ಅಭಿವೃದ್ಧಿಯೊಂದಿಗೆ ರಾಜಕಾರಣ ಬೆಸೆಯಬೇಡಿ

ಉದಯ ಕುಮಾರ್‌ ಶೆಟ್ಟಿ ಅಪಹಾಸ್ಯ ಗುಂಪಿನ ನೇತಾರ – ಸುನಿಲ್‌ ಕುಮಾರ್‌

ಕಾರ್ಕಳ : ಕಾರ್ಕಳದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು ಗುಣಮಟ್ಟದಿಂದ ಕೂಡಿರಬೇಕು ಎಂಬುದು ನಮ್ಮೆಲ್ಲರ ಆಶಯ. ಈ ನಿಟ್ಟಿನಲ್ಲಿ ಅಭಿವೃದ್ಧಿಯ ಕಾರ್ಯಗಳ ಗುಣಮಟ್ಟ ಪರಿಶೀಲನೆ ಸ್ವಾಗತಾರ್ಹ. ಆದರೆ ಅಭಿವೃದ್ಧಿಯೊಂದಿಗೆ ರಾಜಕಾರಣವನ್ನು ಬೆಸೆಯಬಾರದು ಎಂದು ಕಾರ್ಕಳ ಶಾಸಕ, ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.
ಅವರು ಸೆ. 9 ರಂದು ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಬೈಲೂರಿನಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಮ್‌ ಪಾರ್ಕ್‌ನ ಗುಣಮಟ್ಟದ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ರಾಜಕೀಯ ಬಣ್ಣವನ್ನು ಕೊಡುವಂತಹ ಪ್ರಯತ್ನವನ್ನು ಕಾಂಗ್ರೆಸ್‌ ನಿನ್ನೆಯ ತನಕ ಪರೋಕ್ಷವಾಗಿ ಮಾಡುತ್ತಿದ್ದು, ಇಂದು ಬಹಿರಂಗ ಪಡಿಸಿದ್ದಾರೆ ಎಂದು ಹೇಳಿದರು.

ಇಲಾಖೆಯ ಜವಾಬ್ದಾರಿ
ಅಭಿವೃದ್ಧಿ ಕಾರ್ಯಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವಂತಹದ್ದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿ. ಪರಶುರಾಮ ಥೀಮ್‌ ಪಾರ್ಕ್‌ನ ಗುಣಮಟ್ಟದಲ್ಲಿ ವ್ಯತ್ಯಾಸವಾಗಿದ್ದಲ್ಲಿ ಯಾವುದೇ ರೀತಿಯ ತನಿಖೆಯನ್ನು ಜಿಲ್ಲಾಡಳಿತ ನಡೆಸಲಿ. ಅದಕ್ಕೆ ನನ್ನ ಬೆಂಬಲವೂ ಇದೆ. ಯೋಜನೆಯ ಮೂಲ ಅಂದಾಜು ಪಟ್ಟಿಗೆ ತಕ್ಕಂತೆ ಕಾಮಗಾರಿಗಳು ನಡೆದಿದಿಯೇ ಎಂಬುದನ್ನು ಪರಿಶೀಲನೆ ನಡೆಸಿಯೇ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಿ ಎಂದರು.

ಸ್ಪಷ್ಟಪಡಿಸಲಾಗಿತ್ತು
ಉದ್ಘಾಟನೆಯ ಸಂದರ್ಭದಲ್ಲೇ ಥೀಮ್‌ ಪಾರ್ಕ್‌ನ ಕಾಮಗಾರಿಗಳು ಸಂಪೂರ್ಣವಾಗಿಲ್ಲ ಎಂಬುದನ್ನು ಸ್ಪಷ್ಟ ಪಡಿಸಲಾಗಿತ್ತು. ಪರಶುರಾಮನ ಮೂರ್ತಿಯನ್ನು ಬಲಪಡಿಸಲು ಕೆಲವು ಸಮಯ ಬೇಕಾಗಿದ್ದು, ಈ ಕೆಲಸವನ್ನು ಮಾರ್ಚ್‌ ತಿಂಗಳಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಅದರಂತೆ ಕಾಮಗಾರಿಗಳು ಪ್ರಾರಂಭವಾಗಿದೆ ಎಂದರು.

