ಭಾರತೀಯ ಪತ್ರಿಕಾರಂಗದ ಹಿಮಾಲಯ ಪರ್ವತ ಎಂ.ವಿ.ಕಾಮತ್‌

ಮಾಧ್ಯಮಗಳು ಕೇವಲ ಸತ್ಯವನ್ನೇ ಹೇಳಬೇಕು ಎಂದಿದ್ದರು ಕಾಮತರು

ನನಗೆ ಸರಿಯಾಗಿ ನೆನಪಿದೆ ಆ ಸಂದರ್ಶನ. 2010-2018ರ ಅವಧಿಯಲ್ಲಿ ಉಡುಪಿಯ ಪ್ರಸಿದ್ಧ ಖಾಸಗಿ ಟಿವಿ ವಾಹಿನಿಯಲ್ಲಿ ಸಂಜೆಯ ಹೊತ್ತು ದಿನಕ್ಕೊಂದು ಸಂದರ್ಶನ ಮಾಡುತ್ತಾ ಇದ್ದವನು ನಾನು. ಅವು ನನ್ನ ಪತ್ರಿಕೋದ್ಯಮದ ಆರಂಭದ ಹೆಜ್ಜೆಗಳು.
ಆಗ 2011ರ ಆಗಸ್ಟ್ 15 ಬಂದಾಗ ಏನಾದ್ರೂ ವಿಶೇಷವಾದ ಕಾರ್ಯಕ್ರಮ ರೂಪಿಸಬೇಕು ಎಂದು ಟಿವಿಯ ಆಡಳಿತ ಮಂಡಳಿಯ ಮೀಟಿಂಗ್ ಏರ್ಪಾಡಾಗಿತ್ತು. ನಾನು ಆರಂಭ ಮಾಡಿದೆ.
1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತದ ತ್ರಿವರ್ಣ ಧ್ವಜ ಮೊದಲ ಬಾರಿಗೆ ಮೇಲೆ ಏರಿದಾಗ ಆ ಐತಿಹಾಸಿಕವಾದ ಘಟನೆ ವೀಕ್ಷಿಸಿ ಪತ್ರಿಕೆಗೆ ವರದಿ ಮಾಡಿದ ಏಕೈಕ ಪತ್ರಕರ್ತ ಈಗ ಭಾರತದಲ್ಲಿ ಜೀವಂತ ಇದ್ದಾರೆ. ನಮ್ಮ ಸೌಭಾಗ್ಯ ಏನೆಂದರೆ ಅವರು ಮಣಿಪಾಲದಲ್ಲಿಯೇ ಇದ್ದಾರೆ. ಪದ್ಮಭೂಷಣ ಎಂ.ವಿ.ಕಾಮತರ ಸಂದರ್ಶನ ಮಾಡಬಹುದು ಎಂದೆ.
ಆಗ ಆಡಳಿತ ಮಂಡಳಿ-ಅದು ಸರಿ. ಆದರೆ ಅವರಿಗೆ 90 ವರ್ಷ ತುಂಬಿದೆ. ಆರೋಗ್ಯ ಕೂಡ ಕ್ಷೀಣ ಆಗಿದೆ. ಅವರು ಒಪ್ಪುತ್ತಾರಾ? ಎಂದು ಕೇಳಿತು.
ನಾವು ಒಂದು ಪ್ರಯತ್ನ ಮಾಡಿ ನೋಡೋಣ ಎಂದೆ. ಮ್ಯಾನೇಜಮೇಂಟ್ ಹಸಿರು ನಿಶಾನೆ ತೋರಿಸಿದ ಮುಂದಿನ ಅರ್ಧ ಗಂಟೆಯಲ್ಲಿ ನಾನು ಮಣಿಪಾಲದ ಅವರ ಮನೆಯ ಬಾಗಿಲನ್ನು ತಟ್ಟಿದೆ. ಅವರೇ ಬಂದು ಬಾಗಿಲನ್ನು ತೆರೆದರು. ಅತ್ಯಂತ ಸರಳವಾದ ಮನೆ. ಸರಳವಾದ ದಿರಿಸು. ಅವರಿಗೆ ನಾನು ಯಾರೆಂದು ಗೊತ್ತಿರಲಿಲ್ಲ. ಆದರೆ ನನಗೆ ಅವರು ಯಾರು, ಅವರ ಎತ್ತರ ಏನು ಎಂದು ಗೊತ್ತಿತ್ತು.
ನನ್ನ ಪರಿಚಯ ಮಾಡಿಕೊಂಡು ಆವರ ಪಾದ ಸ್ಪರ್ಶ ಮಾಡಿ ಅವರ ಕಾಲ ಬುಡದಲ್ಲಿ ಕೂತೆ. ನನಗೆ ನಿಮ್ಮ ಸಂದರ್ಶನ ಬೇಕು ಎಂದು ಕೇಳಿದೆ.
ನೋ, ನೋ… ನಾನು ಯಾರಿಗೂ ಸಂದರ್ಶನ ಕೊಡಲಾರೆ. ನೀನಿನ್ನು ಹೋಗಬಹುದು.ನನಗೆ ಬೇರೆ ಕೆಲಸ ಇದೆ ಎಂದು ನಿಷ್ಠುರವಾಗಿ ನುಡಿದರು.
ನನಗೆ ಒಳಗೆ ಮುಜುಗರ ಆಯ್ತು. ಆದರೂ ಮುಖದಲ್ಲಿ ನಗು ತುಳುಕಿಸುತ್ತ ಕೂತೆ. ‘ಸರ್, ನಿಮ್ಮ ಆತ್ಮಚರಿತ್ರೆಯ ಇಡೀ ಪುಸ್ತಕವನ್ನು ಓದಿದ್ದೇನೆ ಅಂದೆ. ನರೇಂದ್ರ ಮೋದಿಯ ಬಗ್ಗೆ ಮೊದಲ ಪುಸ್ತಕವನ್ನು ಬರೆದವರು ನೀವು. ನಾನು ಪತ್ರಿಕಾರಂಗದ ವಿದ್ಯಾರ್ಥಿ. ನಿಮ್ಮ ಪತ್ರಿಕಾ ಬರವಣಿಗೆಯ ಅಭಿಮಾನಿ. ನೀವು ನನಗೆ ಸಂದರ್ಶನವನ್ನು ಕೊಟ್ಟರೆ ಅದು ನನ್ನ ಜೀವಮಾನದ ಸ್ಮರಣೆ ಆಗುತ್ತದೆ’ ಅಂದೆ. ಸುಮಾರು ಅರ್ಧ ಗಂಟೆ ಅವರ ಕಾಲ ಬುಡದಿಂದ ಏಳಲೇ ಇಲ್ಲ. ಕೊನೆಗೂ ನನ್ನ ಹಠ ಗೆದ್ದಿತು.

