನೆಮಾಗಳಲ್ಲಿ ಅಭಿನಯ ಮಾಡಿದರು.

A Throw Of Dice ಎಂಬ ಇಂಗ್ಲಿಷ್ – ಹಿಂದಿ ಭಾಷೆಯ ಸಿನೆಮಾದಲ್ಲಿ ಆಕೆ ಮೊದಲ ಬಾರಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಾರೆ. ಅದರ ಬೆನ್ನಿಗೆ ‘ಕರ್ಮಾ’ ಎಂಬ ಸಿನೆಮಾದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಜತೆಯಾಗಿ ಅಭಿನಯ ಮಾಡುತ್ತಾರೆ. ಆಕೆಯ ಸ್ಕ್ರೀನ್ ಅಪಿಯರೆನ್ಸ್ ಮತ್ತು ಸೌಂದರ್ಯ ನೋಡಿದ ಲಂಡನ್ನಿನ ಡೈಲಿ ಸರ್ಚ್ ಎಂಬ ಜನಪ್ರಿಯ ಪತ್ರಿಕೆ ‘ಸೌಂದರ್ಯದ ಸುನಾಮಿ’ ಎಂದು ಆಕೆಯನ್ನು ಬಣ್ಣಿಸಿತು.’ಬೆಳ್ಳಿ ಪರದೆ ಅಲಂಕರಿಸಿದ ಅತಿ ಸುಂದರ ಮಹಿಳೆ ಎಂದರೆ ದೇವಿಕಾರಾಣಿ ಮಾತ್ರ’ ಎಂದು ಲಂಡನ್ನಿನ ಪತ್ರಿಕೆಗಳು ಹೊಗಳಿ ಬರೆದವು. ವಿದೇಶದಲ್ಲಿ ಬಂಗಾರದಂತಹ ಅವಕಾಶಗಳು ಇದ್ದರೂ ಒನ್ ಫೈನ್ ಡೇ ಗಂಡ ಮತ್ತು ಹೆಂಡತಿ ಗಟ್ಟಿ ನಿರ್ಧಾರ ಮಾಡಿ ಭಾರತಕ್ಕೆ ಬರುತ್ತಾರೆ.

ಬಾಂಬೆ ಟಾಕೀಸ್ – ಭಾರತದ ಮೊದಲ ಸ್ಟುಡಿಯೋ ಸ್ಥಾಪನೆ

ಆಗ ಭಾರತೀಯ ಸಿನೆಮಾ ರಂಗವಿನ್ನೂ ಅಂಬೆಗಾಲು ಇಡುತಿತ್ತು. ಸಂಪ್ರದಾಯಸ್ಥ ಕುಟುಂಬದ ಹೆಣ್ಮಕ್ಕಳು ಸಿನೆಮಾದಲ್ಲಿ ಅಭಿನಯಿಸಲು ಹಿಂದೇಟು ಹಾಕುತ್ತಿದ್ದರು. ಸಿನೆಮಾ ನಟಿಯರನ್ನು ಜನರು ಬಹಳ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು. ತನ್ನ ಬಾಲ್ಯದಿಂದಲೂ ಆಧುನಿಕ ಮನೋಭಾವದಲ್ಲಿ ಬೆಳೆದಿದ್ದ ದೇವಿಕಾರಾಣಿ ಇದರಿಂದ ತುಂಬಾನೆ ನೊಂದು ಕೊಂಡರು.

ಭಾರತದಲ್ಲಿ ಸುಸಜ್ಜಿತ ಫಿಲ್ಮ್ ಸ್ಟುಡಿಯೋ ಇರಲಿಲ್ಲ. ಅದನ್ನು ಮನಗಂಡು ಹಿಮಾಂಶು ಮತ್ತು ದೇವಿಕಾ ಜತೆಗೂಡಿ ಮುಂಬಯಿಯ ಮಲಾಡ್ ಎಂಬಲ್ಲಿ 18 ಎಕರೆ ಜಾಗ ಖರೀದಿಸಿ ಭಾರತದ ಮೊತ್ತ ಮೊದಲ ಸ್ಟುಡಿಯೋ ‘ಬಾಂಬೆ ಟಾಕೀಸ್’ ಸ್ಥಾಪನೆ ಮಾಡಿದರು. ಭಾರತದ ಮೊದಲ ಅತ್ಯಾಧುನಿಕ ಸ್ಟುಡಿಯೋ ಅದು. ಇದರಿಂದ ಭಾರತದಲ್ಲಿ ಸಿನೆಮಾ ನಿರ್ಮಾಣಕ್ಕೆ ಭಾರಿ ವೇಗ ದೊರೆಯಿತು.

