ಸಾಮಾನ್ಯರಲ್ಲಿ ಸಾಮಾನ್ಯ ನಮ್ಮ ಗಣೇಶ

ಸಾವಿರ ರೂಪ, ಸಾವಿರ ರೀತಿಯ ಆರಾಧನೆ ಪಡೆಯುವ ಸಕಲರ ಇಷ್ಟದ ದೇವರು

ನಮ್ಮ ದೇಶದ ಉನ್ನತ ಸಾಂಸ್ಕೃತಿಕ ಪರಂಪರೆ, ನೈಜ ಜಾತ್ಯಾತೀತ ಮನೋಭಾವ, ವೈವಿಧ್ಯತೆಯಲ್ಲಿ ಏಕತೆ ವ್ಯಕ್ತವಾಗುವುದು ಗಣೇಶೋತ್ಸವ ಸಂದರ್ಭದಲ್ಲಿ. ದೇಶದ ಬಹತೇಕ ಎಲ್ಲ ರಾಜ್ಯಗಳಲ್ಲಿ ಎಲ್ಲ ಜಾತಿ ಧರ್ಮದ ಜನರು ಗಣೇಶನ ಹಬ್ಬವನ್ನು ಒಂದಲ್ಲ ರೀತಿಯಲ್ಲಿ ಆಚರಿಸುತ್ತಾರೆ. ಎಲ್ಲರನ್ನೂ ಒಗ್ಗೂಡಿಸುವ ಒಂದು ಅವ್ಯಕ್ತವಾದ ಮಹಿಮೆ ಗಣೇಶನಿಗೆ ಇದೆ ಎಂಬ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟದ ಕಾಲದಲ್ಲೇ ಬಾಲ ಗಂಗಾಧರ ತಿಲಕರು ಗಣೇಶೋತ್ಸವವನ್ನು ಜಾತಿ ಧರ್ಮದ ಬೇಧವಿಲ್ಲದೆ ಸಾರ್ವಜನಿಕವಾಗಿ ಆಚರಿಸುವ ಪರಂಪರೆಗೆ ನಾಂದಿ ಹಾಡಿದರು.
ಬಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಆಚರಿಸುವ ಗಣೇಶ ಚತುರ್ಥಿ ಭಾರತದ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದು. ಗಣೇಶನ ಹಬ್ಬದ ಆಚರಣೆಯಲ್ಲಿರುವ ವೈವಿಧ್ಯತೆಯೇ ನಮ್ಮ ಸಾಂಸ್ಕೃತಿಕ ವೈವಿಧ್ಯತೆಗೆ ಹಿಡಿದ ಕೈಗನ್ನಡಿ. ಕೆಲವೆಡೆ ಒಂದು ದಿನ, ಕೆಲವೆಡೆ 3 ದಿನ, ಕೆಲವೆಡೆ 7 ದಿನ, ಕೆಲವೆಡೆ 11 ದಿನ, ಇನ್ನೂ ಕೆಲವೆಡೆ ತಿಂಗಳ ಪರ್ಯಂತ ಹೀಗೆ ಅವರ ಭಕುತಿ, ಭಾವ, ಸಾಮರ್ಥ್ಯಕ್ಕೆ ತಕ್ಕಂತೆ ಗಣೇಶನನ್ನು ಆರಾಧಿಸುತ್ತಾರೆ. ಗಣೇಶನ ರೂಪದಲ್ಲಿರುವಷ್ಟು ವೈವಿಧ್ಯತೆಯೂ ಬೇರೆ ಯಾವ ದೇವರಲ್ಲೂ ಕಾಣಲು ಸಾಧ್ಯವಿಲ್ಲ. ಗಣಪನನ್ನು ನಮ್ಮ ಕಲ್ಪನೆ, ಆಸಕ್ತಿ, ಅಭಿರುಚಿ, ಇಷ್ಟದ ಪ್ರಕಾರ ರೂಪಿಸಿ ಪೂಜಿಸಬಹುದು ಎನ್ನುವುದೇ ಗಣೇಶ ಎಷ್ಟು ಆಪ್ತ ದೇವರು ಎನ್ನುವುದಕ್ಕೆ ಸಾಕ್ಷಿ. ಸಾಮಾನ್ಯರಲ್ಲಿ ಸಾಮಾನ್ಯನೂ, ಅಸಾಮಾನ್ಯ ಮಹಿಮನೂ ಆದ ದೇವರು ವಿನಾಯಕ.

ಎಲ್ಲರಿಗೂ ಸಲ್ಲುವ ದೇವರು

ವಿನಾಯಕ ವಿದ್ಯೆಯ ಮತ್ತು ಜ್ಞಾನದ ಅಧಿಪತಿಯೂ ಹೌದು. ಸಂಪತ್ತು ಮತ್ತು ಅದೃಷ್ಟದ ಅಧಿನಾಯಕ ಆತ. ಮೂಷಿಕ ವಾಹನನೆಂದರೆ ಎಲ್ಲರಿಗೂ ಎಲ್ಲದಕ್ಕೂ ಅಧಿಪತಿ. ಹೀಗಾಗಿ ಆತ ಎಲ್ಲರಿಗೂ ಸಲ್ಲುವ ದೇವರು. ಎಲ್ಲ ವರ್ಗದ ಜನರ ದೇವರು. ಶ್ರೀಮಂತರು ಚಿನ್ನ, ಬೆಳ್ಳಿಯ ವಿಗ್ರಹವಿಟ್ಟು ಪೂಜಿಸಿದರೆ ಬಡವರು ಮಣ್ಣಿನಲ್ಲಿ ಮೂರ್ತಿ ಮಾಡಿ ಪೂಜಿಸುತ್ತಾರೆ.