ಅವರಿಗೆ ಎಲ್ಲಿ ಕನೆಕ್ಟ್ ಆಯ್ತೋ ಗೊತ್ತಿಲ್ಲ. ‘ನಾಳೆ ಕ್ಯಾಮೆರಾ ತೆಗೆದುಕೊಂಡು ಬಾ’ ಅಂದರು. ನನಗೆ ನನ್ನ ಪ್ರಶ್ನೆಗಳನ್ನು ಮೊದಲೇ ಕೊಡಬೇಕು ಎಂದು ಕಣ್ಣು ಮಿಟುಕಿಸಿ ನಕ್ಕರು. ನನ್ನ ಕನ್ನಡ ಚೆನ್ನಾಗಿಲ್ಲ ಮಾರಾಯಾ, ಇಂಗ್ಲಿಷ್ ಆಗಬಹುದಾ? ಎಂದು ನನ್ನ ಭುಜ ತಟ್ಟಿದರು. ಅವರ ಆಶೀರ್ವಾದ ತೆಗೆದುಕೊಂಡು ಹೊರಟೆ.
ಮರುದಿನ ಸಂಜೆ ಅರ್ಧ ಗಂಟೆ ಮೊದಲೇ ಅವರ ಮನೆಗೆ ತಲುಪಿದ್ದೆ. ನನ್ನ ಆಶ್ಚರ್ಯ ಏನೆಂದರೆ ಕಾಮತರು ನೀಟ್ ಆಗಿ ಡ್ರೆಸ್ ಮಾಡಿಕೊಂಡು ಕೂತಿದ್ದರು. ಅವರೇ ದೋಸೆ ತಂದುಕೊಟ್ಟರು. ಬಿಸಿ ಕಾಫಿ ಕೊಟ್ಟರು. ಟಿವಿ ಕ್ಯಾಮೆರಾ ಮುಂದೆ ಬಂದು ಮುಗ್ಧವಾಗಿ ಕೂತರು.
ನನ್ನ ಮುಂದೆ ಭಾರತೀಯ ಪತ್ರಿಕಾರಂಗದ ಹಿಮಾಲಯ ಪರ್ವತವೇ ಕೂತಿತ್ತು. ನಾನು ಪತ್ರಿಕೋದ್ಯಮಕ್ಕೆ ಹೊಸಬ. ಆದರೆ ಸಂದರ್ಶನ ನಡೆದ ಇಡೀ ಒಂದು ಗಂಟೆಯ ಅವಧಿ ನನಗೆ ಒಂದಿಷ್ಟೂ ಆತಂಕ ಅಥವಾ ಭಯ ಅನ್ನಿಸಲೇ ಇಲ್ಲ. ಇಡೀ ಭಾರತದ ಇತಿಹಾಸ ಅವರು ನನ್ನ ಮುಂದೆ ಬಿಚ್ಚಿ ಇಟ್ಟಿದ್ದರು. ಆಗ ಕಾಮತ್ ಸರ್ ವಯಸ್ಸು 90 ದಾಟಿತ್ತು. ಆಗಲೂ ಅವರ ಮೆಮೊರಿ ಅದ್ಭುತ ಆಗಿತ್ತು. ನಾನು ಬೆರಗಾಗಿ ಕೂತಿದ್ದೆ.
ಆ ಟಿವಿ ಸಂದರ್ಶನ ನನ್ನ ಜೀವನದ ಅತ್ಯಂತ ಸ್ಮರಣೀಯ ಆದ ಅನುಭವ ಆಯಿತು. ನಾನು ಮಾಡಿದ 5000 ಟಿವಿ ಸಂದರ್ಶನದಲ್ಲಿ ಅದೇ ಬೆಸ್ಟ್ ಎಂದು ಖಚಿತವಾಗಿ ಹೇಳಬಹುದು.
ಮುಂದೆ ಸೆಪ್ಟೆಂಬರ್ 7ರಂದು ಪತ್ರಿಕಾ ದಿನದಂದು ಅವರು ನನಗೆ ಎರಡನೇ ಸಂದರ್ಶನ ಕೊಟ್ಟರು. ಅಂದು ಅವರು ಪತ್ರಿಕಾ ಮನೋಧರ್ಮದ ಬಗ್ಗೆ ನೇರವಾಗಿ ಮತ್ತು ದಿಟ್ಟವಾಗಿ ಮಾತಾಡಿದ್ದರು.
ಪತ್ರಿಕಾರಂಗದಲ್ಲಿ ಆಗಷ್ಟೇ ಅಂಬೆಗಾಲು ಇಡುತ್ತಿದ್ದ ನನ್ನ ಜತೆ ಅವರು ಅಂದು ವ್ಯವಹರಿಸಿದ ರೀತಿಯು ನನಗೆ ಅದ್ಭುತವೇ ಆಗಿತ್ತು.
ಅಂತಹ ಪದ್ಮಭೂಷಣ ಎಂ.ವಿ. ಕಾಮತರನ್ನು ಕೆಲವೇ ಶಬ್ದಗಳಲ್ಲಿ ಪರಿಚಯ ಮಾಡುವುದು ನನಗೆ ತುಂಬಾ ಕಷ್ಟ.
ಮಾಧವ ವಿಠ್ಠಲ್ ಕಾಮತರು ಮೂಲತಃ ಉಡುಪಿಯವರು. ಉಡುಪಿಯ ಸರಕಾರಿ ಶಾಲೆಗಳಲ್ಲಿ ಕಲಿತವರು. ಅವರು ಪಡೆದದ್ದು ವಿಜ್ಞಾನದ ಪದವಿ. ಮುಂದೆ ಮುಂಬೈಯ ಒಂದು ಪ್ರಸಿದ್ಧ ಔಷಧ ಕಂಪನಿಗೆ ಸೇರಿದ ಅವರು ಕೆಲವೇ ವರ್ಷಗಳಲ್ಲಿ ಅಧಿಕಾರಿಯ ಹುದ್ದೆಗೆ ಏರಿದರು. ನಂತರ ಅವರ ಆಸಕ್ತಿ ನಿಧಾನವಾಗಿ ಬರವಣಿಗೆ ಮತ್ತು ಪತ್ರಿಕೋದ್ಯಮದ ಕಡೆಗೆ ಹೊರಳಿತು.