ದೇವಿಕಾರಾಣಿ ಭಾರತಕ್ಕೆ ಹಿಂದಿರುಗಿ ಬಂದ ನಂತರ ‘ಅಚೂತ್‌ ಕನ್ಯಾ’ ಎಂಬ ಕ್ರಾಂತಿಕಾರಿಯಾದ ಸಿನೆಮಾದಲ್ಲಿ ಅಭಿನಯ ಮಾಡಿದರು. ಒಬ್ಬ ಅಸ್ಪೃಶ್ಯ ಹುಡುಗಿ ಮೇಲ್ಜಾತಿಯ ಹುಡುಗನನ್ನು ಪ್ರೀತಿ ಮಾಡುವ ಕಥೆ ಅದು. ಅಶೋಕ ಕುಮಾರ್ ಮೊದಲ ಬಾರಿ ಹೀರೊ ಆದ ಸಿನೆಮಾ ಅದು. ಆ ಸಿನೆಮಾ ರಾಷ್ಟ್ರಪ್ರಶಸ್ತಿ ಗೆದ್ದಿತು. ದೇವಿಕಾರಾಣಿಯ ಸೌಂದರ್ಯ ಮತ್ತು ಅಭಿನಯ ದೇಶದಲ್ಲಿ ಮನೆ ಮಾತಾಯಿತು. ಪಂಡಿತ್ ಜವಾಹರಲಾಲ್ ನೆಹರೂ ಅವರು ರಾಕ್ಸಿ ಚಿತ್ರಮಂದಿರದಲ್ಲಿ ಅಚೂತ್ ಕನ್ಯಾ ಸಿನೆಮಾ ನೋಡಿ ‘ನಾನು ದೇವಿಕಾರಾಣಿಯ ದೊಡ್ಡ ಅಭಿಮಾನಿ’ ಎಂದು ಹೇಳಿದ್ದರು. ಅದೇ ಅಶೋಕ ಕುಮಾರ್ – ದೇವಿಕಾರಾಣಿ ಜೋಡಿ ಮುಂದೆ 10 ಸಿನೆಮಾಗಳಲ್ಲಿ ಜೊತೆ ಆಗಿ ನಟಿಸಿತು.

ಮುಂದೆ ಬಾಂಬೆ ಟಾಕೀಸ್ ಬ್ಯಾನರಿನಲ್ಲಿ ಒಂದಷ್ಟು ಹಿಂದಿ, ಬೆಂಗಾಳಿ ಸೂಪರ್ ಹಿಟ್ ಸಿನೆಮಾಗಳು ತೆರೆಗೆ ಬಂದವು. ಜೀವನ್ ನಯ್ಯಾ, ಜವಾನಿ ಕಿ ಹವಾ, ನಿರ್ಮಲಾ, ಜನ್ಮಭೂಮಿ, ಪ್ರೇಮ್‌ ಸನ್ಯಾಸ್‌, ಇಜ್ಜತ್, ದುರ್ಗಾ, ಸಾವಿತ್ರಿ, ಜೀವನ್ ಪ್ರಭಾತ್, ವಚನ್, ಅಂಜಾನ್, ಹಮಾರಿ ಬಾತ್…. ಹೀಗೆ ಒಂದಕ್ಕಿಂತ ಒಂದು ವಿಭಿನ್ನವಾದ ಪಾತ್ರಗಳು. ಇಡೀ ಭಾರತ ದೇವಿಕಾರಾಣಿಯ ಪ್ರತಿಭೆ ಮತ್ತು ಸೌಂದರ್ಯಕ್ಕೆ ಫಿದಾ ಆಗಿತ್ತು.

