ಉದ್ಯೋಗಿಗಳಿಗೆ ಸೋಲಿನ ನೋವಿನಿಂದ ಹೊರಬರಲು ಕಂಪನಿ ಕ್ರಮ
ಹೊಸದಿಲ್ಲಿ : ಭಾರತ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಸೋತಾಗ ಇಡೀ ದೇಶ ದುಃಖದಲ್ಲಿ ಮುಳುಗಿತ್ತು.ಚಿಕ್ಕಮಕ್ಕಳು ಕೂಡ ಟಿವಿ ಮುಂದೆ ಕುಳಿತು ಅಳುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿದೆ. ಕ್ರಿಕೆಟ್ ಯಾವ ಪರಿ ಈ ದೇಶವನ್ನು ಆವರಿಸಿದೆ ಎನ್ನುವುದಕ್ಕೆ ಇದು ಒಂದು ನಿದರ್ಶನ ಮಾತ್ರ. ಈ ನಡುವೆ ಗುರುಗಾಂವ್‌ನ ಕಂಪನಿಯೊಂದು ಉದ್ಯೋಗಿಗಳಿಗೆ ವಿಶ್ವಕಪ್ ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲು ಒಂದು ದಿನ ರಜೆ ನೀಡಿದ ವಿಚಾರ ಬೆಳಕಿಗೆ ಬಂದಿದೆ.
ಎಲ್ಲರಂತೆ ಈ ಕಂಪನಿಯ ಉದ್ಯೋಗಿಗಳೂ ಭಾರತದ ಸೋಲಿನಿಂದ ವಿಚಲಿತರಾಗಿದ್ದರು. ಅವರಿಗೆ ಚೇತರಿಸಿಕೊಳ್ಳಲು ಅವಕಾಶ ನೀಡಿ ಕಂಪನಿ ರಜೆ ನೀಡಿದೆ.
ಸೋಲಿನ ನೋವಿನಿಂದ ಹೊರಬರಲಿ ಎಂಬ ಕಾರಣಕ್ಕೆ ಪಂದ್ಯ ಮುಗಿದ ಮರು ದಿನವೇ ರಜೆಯನ್ನು ಘೋಷಿಸಿದೆ. ಈ ಸುದ್ದಿ ಸಖತ್ ವೈರಲ್ ಆಗಿದೆ. ಗುರುಗ್ರಾಮ್ ಮೂಲದ ಮಾರ್ಕೆಟಿಂಗ್ ಮೂವ್ಸ್ ಮತ್ತು ಮಾರ್ಕೆಟಿಂಗ್ ಮೂವ್ಸ್ ಏಜೆನ್ಸಿ ಎಂಬ ಕಂಪನಿ ರಜೆ ಘೋಷಿಸಿತ್ತು. ಉದ್ಯೋಗಿಗಳಿಗೆ ರಜೆ ನೀಡಿರುವ ಮಾಹಿತಿಯನ್ನು ದೀಕ್ಷಾ ಗುಪ್ತಾ ಎಂಬ ಉದ್ಯೋಗಿ ಸೋಷಿಯಲ್ ಮೀಡಿಯಾ ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ನವೆಂಬರ್ 20ರಂದು ನಮ್ಮ ಬಾಸ್ ಒಂದು ದಿನದ ರಜೆಯನ್ನು ನೀಡಿರುವ ಸಂದೇಶ ಕಂಡು ಅಚ್ಚರಿಯಾಗಿದೆ. ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲು ಒಂದು ದಿನ ವಿಶ್ರಾಂತಿ ರಜೆ ಎಂದು ಹೇಳಿದ್ದರು. ಇದು ವಿಶ್ರಾಂತಿ ಮಾತ್ರವಲ್ಲ, ಸೋಲಿನ ನೋವಿನಿಂದ ಚೇತರಿಸಿಕೊಳ್ಳಲು ಮಾನಸಿಕವಾಗಿ ಬಲಿಷ್ಠರಾಗಿ ಮರಳಲು ನೀಡಿದ ರಜೆ. ಹಾಗಾಗಿ ನಮ್ಮ ಬಾಸ್ ಚಿರಾಗ್ ಅಲವಾಧಿ ಬಾಸ್ ಅವರಿಗೆ ಧನ್ಯವಾದಗಳು ಎಂದು ಪೋಸ್ಟ್ನಲ್ಲಿ ದೀಕ್ಷಾ ಗುಪ್ತಾ ಬರೆದುಕೊಂಡಿದ್ದಾರೆ.

































































