ಸೈದ್ದಾಂತಿಕ ಜ್ಞಾನದೊಂದಿಗೆ ಪ್ರಾಯೋಗಿಕ ಜ್ಞಾನವನ್ನೂ ಹೊಂದುವುದು ಅವಶ್ಯ : ವಿನಯ್ ಹೆಗ್ಡೆ
ಕಾರ್ಕಳ : ಸಂಸ್ಥೆಯ ಇಲೆಕ್ಟ್ರಿಕಲ್ ವಿಭಾಗವು ಸತತ 12 ವರ್ಷಗಳಿಂದ ನಡೆಸುತ್ತಾ ಬಂದಿರುವ ‘ಎಲಿಕ್ಸಿರ್’ ಎಂಬ ಮಾದರಿ ವಸ್ತು ಪ್ರದರ್ಶನವು ವಿಭಾಗದಿಂದ ಸಂಶೋಧನೆಗೆ ಸಿಗುತ್ತಿರುವ ಪ್ರೋತ್ಸಾಹಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗದು. ವಿದ್ಯಾರ್ಥಿಗಳು ಪ್ರಸ್ತುತ ವ್ಯವಸ್ಥೆಯಲ್ಲಿ ಇಂಜಿನಿಯರಿಂಗ್‌ನ ಸೈದ್ದಾಂತಿಕ ಜ್ಞಾನದೊಂದಿಗೆ ಪ್ರಾಯೋಗಿಕ ಜ್ಞಾನವನ್ನೂ ಸಂಪಾದಿಸಿಕೊಳ್ಳುವುದು ಅವಶ್ಯ ಎಂದು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ನ. 27 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ವಿಭಾಗವು ಹಳೆ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ‘ಎಲಿಕ್ಸಿರ್ 2023’ ವಿದ್ಯಾರ್ಥಿಗಳ ಮಾದರಿ ವಸ್ತು ಪ್ರದರ್ಶನದ ಹನ್ನೆರಡನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ರೀತಿ ಸಂಸ್ಥೆಯ ಬೇರೆ ವಿಭಾಗಗಳಲ್ಲೂ ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ಪ್ರವೇಶಾತಿ ಹಾಗೂ ಉದ್ಯೋಗಾವಕಾಶಗಳು ಇನ್ನಷ್ಟು ತೆರೆದುಕೊಳ್ಳುತ್ತದೆ. ಇಂತಹ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗುತ್ತವೆ. ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿರುವ ಹಳೆವಿದ್ಯಾರ್ಥಿಗಳ ಕಾರ್ಯವೈಖರಿ ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ವೃದ್ಧಿ – ಮುಗೆರಾಯ
ನಿಟ್ಟೆ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಪ್ರೊ. ಡಾ. ಗೋಪಾಲ್ ಮುಗೆರಾಯ ಮಾತನಾಡುತ್ತಾ, ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ತರಗತಿ ಶಿಕ್ಷಣಕ್ಕಿಂತ ಪ್ರಾಜೆಕ್ಟ್ ಬೇಸ್ಡ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದು ಅಗತ್ಯವೆಂಬುದನ್ನು ಅರಿತಿರುವ ಸಂಸ್ಥೆಯ ಇಲೆಕ್ಟ್ರಿಕಲ್ ವಿಭಾಗವು ಬಹಳ ಉತ್ತಮ ಯೋಜನೆಯನ್ನು ಕೈಗೆತ್ತಿಕೊಂಡಿದೆ. ತಾಂತ್ರಿಕ ಶಿಕ್ಷಣವನ್ನು ಪ್ರತಿ ವಿಭಾಗವೂ ಇದೇ ರೀತಿ ನಡೆಸಬೇಕು. ಹಾಗಾದಾಗ ಮಾತ್ರ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳುತ್ತಿರುವ 114 ಮಾದರಿಗಳು ವಿದ್ಯಾರ್ಥಿಗಳ ಪರಿಶ್ರಮದ ಪ್ರತಿಫಲ. ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯ ಬೆಳವಣಿಗೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಹಳೆವಿದ್ಯಾರ್ಥಿಗಳು ನೀಡುತ್ತಿರುವ ಕೊಡುಗೆ ಸಂತಸದಾಯಕ. ಇಲೆಕ್ಟ್ರಿಕಲ್ ವಿಭಾಗವು ಕ್ಯಾಂಪಸ್‌ನಲ್ಲಿ ನೀರಿನ ಸದ್ಬಳಕೆಗೆ ಸಾಧನ, ಸೋಲಾರ್ ಬೀದಿ ದೀಪಗಳಂತಹ ಉಪಯುಕ್ತ ಪರಿಕರಗಳನ್ನು ತಯಾರಿಸಿ ಕ್ಯಾಂಪಸ್‌ನ ವಿವಿಧ ಅಗತ್ಯಗಳನ್ನು ಪೂರೈಸುತ್ತಿರುವುದು ಅಭಿನಂದನಾರ್ಹ ಎಂದರು.
ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ. ಐ. ರಮೇಶ್ ಮಿತ್ತಂತಾಯ, ಡಾ. ಶ್ರೀನಿವಾಸ ರಾವ್ ಬಿ. ಆರ್., ಎಲಿಕ್ಸಿರ್ ಫ್ಯಾಕಲ್ಟಿ ಸಂಯೋಜಕ ಅನೂಪ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕಂಪೆನಿಗಳ ಮುಖ್ಯಸ್ಥರು, ಪ್ರತಿನಿಧಿಗಳು, ಕಾಲೇಜಿನ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಸೂರ್ಯನಾರಾಯಣ ಕೆ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಎಲಿಕ್ಸೀರ್ ವಿದ್ಯಾರ್ಥಿ ಸಂಯೋಜಕ ವಿಶ್ವಕೀರ್ತಿ ಎಂ. ಭಟ್ ವಂದಿಸಿದರು.






























































