ಕಾಂಗ್ರೆಸ್ಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಅವ್ಯವಹಾರ ಆರೋಪ
ಹೊಸದಿಲ್ಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೂಡಿಕೆ ಮತ್ತು ಬೆಂಬಲ ಇರುವ ಯಂಗ್ ಇಂಡಿಯನ್ ಸಂಸ್ಥೆಯ ಮಾಲೀಕತ್ವದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ 751.9 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ. ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತಿತರರು ಆರೋಪಿಗಳಾಗಿದ್ದು, ಜಾಮೀನಿನಲ್ಲಿ ಹೊರಗಿದ್ದಾರೆ.
ಹಣಕಾಸು ತನಿಖಾ ಸಂಸ್ಥೆಯು ತನಿಖೆಯ ಸಮಯದಲ್ಲಿ, ಅಸೋಸಿಯೇಟೆಡ್ ಜರ್ನಲ್ಸ್ ಲಿ. (ಎಜೆಎಲ್) ದೆಹಲಿ, ಮುಂಬೈ ಮತ್ತು ಲಕ್ನೋದಂತಹ ಅನೇಕ ನಗರಗಳಲ್ಲಿ 661.69 ಕೋಟಿ ರೂಪಾಯಿಗಳಷ್ಟು ಸ್ಥಿರಾಸ್ತಿಗಳ ರೂಪದಲ್ಲಿ ಅಕ್ರಮ ಹಣವನ್ನು ಹೂಡಿಕೆ ಮಾಡಿದೆ ಎಂದು ಆರೋಪಿಸಿತ್ತು. ಯಂಗ್ ಇಂಡಿಯನ್ ಕಂಪನಿಯು ಎಜೆಎಲ್‌ನ ಈಕ್ವಿಟಿ ಷೇರುಗಳಲ್ಲಿ ಹೂಡಿಕೆಯ ರೂಪದಲ್ಲಿ 90.21 ಕೋಟಿ ರೂಪಾಯಿ ಅಕ್ರಮ ಹಣವನ್ನು ಹೊಂದಿದೆ ಎಂದು ಜಾರಿ ನಿರ್ದೇಶನಾಲಯ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಜಾರಿ ನಿರ್ದೇಶನಾಲಯವು ಈ ಹಿಂದೆ ಇದೇ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಮತ್ತು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿ ಹೇಳಿಕೆಗಳನ್ನು ದಾಖಲಿಸಿತ್ತು. ದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಖಾಸಗಿ ದೂರು ಸ್ವೀಕರಿಸಿದ್ದು, ಅದರ ಆಧಾರದ ಮೇಲೆ 2014ರ ಜೂನ್ 26ರಂದು ನ್ಯಾಷನಲ್ ಹೆರಾಲ್ಡ್ ವಿರುದ್ಧ ಮನಿ ಲಾಂಡರಿಂಗ್ ತನಿಖೆಗೆ ಆದೇಶ ನೀಡಿತ್ತು. ಅದರಂತೆ ಈ ತನಿಖೆ ಪ್ರಾರಂಭವಾಗಿದೆ.
ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತಿದೆ. ಹೀಗಾಗಿ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಹತಾಶೆಯ ಕ್ರಮ ಇದು ಎಂದು ಕಾಂಗ್ರೆಸ್ ಹೇಳಿದೆ.


































































