ಕನಸಿನ ಕಾರ್ಕಳ : ಇಂಜಿನಿಯರ್ಸ್‌ ಅಸೋಸಿಯೇಶನ್‌ ಸಿದ್ಧಪಡಿಸಿದ ವಿಡಿಯೋ ವಿನ್ಯಾಸ ಅನಾವರಣ

ದೇಶದ ಅಭಿವೃದ್ಧಿಯಲ್ಲಿ ಇಂಜಿನೀಯರ್ಸ್ ಕೊಡುಗೆ ಅನನ್ಯ – ಸುನಿಲ್ ಕುಮಾರ್

ಕಾರ್ಕಳ : ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಭದ್ರ ಬುನಾದಿ ಹಾಕಿಕೊಟ್ಟಿರುವ ಜಗತ್‌ಪ್ರಸಿದ್ಧ ಇಂಜಿನಿಯರ್‌ ವಿಶ್ವೇಶ್ವರಯ್ಯನವರಂತೆ ಪ್ರತಿಯೊಬ್ಬರೂ ದೂರದೃಷ್ಟಿ, ಸಮಾಜಮುಖಿ ಚಿಂತನೆ ಹೊಂದುವುದು ಅಗತ್ಯ. ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್ಸ್‌ ಕೊಡುಗೆ ಅನನ್ಯವಾದುದು ಎಂದು ಶಾಸಕ, ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಹೋಟೆಲ್‌ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ಕಾರ್ಕಳ ಇಂಜಿನಿಯರ್ಸ್‌ ಅಸೋಸಿಯೇಶನ್‌ ವತಿಯಿಂದ ನಡೆದ ಇಂಜಿನಿಯರ್ಸ್‌ ಡೇ, ಪದಪ್ರದಾನ, ನಗರ ಯೋಜನೆ ನೀಲ ನಕಾಶೆ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು.

ವಿಫುಲ ಅವಕಾಶ
ನೈಸರ್ಗಿಕವಾಗಿ ಸಮೃದ್ಧವಾಗಿರುವ ಉಡುಪಿ ಜಿಲ್ಲೆಯಲ್ಲಿ ವಿಫುಲ ಅವಕಾಶವಿದೆ. ದೂರದೃಷ್ಟಿಯ ಯೋಜನೆಗಳಿಗೆ ಸಹಕಾರ ಕೊಟ್ಟಾಗ ಅಭ್ಯುದಯ ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಕಳ ಇಂಜಿನಿಯರ್ಸ್‌ ಅಸೋಸಿಯೇಶನ್‌ ನಗರ ಯೋಜನೆ ಸಿದ್ಧಪಡಿಸಿರುವುದು ಶ್ಲಾಘನೀಯ. ಅದಕ್ಕಾಗಿ ಅಸೋಸಿಯೇಶನ್‌ ಬಳಗವನ್ನು ಹೃತ್ಫೂರ್ವಕವಾಗಿ ಅಭಿನಂದಿಸುವುದಾಗಿ ತಿಳಿಸಿದ ಸುನಿಲ್‌ ಕುಮಾರ್‌ ಹಂತಹಂತವಾಗಿ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಇಂಜಿನಿಯರ್ಸ್‌ ಸೇರಿದಂತೆ ಎಲ್ಲ ಸಂಸ್ಥೆಯವರೂ ಜನಪ್ರತಿನಿಧಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿದಲ್ಲಿ ನಮ್ಮೂರನ್ನು ಮತ್ತಷ್ಟು ಚೆನ್ನಾಗಿ ಮಾಡಬಹುದಾಗಿದೆ ಎಂದರು.