ಅಪಹಾಸ್ಯ ತಂಡದ ನಾಯಕ
ಕಳೆದ 6 ತಿಂಗಳುಗಳಿಂದ ಅಭಿವೃದ್ಧಿ ಚಟುವಟಿಕೆಗಳನ್ನು ಅಪಹಾಸ್ಯ ಮಾಡುವಂತಹ ಒಂದು ಗುಂಪು ಕಾರ್ಕಳದಲ್ಲಿ ಹುಟ್ಟಿಕೊಂಡಿದೆ. ಅದರ ನೇತೃತ್ವವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದಯ್‌ ಕುಮಾರ್‌ ಶೆಟ್ಟಿ ವಹಿಸಿಕೊಂಡಿದ್ದಾರೆ. ಅವರು ಅಭಿವೃದ್ಧಿ ವಿಚಾರವನ್ನು ಸಹಿಸದ ವಿಘ್ನ ಸಂತೋಷಿ ಎಂದು ಸುನಿಲ್‌ ಕುಮಾರ್‌ ಆರೋಪಿಸಿದರು.

ಪ್ರವೃತ್ತಿ
ಕೆಲವರಿಗೆ ಅಭಿವೃದ್ಧಿಯನ್ನು ಹೀಯಾಳಿಸುವುದೇ ಒಂದು ಪ್ರವೃತ್ತಿಯಾಗಿದೆ. ಎಣ್ಣೆಹೊಳೆ ಡ್ಯಾಂ, ಯುಜಿಡಿ, ಬಿಳಿ ಬೆಂಡೆ ಬ್ರಾಂಡ್‌, ಮಾರಿಗುಡಿ ದೇವಸ್ಥಾನ ಅಭಿವೃದ್ಧಿಯ ಕಾರ್ಯ, ಕಾರ್ಕಳ ಉತ್ಸವ, ಕೈಗಾರಿಕೋದ್ಯಮದ ಬಗ್ಗೆ ಹೀಗೆ ಕಾರ್ಕಳದ ಅಭಿವೃದ್ಧಿ ಚಟುವಟಿಕೆಗಳನ್ನು ಅವರು ಹೀಯಾಳಿಸುತ್ತಲೇ ಬಂದಿದ್ದಾರೆ ಎಂದರು.

ಕಾಂಗ್ರೆಸಿನ ಮಾನಸಿಕತೆ
ಕಾಂಗ್ರೆಸಿಗರು ಇಂದಿರಾ ಗಾಂಧಿ ಮತ್ತವರ ಕುಟುಂಬ ಮಾಡಿದ ಕೆಲಸ ಕಾರ್ಯಗಳನ್ನು ಒಪ್ಪಿಕೊಳ್ಳುತ್ತಾರೆ. ಇದು ಅವರ ಮಾನಸಿಕತೆಯಾಗಿದೆ. ಒಂದು ವೇಳೆ ‌ಥೀಮ್‌ ಪಾರ್ಕ್‌ನಲ್ಲಿ ಗಾಂಧೀ ಕುಟುಂಬದವರ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದರೆ ಅದನ್ನು ಕಾಂಗ್ರೆಸಿಗರು ಸಂತೋಷದಿಂದ ಒಪ್ಪಿಕೊಳ್ಳುತ್ತಿದ್ದರು ಎಂದರು.

1 ತಿಂಗಳೊಳಗೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ
ನಾನು ಜನಪ್ರತಿನಿಧಿಯಾಗಿ ಎಲ್ಲಾ ಯೋಜನೆಗಳಿಗೆ ಅನುದಾನ ತರುತ್ತೇನೆ. ಬಳಿಕ ಅಂದಾಜು ಪಟ್ಟಿಯನ್ನು ತಯಾರಿಸುವುದು ಮತ್ತು ಅದರ ಗುಣಮಟ್ಟ ಕಾಪಾಡಿಕೊಳ್ಳುವುದು ಇಲಾಖೆಯ ಕರ್ತವ್ಯ. ಗುಣಮಟ್ಟದಲ್ಲಿ ವ್ಯತ್ಯಾಸವಾಗಿದ್ದಲ್ಲಿ ಅದರ ಕಾರಣೀಕರ್ತರ ಮೇಲೆ ಕ್ರಮ ಕೈಗೊಳ್ಳಲಿ. ಆದರೆ ಕಾಮಗಾರಿಯನ್ನು ನಿಲ್ಲಿಸಬೇಕೆನ್ನುವ ವಾದವನ್ನು ಒಪ್ಪುವುದಿಲ್ಲ. ಮುಂದಿನ ಒಂದು ತಿಂಗಳೊಳಗೆ ಪರಶುರಾಮ ಥೀಮ್‌ ಪಾರ್ಕ್ ಸಾರ್ವಜನಿಕ ಪ್ರವೇಶಕ್ಕೆ ಸಿದ್ದಗೊಳ್ಳಬೇಕು. ತನ್ಮೂಲಕ ಕಾರ್ಕಳದ ಪರಿಸರದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಬೇಕು ಎಂದರು.

