ಮನುಷ್ಯನ ಸಂಕಲ್ಪ ಶಕ್ತಿಯೇ ದೊಡ್ಡದು – ಶ್ರೀ ಗುರುದೇವಾನಂದ ಸ್ವಾಮೀಜಿ

ಕಾರ್ಕಳ : ಆರ್ಥಿಕ ಸಹಕಾರದೊಂದಿಗೆ ಪಾರಮಾರ್ಥಿಕ ಶಕ್ತಿ ಸೇರಿದಾಗ ದೇಗುಲ ಜೀರ್ಣೋದ್ಧಾರ ಕಾರ್ಯ ಸುಲಲಿತವಾಗಿ ನೆರವೇರುವುದು ಎಂದು ಒಡಿಯೂರು ಶ್ರೀ ಗುರದೇವದತ್ತ ಸಂಸ್ಥಾನಮ್‌ ಮಠಾಧೀಶ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಅ. 24 ರಂದು ಬೀದಿ ಬೈಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೊದ್ಧಾರಕ್ಕೆ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ಧಾರ್ಮಿಕ ಕಾರ್ಯಗಳಲ್ಲಿ ಸರ್ವರೂ ತೊಡಗಿಸಿಕೊಳ್ಳಬೇಕು. ಮನುಷ್ಯನ ಸಂಕಲ್ಪ ಶಕ್ತಿ ಎಲ್ಲದಕ್ಕಿಂತ ದೊಡ್ಡದು. ಇದಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ. ಈ ಸಂಕಲ್ಪ ಶಕ್ತಿಯೇ ಯಶಸ್ಸಿಗೆ ಪ್ರೇರಣೆ ಎಂದರು.

ದೇಗುಲ ಜೀರ್ಣೋದ್ಧಾರದಿಂದ ಧಾರ್ಮಿಕ ಪ್ರಜ್ಞೆ ವೃದ್ಧಿ – ಸುನಿಲ್ ಕುಮಾರ್
ಶಾಸಕ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿ. ಸುನಿಲ್‌ ಕುಮಾರ್‌ ಮಾತನಾಡಿ, ನೂರಾರು ಕಾಲದಿಂದ ನಮ್ಮ ಪೂರ್ವಜರು ಆರಾಧನೆ ಮಾಡಿಕೊಂಡಿರುವ ಗ್ರಾಮದ ದೇವಸ್ಥಾನ ಜೀರ್ಣೋದ್ಧಾರಗೊಳ್ಳುವುದು ಪುಣ್ಯದ ಕಾರ್ಯ. ನಮ್ಮ ಕಾಲದಲ್ಲಿ ಇಂತಹ ಕಾರ್ಯವಾಗುತ್ತಿರುವುದು ಸುಕೃತ ಫಲವೆಂದರು.

ಧಾರ್ಮಿಕ ನಂಬಿಕೆಯೊಂದಿಗೆ ಬದುಕು
ಕಾಲಕಾಲಕ್ಕೆ ದೇವಸ್ಥಾನಗಳ ಪುನರ್‌ ನಿರ್ಮಾಣ ಕಾರ್ಯ ನಡೆಯುತ್ತ ಬಂದಿದೆ. ತನ್ಮೂಲಕ ಒಳ್ಳೆಯ ಕಾರ್ಯದಲ್ಲಿ ಭಾಗವಹಿಸುವ ಸದಾವಕಾಶ ನಮ್ಮದಾಗಿದೆ. ನಾವೆಲ್ಲರೂ ಧಾರ್ಮಿಕತೆಯ ನಂಬಿಕೆಯೊಂದಿಗೆ ಬದುಕು ಕಟ್ಟಿಕೊಂಡವರು. ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳು ಸಮಾಜದಲ್ಲಿ ಧಾರ್ಮಿಕ ಭಾವನೆಯನ್ನು ವೃದ್ಧಿಸುತ್ತದೆ ಎಂದರು.