ಕನಸಿನ ಕಾರ್ಕಳ -2040
ನಗರ ಯೋಜನೆ – ವಿಷನ್‌ 2040 ಕುರಿತು ಪ್ರಾಸ್ತವಿಕ ಮಾತುಗಳನ್ನಾಡಿದ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ರಾಜೇಶ್‌ ಕುಂಟಾಡಿ, ಕಾರ್ಕಳದ ಪ್ರಕೃತಿ ಶ್ರೀಮಂತಿಕೆಗೆ ಧಕ್ಕೆಯಾಗದಂತೆ, ಪ್ರವಾಸೋದ್ಯಮ, ಆರ್ಥಿಕ, ಆರೋಗ್ಯ, ಶಿಕ್ಷಣ ಕ್ಷೇತ್ರಗಳನ್ನು ಒಳಗೊಂಡಂತೆ ಶಾಸಕ ಸುನಿಲ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ನಗರ ಯೋಜನೆ ಸಿದ್ಧಪಡಿಸಲಾಗಿದೆ. ಕಾರ್ಕಳ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಜ್ವಲಿಸಬೇಕೆಂಬ ಮುಂದಾಲೋಚನೆಯಲ್ಲಿ ಕ್ರೀಡೆ, ಕೃಷಿ, ಕಾಷ್ಠ- ಶಿಲ್ಪ ಕಲೆಗಳಿಗೆ ಉತ್ತೇಜನ ದೊರೆಯುವಂತೆ ನೀಲಿ ನಕಾಶೆ ರೂಪಿಸಲಾಗಿದೆ. ಶಾಸಕರು ಇಂಜಿನಿಯರ್ಸ್‌ ಅಸೋಸಿಯೇಶನ್‌ ಮೇಲಿಟ್ಟಿರುವ ನಂಬಿಕೆಯಂತೆ ಅಸೋಸಿಯೇಶನ್‌ ಕೊಡುಗೆ ಸಲ್ಲಿಸಲಿದೆ ಎಂದು ಭರವಸೆಯಿತ್ತರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿರುವ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ & ಪ್ಲಾನಿಂಗ್‌ ಮಣಿಪಾಲ ಇಲ್ಲಿನ ಪ್ರಾಧ್ಯಾಪಕ ಪ್ರೋ. ಪ್ರಕಾಶ್‌ ರಾವ್‌, ಉಡುಪಿ ಅಲ್ಟ್ರಾಟೆಕ್‌ ಸಿಮೆಂಟ್‌ ಲಿಮಿಟೆಡ್‌ನ ಚಾನಲ್‌ ರಿಲೇಶನ್‌ಶಿಪ್‌ ಮ್ಯಾನೇಜರ್‌ ಸಂಜೀವ ಕುಮಾರ್‌ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅಸೋಸಿಯೇಶನ್‌ ಕಾರ್ಯದರ್ಶಿ ಪ್ರಕಾಶ್‌ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಕಲ ಸಹಕಾರ
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಸೋಸಿಯೇಶನ್‌ ಅಧ್ಯಕ್ಷ ಮಂಜುನಾಥ ಹೆಗ್ಡೆ, ಅವಿಭಜಿತ ಜಿಲ್ಲೆಯಲ್ಲೇ ಮೊದಲ ಬಾರಿಗೆ ಎಂಬಂತೆ ಶಾಸಕರ ಪರಿಕಲ್ಪನೆಯಂತೆ ನಗರ ಯೋಜನೆ ಸಿದ್ಧಪಡಿಸಿರುವುದು ಅಸೋಷಿಯೇಶನ್‌ಗೆ ಹೆಮ್ಮೆ ಎನಿಸಿದೆ. ಇದು ಕಾರ್ಯರೂಪಕ್ಕೆ ಬರುವಂತಾಗಲಿ. ಯೋಜನೆ ಅನುಷ್ಠಾನ ಸಂದರ್ಭ ಎಲ್ಲ ರೀತಿಯ ಸಹಕಾರ ನೀಡಲು ಅಸೋಸಿಯೇಶನ್‌ ಬದ್ಧವಾಗಿದೆ ಎಂದರು.

ಸನ್ಮಾನ
ಕಾರ್ಕಳ ರೈ ಕನ್ಸಲ್ಟಿಂಗ್‌ ಇಂಜಿನಿಯರ್ಸ್‌ನ ಶಶಿಕಾಂತ್‌ ರೈ ಅವರನ್ನು ಸನ್ಮಾನಿಸಲಾಯಿತು. ಸಿವಿಲ್‌ ಇಂಜಿನಿಯರ್ಸ್‌ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಅಸೋಸಿಯೇಶನ್‌ ಉಪಾಧ್ಯಕ್ಷ ವಿಜಯರಾಜ್‌ ಶೆಟ್ಟಿ ಸ್ವಾಗತಿಸಿ, ಮಾಜಿ ಅಧ್ಯಕ್ಷ ಹಿತೇಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಶನ್‌ ಗೌರವ ಸಲಹೆಗಾರ ಅರುಣ್‌ ಶೆಟ್ಟಿ ವಂದಿಸಿದರು.

ಕಾರ್ಕಳ ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಶನ್‌ನ ಸದಸ್ಯರು

ಚಿತ್ರ : ಸುವರ್ಣ ಫೋಟೋಲ್ಯಾಬ್‌error: Content is protected !!
Scroll to Top