ಬಾಂಗ್ಲಾ ಟೈಗರನ್ನು ಕಡೆಗಣಿಸುವಂತಿಲ್ಲ ಭಾರತ ತಂಡ
ಪುಣೆ: ವಿಶ್ವಕಪ್ ಕೂಟದ ಇಂದಿನ ಪಂದ್ಯಾದಲ್ಲಿ ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ. ಈ ಸಲ ಕೆಲವು ಪಂದ್ಯಗಳು ಅಚ್ಚರಿಯ ಫಲಿತಾಂಶ ನೀಡಿರುವ ಹಿನ್ನೆಲೆಯಲ್ಲಿ ಬಾಂಗ್ಲಾ ಟೈಗರ್ಸ್ ಅನ್ನು ಯಾವ ಕಾರಣಕ್ಕೂ ಭಾರತ ಕಡೆಗಣಿಸುವಂತಿಲ್ಲ. ಅಫ್ಘಾನಿ ಸ್ಥಾನ ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಸೋಲಿನೇಟು ನೀಡಿದ್ದನ್ನು ಮತ್ತು ನೆದರ್ಲೆಂಡ್ಸ್ ವೀರಾವೇಶದ ಎದುರು ದಕ್ಷಿಣ ಆಫ್ರಿಕಾ ನೆಲಕಚ್ಚಿರುವುದನ್ನು ನೋಡಿದ ಬಳಿಕ ಕ್ರಿಕೆಟ್ನಲ್ಲಿ ಏನು ಕೂಡ ಸಾಧ್ಯ ಎನ್ನುವುದು ಸಾಬೀತಾಗಿದೆ. ಹೀಗಾಗಿ ಪುಣೆಯ ಇಂದಿನ ಪಂದ್ಯವನ್ನು ಎರಡೂ ತಂಡಗಳು ಬಹಳ ಗಂಭೀರವಾಗಿ ಪರಿಗಣಿಸಿವೆ. ಆದರೆ ಮೂರು ಪಂದ್ಯಗಳನ್ನು ಗೆದ್ದು ಜೋಶ್ನಲ್ಲಿರುವ ಭಾರತವೇ ಫೇವರಿಟ್ ಎನ್ನುವುದು ಮಾತ್ರ ನಿಜ.
ಆಸ್ಟ್ರೇಲಿಯ, ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನವನ್ನು ಮಣಿಸಿದ ರೋಹಿತ್ ಪಡೆಗೆ ಇದು 4ನೇ ಮುಖಾಮುಖೀ. ತಂಡದ ಫಾರ್ಮ್ ಮತ್ತು ಮೊದಲ ಮೂರು ಪಂದ್ಯಗಳಲ್ಲಿ ನೀಡಿದ ಹೋರಾಟವನ್ನು ಗಮನಿಸಿದರೆ ಬಾಂಗ್ಲಾದೇಶದ ವಿರುದ್ಧ ಭಾರತವೇ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಕಳೆದ 4 ದಿನಗಳಿಂದ ವಿಶ್ವಕಪ್ ಪಂದ್ಯಾವಳಿಯ ಚಿತ್ರಣವನ್ನು ಗಮನಿಸುವಾಗ ಇಲ್ಲಿ ಏನೂ ಸಂಭವಿಸಬಹುದು ಎಂಬುದು ಸ್ಪಷ್ಟ ವಾಗ ತೊಡಗಿದೆ. ಟೀಮ್ ಇಂಡಿಯಾ ಈ ಎಚ್ಚರಿಕೆಯಲ್ಲೇ ಬಾಂಗ್ಲಾದೇಶವನ್ನು ಎದುರಿಸ ಬೇಕಾಗುತ್ತದೆ.
ಬಾಂಗ್ಲಾದೇಶ ಕೂಡ ಅಪಾಯಕಾರಿ ತಂಡಗಳಲ್ಲೊಂದು. ವಿಶ್ವಕಪ್ನಲ್ಲೇ ಭಾರತಕ್ಕೆ ಇದರ ಅನುಭವವಾಗಿದೆ. ವೆಸ್ಟ್ ಇಂಡೀಸ್ನಲ್ಲಿ ನಡೆದ 2007ರ ವರ್ಲ್ಡ್ಕಪ್ನ ಪೋರ್ಟ್ ಆಫ್ ಸ್ಪೇನ್ ಮುಖಾಮುಖಿಯಲ್ಲಿ ಬಾಂಗ್ಲಾದೇಶ 5 ವಿಕೆಟ್ಗಳಿಂದ ಭಾರತವನ್ನು ಮಗುಚಿತ್ತು. ಇದರಿಂದ ಭಾರತ ಲೀಗ್ ಹಂತದಲ್ಲೇ ಹೊರಬೀಳುವ ಅವಮಾನಕ್ಕೆ ಸಿಲುಕಿದ್ದನ್ನು ಮರೆಯುವಂತಿಲ್ಲ. ಇದು ವಿಶ್ವಕಪ್ನಲ್ಲಿ ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಸ್ಪರ್ಧೆ ಆಗಿತ್ತು.
ಅನಂತರದ 3 ವಿಶ್ವಕಪ್ ಪಂದ್ಯಗಳಲ್ಲಿ ಬಾಂಗ್ಲಾವನ್ನು ಮಣಿಸುವ ಮೂಲಕ ಭಾರತ ಬಡ್ಡಿ ಸಮೇತ ಸೇಡು ತೀರಿಸಿಕೊಂಡಿತು ಎಂಬುದು ಬೇರೆ ಮಾತು.
ಈ ವಿಶ್ವಕಪ್ ಕೂಟದಲ್ಲಿ ಬಾಂಗ್ಲಾದೇಶ ಕೂಡ 3 ಪಂದ್ಯಗಳನ್ನಾಡಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ಥಾನವನ್ನು ಸೋಲಿಸಿದ ಬಳಿಕ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಹೋರಾಟ ನೀಡದೆ ಸೋತಿದೆ. ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಫಾರ್ಮ್ ಬಗ್ಗೆ ಚಿಂತೆ ಇಲ್ಲ. ರೋಹಿತ್ ಶರ್ಮ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಅವರನ್ನೊಳಗೊಂಡ ಬ್ಯಾಟಿಂಗ್ ಲೈನ್ಅಪ್ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿದೆ.
ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ನಿರ್ಣಾಯಕವಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಭಾರೀ ಜೋಶ್ನಲ್ಲಿದ್ದಾರೆ.
ಪುಣೆಯ ಎಂಸಿಎ ಸ್ಟೇಡಿಯಂ ಬ್ಯಾಟಿಂಗ್ಗೆ ಧಾರಾಳ ನೆರವು ನೀಡಿದ ದಾಖಲೆ ಹೊಂದಿದೆ. ಇಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡದ ಸರಾಸರಿ ಸ್ಕೋರ್ 307 ರನ್. ಇಲ್ಲಿ ದಾಖಲಾದ ಸರ್ವಾಧಿಕ ಮೊತ್ತ 356 ರನ್.









