ಜನಪ್ರತಿನಿಧಿಯಾಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸರಕಾರದಿಂದ ಅನುದಾನ ಒದಗಿಸುವಲ್ಲಿ ಶ್ರಮಿಸುತ್ತೇನೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಗ್ರಾಮದ ಎಲ್ಲರೂ ಪಾಲ್ಗೊಳ್ಳಬೇಕು. ಇಲ್ಲಿ 1 ಕೋಟಿ ರೂ. ಕೊಟ್ಟರೂ ಭಕ್ತನೆ, 100 ರೂ. ಕೊಟ್ಟರೂ ಭಕ್ತನೆ. ದೇವತಾ ಕಾರ್ಯದಲ್ಲಿ ಎಲ್ಲರೂ ಭಾಗವಹಿಸುವುದು ಮುಖ್ಯವೆಂದರು.

ಭಗವಂತನೆದುರು ಎಲ್ಲರೂ ಸಮಾನರು – ಡಾ. ಸುಧಾಕರ್ ಶೆಟ್ಟಿ
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಮಾತನಾಡಿ, ದೇವರೆದುರು ಎಲ್ಲರೂ ಸಮಾನರು. ದೇವಸ್ಥಾನದಲ್ಲಿ ಮನಸ್ತಾಪವಿರಬಾರದು. ಪ್ರತಿಯೊಬ್ಬನನ್ನೂ ದೇವರು ಒಂದೊಂದು ವಿಶೇಷತೆಯೊಂದಿಗೆ ಸೃಷ್ಟಿಸಿರುತ್ತಾನೆ. ಹಾಗಿರುವಾಗ ಯಾರಿಗೂ ತಮ್ಮತನದ ಬಗ್ಗೆ ಕೀಳರಿಮೆ ಬೇಡ ಎಂದರು.

ಓಣಿಮಜಲು ಜಗನ್ನಾಥ ಶೆಟ್ಟಿ ಅಭಿಮಾನ – 3 ಲಕ್ಷ ರೂ. ದೇಣಿಗೆ
ಜ್ಞಾನಸುಧಾ ಸಂಸ್ಥೆಗೆ ಪ್ರೇರಣೆಯಾಗಿದ್ದ ಓಣಿಮಜಲು ಜಗನ್ನಾಥ ಶೆಟ್ಟಿಯವರ ಮೇಲಿನ ಅಭಿಮಾನದಿಂದಾಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ವತಿಯಿಂದ 3 ಲಕ್ಷ 1 ರೂ. ದೇಣಿಗೆ ನೀಡುವುದಾಗಿ ಸುಧಾಕರ್ ಶೆಟ್ಟಿ ಇದೇ ಸಂದರ್ಭ ತಿಳಿಸಿದರು.

ಕಾರ್ಕಳ ಕ್ಷೇತ್ರದ ದೇವಸ್ಥಾನ, ಬಸದಿ ಅಭಿವೃದ್ಧಿಗಾಗಿ ಶಾಸಕ ಸುನಿಲ್ ಕುಮಾರ್ ಸುಮಾರು 28 ಕೋಟಿ ರೂ. ಅನುದಾನ ಸರಕಾರದಿಂದ ಒದಗಿಸಿರುವುದು ಪ್ರಶಂಸನೀಯವೆಂದವರು ಬಣ್ಣಿಸಿದರು.

ಡಾ. ದಿನೇಶ್ ಚಂದ್ರ ಹೆಗ್ಡೆ, ಸಂತೋಷ್ ವಾಗ್ಳೆ, ರಂಗಪ್ಪ ಕಿಣಿ, ಕರುಣಾಕರ ಹೆಗ್ಡೆ, ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ್‌ ಕುಮಾರ್ ಗುತ್ತುಮನೆ, ಸಹದೇವ ಕಿಣಿ, ದೇವಸ್ಥಾನ ಪ್ರಧಾನ ಅರ್ಚಕ ನರಸಿಂಹ ತಂತ್ರಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಹರೀಶ್‌ ಆಚಾರ್ಯ ಪ್ರಾರ್ಥಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಬಾಲಾಜಿತ್‌ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಕರಾದ ಉದಯ್‌ ಶೆಟ್ಟಿ ಹಾಗೂ ಆನಂದ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ವಕೀಲ ಸದಾನಂದ ಸಾಲಿಯಾನ್‌ ವಂದಿಸಿದರು.































































































































error: Content is protected !!
Scroll to Top