ಸಂಡೇ ಟೈಮ್ಸ್ ಪತ್ರಿಕೆಯ ವರದಿಗಾರರಾಗಿ, ಮುಂದೆ ಅದರ ಸಂಪಾದಕರಾಗಿ ಅವರು ಕೀರ್ತಿ ಶಿಖರವನ್ನು ಏರಿದರು. ಮುಂದೆ ILLUSTRATED WEEKLY, TIMES OF INDIA ಹೀಗೆ ಅವರ ಪತ್ರಿಕಾ ಜೀವನದ ಜರ್ನಿಯು ಯಶಸ್ವಿಯಾಗಿ ಮುಂದುವರಿಯಿತು. ರಾಷ್ಟ್ರಮಟ್ಟದ ಮಹೋನ್ನತವಾದ ಪತ್ರಿಕೆಗಳ ಸಂಪಾದಕರಾಗಿ ಅವರು ಅನನ್ಯ ಮಾದರಿ ಹಾಕಿಕೊಟ್ಟರು.
PTI ವರದಿಗಾರರಾಗಿ ಅವರು ವಾಷಿಂಗ್ಟನ್, ಜರ್ಮನಿ, ಇಂಗ್ಲಂಡ್ ಇನ್ನಿತರ ಹಲವು ಯುರೋಪ್ ದೇಶಗಳನ್ನು ಸುತ್ತಿ ಬಂದರು. ಇಂದಿರಾಗಾಂಧಿ, ಪ್ರಧಾನಿ ನೆಹರೂ, ಲೋಕನಾಯಕ ಜಯಪ್ರಕಾಶ್ ನಾರಾಯಣ್, ಸಂವಿಧಾನ ಶಿಲ್ಪಿ ಅಂಬೇಡ್ಕರ್, ಲಾಲ್‌ಬಹಾದ್ದುರ್ ಶಾಸ್ತ್ರಿ, ಜಗಜೀವನ್ ರಾಂ, ವಾಜಪೇಯಿ, ಅಡ್ವಾಣಿ, ಮೊರಾರ್ಜಿ ದೇಸಾಯಿ… ಮೊದಲಾದ ರಾಷ್ಟ್ರೀಯ ನಾಯಕರ ಸಂದರ್ಶನಗಳನ್ನು ಮಾಡಿದ್ದರು. ಸುಮಾರು ಎಪ್ಪತ್ತು ವರ್ಷ ನಿರಂತರ ಪತ್ರಕರ್ತರಾಗಿ ಕೆಲಸ ಮಾಡಿದ ಏಕೈಕ ಭಾರತೀಯ ಪತ್ರಕರ್ತ ಅವರು.