ಅಶೋಕ್ ಕುಮಾರ್, ದಿಲೀಪ್ ಕುಮಾರ್, ಲೀಲಾ ಚೆಟ್ನೀಸ್, ದುರ್ಗಾ ಕೋಟೆ ಮೊದಲಾದ ಪ್ರಸಿದ್ಧ ನಟ, ನಟಿಯರು ಬಾಂಬೆ ಟಾಕೀಸ್ ಬ್ಯಾನರಿನ ಸಿನೆಮಾದಲ್ಲಿ ಮೊದಲು ಅಭಿನಯಿಸಿದ್ದರು. ತನ್ನದೇ ಅಭಿನಯದ ಹಲವು ಸಿನೆಮಾಗಳಲ್ಲಿ ಆಕೆ ಹಲವು ಹಾಡುಗಳನ್ನು ಕೂಡ ಹಾಡಿದ್ದಾರೆ. ಬೊಂಬೆ ಟಾಕೀಸ್ ಬ್ಯಾನರಿನಲ್ಲಿ ಆಕೆ 15 ಅತಿ ಜನಪ್ರಿಯ ಸಿನೆಮಾಗಳನ್ನು ನಿರ್ಮಾಣ ಕೂಡ ಮಾಡಿದ್ದರು.

ದೇವಿಕಾರಾಣಿ ರೋರಿಕ್ ಆದರು

ಮುಂದೆ ಹಿಮಾಂಶು ರಾಯ್ ನಿಧನರಾದ ನಂತರ ಸಿನೆಮಾ ಚಟುವಟಿಕೆಗಳಿಗೆ ಬೆನ್ನು ಹಾಕಿದ ದೇವಿಕಾರಾಣಿ ಜನಪ್ರಿಯತೆಯ ತುತ್ತ ತುದಿಯಲ್ಲಿ ಇರುವಾಗಲೇ ನಿವೃತ್ತರಾದರು. ತನ್ನ ಇಳಿವಯಸ್ಸಿನಲ್ಲಿ ರಷ್ಯದ ಲೆಜೆಂಡ್ ಚಿತ್ರ ಕಲಾವಿದ ಸ್ವೆತೋಸ್ಲಾವ್ ರೋರಿಕ್ ಅವರನ್ನು ಮದುವೆಯಾದ ನಂತರ ಆಕೆ ದೇವಿಕಾರಾಣಿ ರೋರಿಕ್ ಎಂದು ಕರೆಸಿಕೊಂಡರು.

1958ರ ಪದ್ಮಶ್ರೀ ಪ್ರಶಸ್ತಿ ಆಕೆಗೆ ಒಲಿದು ಬಂದಿತು. 1970ರಲ್ಲಿ ಸಿನೆಮಾ ರಂಗಕ್ಕೆ ಅತಿ ಮಹತ್ವದ ಕೊಡುಗೆ ನೀಡಿದ (ಕೇವಲ) ಒಬ್ಬರಿಗೆ ನೀಡಲಾಗುವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಸ್ಥಾಪನೆ ಆಯಿತು. ಮೊದಲ ವರ್ಷದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವವನ್ನು ಆಕೆ ಪಡೆದುಕೊಂಡು ಕೀರ್ತಿಯ ಶಿಖರ ಏರಿದರು. 1990ರಲ್ಲಿ ಆಕೆಗೆ ಸೋವಿಯೆತ್ ಲ್ಯಾಂಡ್ ನೆಹರೂ ಪುರಸ್ಕಾರ ಕೂಡ ದೊರೆಯಿತು.
1994 ಮಾರ್ಚ್ 9ರಂದು ದೇವಿಕಾ ರಾಣಿ ತನ್ನ ಇಹಲೋಕದ ವ್ಯಾಪಾರ ಮುಗಿಸಿದರು.

ಭರತ ವಾಕ್ಯ

ಭಾರತೀಯ ಸಿನಿಮಾ ರಂಗದ ಮೊದಲ ದಿನಗಳಲ್ಲಿ ಸಿನೆಮಾಗಳಿಗೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿ ಪಡೆದು ದೇವಿಕಾರಾಣಿ ಐಕಾನ್ ಆದರು. ಅವರಿಗೆ ನಮ್ಮ ಶ್ರದ್ಧಾಂಜಲಿ.















































































































































error: Content is protected !!
Scroll to Top