ಕರ್ನಾಟಕ ರಾಜ್ಯದಲ್ಲಿ ಜಾನುವಾರುಗಳ ಹತ್ಯೆಯನ್ನು ನಿಯಂತ್ರಿಸುವ, ಪ್ರತಿಬಂಧಿಸುವ ಹಾಗೂ ಜಾನುವಾರುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರವು 2020 ರಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ -2020 ಎಂಬ ಕಾನೂನನ್ನು ಜ್ಯಾರಿಗೆ ತಂದಿದ್ದು ಅದೀಗ ಊರ್ಜಿತದಲ್ಲಿರುತ್ತದೆ.
ಈ ಕಾನೂನಿನ ಪ್ರಕಾರ ಯಾವುದೇ ಜಾನುವಾರುಗಳ ಹತ್ಯೆ ಅಂದರೆ ವಿವಿಧ ವಿಧಾನಗಳಿಂದ ಕೊಲ್ಲುವುದು, ಮತ್ತು ದೈಹಿಕ ಹಾನಿ ಅಥವಾ ಗಾಯಗೊಳಿಸುವ ಮುಖಾಂತರ ಜಾನುವಾರುಗಳ ಸಾವಿಗೆ ಕಾರಣ ಉಂಟು ಮಾಡುವುದು ಅಥವಾ ಈ ರೀತಿಯ ಕೃತ್ಯವನ್ನು ನಡೆಸಲು ಪ್ರಚೋದಿಸುವುದು ಕಾನೂನು ಬಾಹಿರ ಕೃತ್ಯವಾಗಿರುತ್ತದೆ.
ಈ ಕುರಿತಾದ ಅಪರಾಧವು ಸಾಬೀತಾದಲ್ಲಿ ಸಂಬಂಧಪಟ್ಟ ಆರೋಪಿಯು ಮೂರು ವರ್ಷಗಳಿಂದ ಏಳು ವರ್ಷಗಳ ಅವಧಿಯ ತನಕದ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿಗಳವರೆಗಿನ ದಂಡನೆಗೆ ಅಥವಾ ಇವೆರಡರಿಂದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಈ ಕಾನೂನಿನ ವಿವರಣೆ ಪ್ರಕಾರ ಜಾನುವಾರುಗಳೆಂದರೆ ಎಲ್ಲಾ ವಯಸ್ಸಿನ ದನ, ಕರು, ಗೂಳಿ, ಎತ್ತು ಮತ್ತು ಹದಿಮೂರು ವರ್ಷಗಳ ಒಳಗಿನ ಎಮ್ಮೆ ಅಥವಾ ಕೋಣ ಒಳಪಡುವುದು.
ಶಿಕ್ಷಾರ್ಹ ಅಪರಾಧ
ಈ ಪ್ರಕಾರ ಯಾವುದೇ ಜಾನುವಾರುಗಳನ್ನು ಧಾರ್ಮಿಕ ಪದ್ಧತಿ ಅಥವಾ ಆಚರಣೆಗೆ ಅಥವಾ ಬಳಕೆಗೆ ಹತ್ಯೆ ಮಾಡುವಂತಿಲ್ಲ. ಈ ಅಧಿನಿಯಮದ ಪ್ರಕಾರ ಯಾವುದೇ ವ್ಯಕ್ತಿಯು ಯಾವುದೇ ಜಾನುವಾರನ್ನು ಕರ್ನಾಟಕ ರಾಜ್ಯದೊಳಗಿನ ಯಾವುದೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮತ್ತು ಕರ್ನಾಟಕ ರಾಜ್ಯದ ಯಾವುದೇ ಒಂದು ಪ್ರದೇಶದಿಂದ ರಾಜ್ಯದ ಹೊರಗಡೆಯ ಪ್ರದೇಶಕ್ಕೆ ಹತ್ಯೆಗಾಗಿ ಸಾಗಾಣಿಕೆ ಮಾಡುವುದಾಗಲೀ ಅಥವಾ ಸಾಗಾಣಿಕೆಗಾಗಿ ಮಾರಾಟ ಮಾಡುವುದಾಗಲೀ ಅಥವಾ ಸಾಗಾಣಿಕೆಗೆ ಸಹಕರಿಸುವುದಾಗಲೀ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದರೆ, ಮೇಲ್ಕಾಣಿಸಿದ ಅಧಿನಿಯಮದ ಪ್ರಕಾರ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಜಾನುವಾರುಗಳನ್ನು ಕೃಷಿ ಅಥವಾ ಪಶುಸಂಗೋಪನೆ ಉದ್ದೇಶಕ್ಕಾಗಿ ಸಾಗಾಣಿಕೆಗೆ ಅವಕಾಶವಿರುತ್ತದೆ.