ಯಾರ ಮುಲಾಜಿಗೂ ಒಳಗಾಗದೆ ನೇರವಾಗಿ ಬರೆದರು. ಇಂದಿರಾ ಗಾಂಧಿ ಬಗ್ಗೆ ಆರಂಭದಲ್ಲಿ ಒಲವಿದ್ದ ಕಾಮತರು ಅದೇ ಇಂದಿರಾ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ಸರಣಿ ಲೇಖನ ಬರೆದು ನೇರವಾಗಿ ಖಂಡಿಸಿದರು. ಎಡ, ಬಲ ಯಾವ ಇಸಮ್ಮಿಗೆ ಕೂಡ ಬಲಿ ಆಗದೆ ಬರೆಯುತ್ತ ಹೋದರು. ಪತ್ರಕರ್ತನಿಗೆ ಯಾವ ಇಸಮ್ ಕೂಡ ಇರಬಾರದು ಎಂದು ಪ್ರತಿಪಾದನೆ ಮಾಡಿದರು.
ಗಾಂಧೀಜಿಯವರ ಅಹಿಂಸಾ ಸಿದ್ಧಾಂತಗಳನ್ನು ಒಪ್ಪಿದರು. ಅದೇ ಗಾಂಧೀಜಿಯ ಹತ್ಯೆ ಆಗಿ ನಾಥೂರಾಮ್ ಗೋಡ್ಸೆಯ ವಿಚಾರಣೆ ಕೋರ್ಟಿನಲ್ಲಿ ಆರಂಭ ಆದಾಗ ಪ್ರತಿ ದಿನದ ಅಷ್ಟೂ ಕೋರ್ಟ್ ಕಲಾಪಗಳನ್ನು ಬಿಡದೆ ವರದಿ ಮಾಡಿದ್ದರು ಕಾಮತ್ ಸರ್. ಅದು ಅತ್ಯಂತ ವಸ್ತುನಿಷ್ಠ ವರದಿ ಆಗಿತ್ತು.
ಭಾರತದ ಎಲ್ಲ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳನ್ನು ನಿಯಂತ್ರಿಸುವ ಕೇಂದ್ರ ಸರಕಾರದ ಪ್ರಸಾರ ಭಾರತಿ ಸಂಸ್ಥೆಯ ಅಧ್ಯಕ್ಷರಾಗಿ ಅವರು ಅಸೀಮ ಸೇವೆ ಸಲ್ಲಿಸಿದರು. ಈ ಹುದ್ದೆಗೆ ಏರಿದ ಮೊದಲ ಕನ್ನಡಿಗ ಅವರು ಅನ್ನುವುದು ನಮಗೆ ಹೆಮ್ಮೆ.
ಐವತ್ತಕ್ಕೂ ಹೆಚ್ಚು ಶ್ರೇಷ್ಠ ಪುಸ್ತಕ ಅವರು ಇಂಗ್ಲೀಷನಲ್ಲಿ ಬರೆದಿದ್ದಾರೆ. ಅದರಲ್ಲಿ ಈ ಮೂರು ಅತಿ ಶ್ರೇಷ್ಠ ಪುಸ್ತಕ ಎಂದು ಅವರು ನನಗೆ ಹೇಳಿದ್ದಾರೆ.

