ಓರ್ವ ಯುವತಿ ಸ್ಥಳದಲ್ಲೇ ಸಾವು, ನಾಲ್ವರು ಗಂಭೀರ
ಮಂಗಳೂರು : ನಗರದ ಲೇಡಿಹಿಲ್ ಬಳಿ ನಿನ್ನೆ ಸಂಜೆ ಸಂಭವಿಸಿರುವ ಭೀಕರ ಅಪಘಾತ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ವೇಗವಾಗಿ ಬಂದ ಕಾರೊಂದು ನೇರವಾಗಿ ಪೂಟ್‌ಪಾತ್ ಏರಿ ನಡೆದುಕೊಂಡು ಹೋಗುತ್ತಿದ್ದ ಐವರು ಯುವತಿಯರಿಗೆ ಡಿಕ್ಕಿ ಹೊಡೆದು ಪಲಾಯನ ಮಾಡಿದ್ದು, ಓರ್ವ ಯುವತಿ ಸಾವಿಗೀಡಾಗಿದ್ದಾರೆ. ಹಾಡಹಗಲೇ ಘಟನೆ ನಡೆದಿದೆ.
ರೂಪಶ್ರೀ (23)ಎಂಬವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಸ್ವಾತಿ(26) ಹಿತಾನ್ವಿ(16), ಕೃತಿಕಾ(16), ಯತಿಕಾ(12) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರು ಮಣ್ಣಗುಡ್ಡ ಕಡೆಯಿಂದ ಲೇಡಿಹಿಲ್ ಕಡೆಗೆ ಅತಿ ವೇಗವಾಗಿ ಬಂದಿದೆ. ಎಸ್.ಎಲ್ ಶೇಟ್ ಜ್ಯುವೆಲ್ಲರಿ ಬಳಿ ಫುಟ್‌ಪಾತಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರನ್ನು ಚಾಲಕ ಹಾರಿಸಿಕೊಂಡು ಹೋಗಿದ್ದಾನೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅಪಘಾತ ಎಸಗಿದ ಬಳಿಕ ಸ್ಥಳದಿಂದ ಕಾರು ಸಮೇತ ಪರಾರಿಯಾಗಿದ್ದ ಚಾಲಕ ಕಮಲೇಶ್ ಬಲದೇವ್ ಕಾರನ್ನು ಹೋಂಡಾ ಶೋ ರೂಂ ಬಳಿ ನಿಲ್ಲಿಸಿ ಮನೆಗೆ ಹೋಗಿದ್ದಾನೆ. ಬಳಿಕ ತಂದೆ ಎಚ್.ಎಂ ಬಲದೇವ್ ಅವರೊಂದಿಗೆ ಪಶ್ಚಿಮ ಸಂಚಾರಿ ಠಾಣೆಗೆ ಬಂದು ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಅಪಘಾತ ಭೀಕರ ದೃಶ್ಯ ಸ್ಥಳೀಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.










