ಹತ್ಯೆಗಾಗಿ ಮಾರಾಟವೂ ಅಪರಾಧ
ಯಾವುದೇ ವ್ಯಕ್ತಿಯು ತಾನು ಖರೀದಿಸುವ ಅಥವಾ ಮಾರಾಟ ಮಾಡುವ ಜಾನುವಾರು ಅದರ ಹತ್ಯೆ ಮಾಡುವ ಉದ್ದೇಶಕ್ಕಾಗಿ ಎಂದು ಗೊತ್ತಿದ್ದು ಸಹ ಅಂತಹ ಜಾನುವಾರುಗಳನ್ನು ಖರೀದಿಸಿದ್ದಲ್ಲಿ ಅಥವಾ ಮಾರಾಟ ಮಾಡುವುದು ಕೂಡ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ಮೇಲ್ಕಾಣಿಸಿದ ಅಪರಾಧಗಳಿಗೆ ಸಂಬಂಧಪಟ್ಟ ಜಾನುವಾರು ಅಥವಾ ಆಯುಧ, ವಾಹನ, ಆವರಣ ಮತ್ತಿತ್ತರ ಸಾಮಗ್ರಿಗಳನ್ನು ಜಫ್ತಿ ಮಾಡುವ ಅಧಿಕಾರವನ್ನು ಈ ಮೇಲ್ಕಾಣಿಸಿದ ಅಧಿನಿಯಮದ ಪ್ರಕಾರ ಸರಕಾರದಿಂದ ನೇಮಿಸಲ್ಪಟ್ಟ ಸಕ್ಷಮ ಪ್ರಾಧಿಕಾರದ ಅಥವಾ ಪೊಲೀಸ್ ಅಧಿಕಾರಿ ಹೊಂದಿರುತ್ತಾರೆ. ಸರ್ಕಾರವು ಈ ಅಧಿನಿಯಮದ ಅಡಿಯಲ್ಲಿ ವಿವಾದಗಳ ತ್ವರಿತ ವಿಲೆವಾರಿಯ ಉದ್ದೇಶಕ್ಕಾಗಿ, ಅಧಿಸೂಚನೆಯ ಮೂಲಕ ಒಂದು ಅಥವಾ ಹೆಚ್ಚು ಜಿಲ್ಲೆಗಳಿಗಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬಹುದಾಗಿದೆ. ಮೇಲ್ಕಾಣಿಸಿದ ಅಪರಾಧವು ಸಾಬೀತಾದ ಸಂದರ್ಭಗಳಲ್ಲಿ ತನಿಖಾಧಿಕಾರಿಯು ಅಪರಾಧಿಯಿಂದ ವಶಪಡಿಸಿಕೊಂಡ ಜಾನುವಾರು, ವಾಹನ, ಆವರಣಗಳು ಮತ್ತು ಇತರ ಸ್ವತ್ತುಗಳನ್ನು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಮುಟ್ಟುಗೋಲು ಮಾಡುವ ಕುರಿತು ಸೂಕ್ತ ಆದೇಶವನ್ನು ಜ್ಯಾರಿಗೊಳಿಸಬಹುದಾಗಿದೆ.



















