ಗಣೇಶನ ಹುಟ್ಟು ಕೂಡ ವಿಶಿಷ್ಟ

ಗಣೇಶನ ಬಗ್ಗೆ ಹಲವಾರು ಕತೆಗಳಿವೆ. ಶಿವ ಪುರಾಣದ ಪ್ರಕಾರ ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವ ತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನೆ. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ.
ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಆನೆ ಮರಿಯ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುತ್ತಾರೆ. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ.

ಎಲ್ಲದಕ್ಕೂ, ಎಲ್ಲರಿಗೂ ಅಧಿದೇವ

ವಿಘ್ನ ವಿನಾಶಕ ವಿನಾಯಕನಾಗಿರುವನು. ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಜ್ಞಾನದ ಆದಿದೇವತೆಯಾಗಿರುವ ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ–ಸಿದ್ಧಿದಾಯಕ, ಗಣಗಳ ಅಧಿಪತಿ, ಮೋದಕ-ಗರಿಕೆ ಪ್ರಿಯ, ವಿಘ್ನ ಹರ ಎಲ್ಲವೂ ಆದ ಶ್ರೀ ಗಣೇಶನ ಚೌತಿ ಉತ್ಸವದ ಸಡಗರವೇ ಬೇರೆ. ಮಹಾಭಾರತ ಬರೆದ ವೇದವ್ಯಾಸ, ಸ್ವಾಮಿ ರಾಮದಾಸ ಮೊದಲಾದ ಅನೇಕ ಸಂತರು ಶ್ರೀ ಗಣೇಶನ ಓಂಕಾರ ಸ್ವರೂಪದ ಗುಣಗಾನ ಮಾಡಿದ್ದಾರೆ. ಸಂತ ತುಳಸೀದಾಸ ತನ್ನ ಪ್ರಖ್ಯಾತ ಕೃತಿ ಶ್ರೀ ರಾಮಚರಿತ ಮಾನಸದಲ್ಲಿ ಎಲ್ಲಕ್ಕಿಂತ ಮೊದಲಾಗಿ ಶ್ರೀ ಗಣೇಶನಿಗೆ ವಂದಿಸಿದ್ದಾರೆ.
ಪ್ರತಿಯೊಂದು ಮಂಗಳ ಕಾರ್ಯದ ಆರಂಭದಲ್ಲಿ ಶ್ರೀ ಗಣೇಶನ ಅವಾಹನೆ, ಸಂಸ್ಥಾಪನೆ ಮತ್ತು ಪೂಜೆ ಮಾಡಲಾಗುತ್ತದೆ. ಮಹಾಭಾರತ ಕಾಲಕ್ಕೂ ಬಹು ಹಿಂದೆಯೇ ಗಣೇಶ ಪೂಜೆ ಅಥವಾ ಗಣೇಶ ಚತುರ್ಥಿ ವ್ರತ ಇತ್ತೆಂಬುದಕ್ಕೆ ಪೌರಾಣಿಕ ಪುರಾವೆಗಳಿವೆ. ಸ್ವಯಂ ಭಗವಾನ್ ಶ್ರೀ ಕೃಷ್ಣನೇ ಗಣೇಶನ ವ್ರತ ಆಚರಿಸಿದ್ದ ಎಂದೂ ಶಾಸ್ತ್ರ-ಪುರಾಣಗಳು ಹೇಳುತ್ತವೆ. ಅಷ್ಟೇ ಅಲ್ಲದೆ ಗಣೇಶನು ಮಂಗಳಕಾರಕ ವಿಘ್ನ ನಿವಾರಕ ಆಗಿದ್ದಾನೆ. ವಿದ್ಯಾ ಬುದ್ಧಿಯ ಅಭೀಷ್ಟ ಪ್ರದಾಯಕನೂ ಆಗಿದ್ದಾನೆ. ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶನ ಅವತಾರವಾಯಿತು. ಗಣೇಶ ಪುರಾಣದ ಎರಡನೇ ಅಧ್ಯಾಯದಲ್ಲಿ ಇದರ ಉಲ್ಲೇಖವಿದೆ.
ವಿಶೇಷವಾಗಿ ಮಕ್ಕಳಿಗೆ ಅತ್ಯಂತ ಪ್ರಿಯನಾದ ದೇವಾಧಿದೇವ ಗಣಪ. ಎಲ್ಲರಿಂದ ಹೊಗಳಿಸಿಕೊಳ್ಳುವ ಮತ್ತು ಎಲ್ಲರ ಆರೋಗ್ಯಕರ ವ್ಯಂಗ್ಯಕ್ಕೆ ತುತ್ತಾದವನೂ ಗಣೇಶ ಎಂದರೆ ತಪ್ಪಿಲ್ಲ.

