ಆಳ್ವಾಸ್ ಸಹಕಾರ ಸಂಘ – 2.87 ಕೋಟಿ ನಿವ್ವಳ ಲಾಭ, ಶೇ 17 ಲಾಭಾಂಶ

ಮೂಡಬಿದಿರೆ : ಆಳ್ವಾಸ್ ಸಹಕಾರ ಸಂಘವು 2022-23 ನೇ ಸಾಲಿನಲ್ಲಿ 2.87 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ತನ್ನ ಸದಸ್ಯರಿಗೆ ಶೇ. 17 ಲಾಭಾಂಶ (ಡಿವಿಡೆಂಟ್) ಘೋಷಿಸಿದೆ. ಆಳ್ವಾಸ್ ಕಾಲೇಜು ಸುಂದರಿ ಆಳ್ವ ಆವರಣದಲ್ಲಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಶನಿವಾರ ನಡೆದ ಸಂಘದ 2022-23 ನೇ ಸಾಲಿನ 7ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಕಟಿಸಲಾಯಿತು.

ವಾರ್ಷಿಕ ವರದಿ ವಾಚಿಸಿದ ಸಂಘದ ಕಾರ್ಯ ನಿರ್ವಹಣಾಧಿಕಾರಿ ಅರ್ಪಿತಾ ಶೆಟ್ಟಿ, ಸಂಘವು ಈ ಸಾಲಿನಲ್ಲಿ 150 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ಕಳೆದ ವಿತ್ತೀಯ ವರ್ಷಕ್ಕಿಂತ ಶೇ 28 ಹೆಚ್ಚುವರಿ ಲಾಭ ಗಳಿಸಿದೆ. ಶೇ 99.74 ಸಾಲ ವಸೂಲಾತಿ ಮಾಡಿದೆ. 2016ರ ಜುಲೈ 10 ರಂದು ಸಂಘ ಆರಂಭಗೊಂಡಿದ್ದು, ಪ್ರಸ್ತುತ 2033 ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಂಘದ ಅಧ್ಯಕ್ಷರೂ ಆಗಿರುವ ಡಾ. ಮೋಹನ ಆಳ್ವ ಅವರು ಸಮಾಜಮುಖಿ ಚಿಂತನೆಯಲ್ಲಿ ಆಳ್ವಾಸ್ ಸಮೂಹ ಸಂಸ್ಥೆಗಳನ್ನು ಕಟ್ಟಿದ್ದಾರೆ. ಈ ಸಹಕಾರಿ ಸಂಘವನ್ನು ಸಮಾಜಕ್ಕೆ ಸಹಕರಿಸುವ ದೂರದೃಷ್ಟಿಯಿಂದ ನಮ್ಮೆಲ್ಲರ ಜೊತೆ ಸೇರಿ ಸ್ಥಾಪಿಸಿದ್ದು, ವಾಣಿಜ್ಯೋದ್ದೇಶದ ಲವಲೇಶವೂ ಇಲ್ಲ. ಅವರದ್ದು, ಸಾಮಾಜಿಕ ಬಿಂಬದ ಪಾರದರ್ಶಕ ವ್ಯವಸ್ಥೆ ಎಂದರು.

ಸಂಘದ ಅಧ್ಯಕ್ಷ ಡಾ. ಎಮ್ ಮೋಹನ ಆಳ್ವ ಅವರ ಅನುಪಸ್ಥಿತಿಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತ ಮಂಡಳಿ ಉಪಾಧ್ಯಕ್ಷ ಎ. ಮೋಹನ್ ಪಡಿವಾಳ್, ಮನುಕುಲದ ಸೇವೆಯೇ ದೇವರ ಸೇವೆ ಎಂಬ ಧ್ಯೇಯದೊಂದಿಗೆ ನಡೆದವರು ಡಾ. ಎಂ. ಮೋಹನ ಆಳ್ವ. ಅವರ ಆಶಯದಂತೆ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಅಭಿನಂದನೆ
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ 625ಕ್ಕೆ 622 ಅಂಕ ಪಡೆದ ಸ್ವಂದನಾ ಮಹಾಂತೇಶ್ ಮುರಗೋಡ್, 621 ಅಂಕ ಪಡೆದ ಶಾರದಾ ಸತೀಶ್ ಕಂಕನವಾಡಿ, 620 ಅಂಕ ಪಡೆದ ಮಂಜುಳಾ ಸದಾಶಿವ ಜಮಖಂಡಿ ಹಾಗೂ ಬೀರಪ್ಪ ಹುಣಶ್ಯಾಲ್ ಹಾಗೂ ವರ್ಷಾ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 600 ಅಂಕ ಪಡೆದ ಅನನ್ಯಾ, 596 ಅಂಕ ಗಳಿಸಿದ ಕೆ. ದಿಶಾ ರಾವ್, ವಿಜ್ಞಾನ ವಿಭಾಗದಲ್ಲಿ 595 ಅಂಕ ಪಡೆದ ಅದಿತಿ (ಪರವಾಗಿ ತಾಯಿ ಶ್ವೇತಾ R.) ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ನಗದಿನೊಂದಿಗೆ ಅಭಿನಂದಿಸಲಾಯಿತು.

ಇದೇ ಸಂದರ್ಭ ಸಹಕಾರ ಶಿಕ್ಷಣ ನಿಧಿಯ 2.58 ಲಕ್ಷದ ಚೆಕ್ ಅನ್ನು ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿಗೆ ಮೂಡುಬಿದಿರೆಯ ಸಹಕಾರಿ ತರಬೇತಿ ಸಂಸ್ಥೆಯ ಪುಷ್ಪರಾಜ್ ಮೊಯಿಲಿ ಮೂಲಕ ಹಸ್ತಾಂತರಿಸಲಾಯಿತು.

ನಿರ್ದೇಶಕರಾದ ಅಶ್ವಿನ್ ಜೋಸ್ಸಿ ಪಿರೇರಾ, ರಾಮಚಂದ್ರ ಮಿಜಾರು, ಡಾ. ರಮೇಶ್ ಶೆಟ್ಟಿ, ಪ್ರಕಾಶಿನಿ ಹೆಗ್ಡೆ ಉಪಸ್ಥಿತರಿದ್ದರು. ನಿರ್ದೇಶಕ ಜಯರಾಮ ಕೋಟ್ಯಾನ್ ಸ್ವಾಗತಿಸಿ, ಉಪನ್ಯಾಸಕ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ.ಕುರಿಯನ್ ವಂದಿಸಿದರು. ಸದಸ್ಯರಾದ ಸದಾಶಿವ ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ ಸಲಹೆ ನೀಡಿದರು.







































error: Content is protected !!
Scroll to Top