ಅನುದಾನಕ್ಕೆ ತಡೆ
ನಮ್ಮ ಸರಕಾರದ ಅವಧಿಯಲ್ಲಿ ಬಿಡುಗಡೆಯಾಗದ ಹಣಕ್ಕೆ ತಡೆಯೊಡ್ಡಿದ್ದಾರೆ. ಪ್ರವಾಸೋದ್ಯಮ ಮತ್ತು ಮಲೆನಾಡು ಅಭಿವೃದ್ಧಿಯಡಿಯಲ್ಲಿ ಮಂಜೂರಾಗಬೇಕಿದ್ದ ಹಣವನ್ನು ಕೊನೆಯ ಹಂತದಲ್ಲಿ ಬಿಡುಗಡೆಯಾಗದಂತೆ ಮಾಡಿದ್ದಾರೆ. ಇವೆಲ್ಲದರ ಹಿಂದಿನ ಅವರ ಉದ್ದೇಶ ಅಭಿವೃದ್ಧಿಯನ್ನು ವಿರೋಧಿಸುವುದು ಎಂದು ವಿಷಾದ ವ್ಯಕ್ತಪಡಿಸಿದರು.

ಚರ್ಚೆಯಾಗಲಿ
ಒಂದು ವೇಳೆ ರಾಜಕಾರಣವನ್ನೇ ಮಾಡಬೇಕೆಂದಿದ್ದರೆ, ಬಿಜೆಪಿ ತಯಾರಿದೆ. ಆದರೆ, ಅಭಿವೃದ್ದಿಯ ವಿಚಾರಕ್ಕೆ ರಾಜಕಾರಣವನ್ನು ಬೆಸೆಯಬಾರದು ಎಂದ ಅವರು ಕಾಡುಹೊಳೆಯಿಂದ ಅಂಡಾರಿನವರೆಗೆ ರಸ್ತೆ ಹೇಗಿತ್ತು, ಯಾರು ಅದರ ಕಾಂಟ್ರಾಕ್ಟ್‌ ಮಾಡಿದ್ದು ? ಎಷ್ಟು ದಿನದಲ್ಲಿ ಅದರ ಕಾಂಕ್ರೀಟ್‌ ಕಿತ್ತು ಹೋಗಿತ್ತು ಎನ್ನುವಂತಹದ್ದು ಸಹ ಚರ್ಚೆಯಾಗಲಿ ಎಂದರು.

ಗುತ್ತಿಗೆದಾರ ನಾನಲ್ಲ
ಥೀಮ್‌ ಪಾರ್ಕ್‌ನ ಗುತ್ತಿಗೆದಾರ ನಾನಲ್ಲ. ಥೀಮ್‌ ಪಾರ್ಕ್‌ ಸುನಿಲ್‌ ಕುಮಾರ್‌ ಆಸ್ತಿಯೂ ಅಲ್ಲ, ಬಿಜೆಪಿಯ ಆಸ್ತಿಯೂ ಅಲ್ಲ. ಬದಲಾಗಿ, ಸಾರ್ವಜನಿಕರ ಆಸ್ತಿ. ಇದನ್ನು ಮತ್ತಷ್ಟು ಉತ್ತಮಗೊಳಿಸುವುದು ಎಲ್ಲಾ ನಾಗರಿಕರ ಕರ್ತವ್ಯ. ಸರಕಾರ ಮುಂದಿನ ಒಂದು ತಿಂಗಳಲ್ಲಿ ಥೀಮ್‌ ಪಾರ್ಕ್‌ಗೆ ಅನುದಾನ ಬಿಡುಗಡೆಗೊಳಿಸದಿದ್ದರೆ, ಇದನ್ನು ಏನು ಮಾಡಬೇಕೆಂದು ನಾಗರಿಕರ ಚರ್ಚೆಗೆ ಬಿಡುತ್ತೇವೆ ಎಂದರು.































































































































































error: Content is protected !!
Scroll to Top