ಅಯುಧಗಳಲ್ಲಿದೆ ಸಂಕೇತ

ಗಣೇಶನ ಕೈಯಲ್ಲಿರುವ ಆಯುಧಗಳನ್ನು ಪರಿಗಣಿಸಿದರೆ, ಅಂಕುಶ ಎಂಬುದು ಅಹಂ ನಿಯಂತ್ರಣ ಪ್ರತೀಕ. ಅಷ್ಟು ಬೃಹತ್ತಾದ ಆನೆಯನ್ನು ಈ ಪುಟ್ಟ ಅಂಕುಶವೊಂದರಿಂದ ನಿಯಂತ್ರಿಸಬಹುದಲ್ಲವೇ? ಅದೇ ರೀತಿ ಮನುಷ್ಯನ ಅಹಂ ಎಂಬುದು ಯಾವ ಪ್ರಮಾಣಕ್ಕೂ ಬೆಳೆಯಬಹುದು. ಅದನ್ನು ನಿಯಂತ್ರಿಸಲು ಈ ಅಂಕುಶವೆಂಬ, ಛಲ, ಮನೋಬಲ ಅಥವಾ ಇಚ್ಛಾಶಕ್ತಿ ಸಾಕು.
ಪಾಶ ಎಂಬುದು ಹುಚ್ಚೆದ್ದ ಮನಸ್ಸಿಗೆ ಕಡಿವಾಣ ಹಾಕುವ ಸಂಕೇತ. ಹುಚ್ಚುಗುದುರೆಯಂತೆ ಮಾನವನ ಮನಸ್ಸು ಓಡಾಡುತ್ತಿರುತ್ತದೆ, ಓಲಾಡುತ್ತಿರುತ್ತದೆ. ಅದನ್ನು ಹಗ್ಗ ಕಟ್ಟಿ, ಅಧ್ಯಾತ್ಮದತ್ತ ಕೇಂದ್ರೀಕರಿಸುವುದರಿಂದ, ನಿಯಂತ್ರಿಸುವುದರಿಂದ ಮಾನಸಿಕ ನೆಮ್ಮದಿ ಸದಾ ಸಾಧ್ಯ ಎಂದು ಬಿಂಬಿಸುತ್ತದೆ ಈ ಆಯುಧ.
ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ, ತಿಲಕರ ಮುಂದಾಳತ್ವದಲ್ಲಿ ದೇಶದೆಲ್ಲೆಡೆ ಪಸರಿಸಿದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರಿಯುತ್ತಿದೆ.

ಕರಾವಳಿಯಲ್ಲಿ ಗಣೇಶೋತ್ಸವ

ಮ್ಮ ಕರಾವಳಿಯಲ್ಲಿ ಗಣೇಶನ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಳ್ಳುತ್ತಾರೆ. ಜತೆಗೆ ದೈವಗಳು ಇರುವ ಮನೆಗಳಲ್ಲಿ ದೈವಾರಾಧನೆಯ ಮೂಲಕವೂ ಆಚರಿಸಲಾಗುತ್ತದೆ. ಗಣಗಳ ಅಧಿನಾಯಕನಾದ ಗಣೇಶನನ್ನು ದೈವರಾಧನೆ ಜತೆ ಸಮೀಕರಿಸಿ ಆಚರಿಸುವುದು ಕರಾವಳಿಯದ್ದೇ ಆದ ವಿಶಿಷ್ಟ ಪರಂಪರೆ. ದೈವಗಳಿಗೆ ಚೌತಿ ಮಾಡುವಾಗ ಗಣೇಶನ ಮೂರ್ತಿ ಇಡುವ ಕ್ರಮವಿಲ್ಲ. ಸಾಂಕೇತಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡಿ ದೈವಗಳಿಗೆ ಪೂಜೆ ಮಾಡಲಾಗುತ್ತದೆ.
ಇದಲ್ಲದೆ ಸಾರ್ವಜನಿಕವಾಗಿ ಮೂರ್ತಿ ಇಟ್ಟು ಆಚರಿಸುವಾಗ ಡೊಳ್ಳು ಕುಣಿತ, ಹುಲಿವೇಷ, ಯಕ್ಷಗಾನ ಮುಂತಾದ, ನಾಟಕ, ಸಂಗೀತ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಕರಾವಳಿಯ ಇಲ್ಲಿನ ಗಣೇಶೋತ್ಸವಕ್ಕೆ ಮೆರಗು ತರುತ್ತದೆ. ವಿಘ್ನಗಳೆಲ್ಲ ಕಳೆದು ಹಬ್ಬದ ಸಂಭ್ರಮ ಎಲ್ಲೆಡೆ ಕೊಳ್ಳುವಂತಾಗಲಿ ಎನ್ನುವುದು ಆಶಯ.

error: Content is protected !!
Scroll to Top