1) A Reporter at Large-ಇದು ಅವರ ಆತ್ಮಚರಿತ್ರೆಯ ಪುಸ್ತಕ.

2) Gandhi-A Spiritual Journey.

3) The man of the moment-Narendra Modi.
(ನರೇಂದ್ರ ಮೋದಿ ಬಗ್ಗೆ ಮೊದಲ ಪುಸ್ತಕ ಬರೆದವರು ಕಾಮತ್ ಸರ್)

ಭಾರತ ಸರಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ನನ್ನ ಸಂದರ್ಶನಗಳಲ್ಲಿ ಅವರು ಹೇಳಿರುವ ಒಂದೆರಡು ವಿಚಾರ ಮಾತ್ರ ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ.

‘ಪತ್ರಿಕೆಗಳು ಕೇವಲ ಸತ್ಯವನ್ನು ಮಾತ್ರ ಹೇಳಬೇಕು, ಅರ್ಧ ಸತ್ಯವನ್ನು ಅಲ್ಲ. ನಾವು ಪತ್ರಕರ್ತರು ಅಪ್ರಿಯ ಸತ್ಯವನ್ನು ಹೇಳಲು ಹೆದರಬಾರದು. ಮತ್ತೆ ನಾವು ತೀರ್ಪು ಕೊಡಲು ಹೊರಡಬಾರದು. ಎಲ್ಲವನ್ನೂ ಓದುಗರ ವಿವೇಚನೆಗೆ ಬಿಟ್ಟು ಬಿಡಬೇಕು.’
ಕಾಮತರು 2014ರ ಅಕ್ಟೋಬರ್ 9ರಂದು ನಿಧನರಾದಾಗ ನಾನು ಮಾಡಿದ ಅವರ ಸಂದರ್ಶನವು ಮತ್ತೆ ಅದೇ ಟಿವಿಯಲ್ಲಿ ಪ್ರಸಾರ ಆಯಿತು. ಅಂದ ಹಾಗೆ ಮೊನ್ನೆ ಸೆಪ್ಟೆಂಬರ್ 7 ಕಾಮತ್ ಸರ್ ಅವರ ಹುಟ್ಟಿದ ಹಬ್ಬ. ಬದುಕಿದ್ದರೆ ಅವರಿಗೆ ಮೊನ್ನೆ ನೂರಾ ಎರಡು ವರ್ಷಗಳು ತುಂಬಿರುತ್ತಿದ್ದವು.
ಎಂ ವಿ ಕಾಮತರು ಭಾರತೀಯ ಪತ್ರಿಕಾರಂಗದ ಭೀಷ್ಮ ಎನ್ನುವ ಮಾತಿನಲ್ಲಿ ಒಂದಿನಿತೂ ಉತ್ಪ್ರೇಕ್ಷೆ ಇಲ್ಲ.









































































































































































error: Content is protected !!
Scroll to Top