ಹೆಬ್ರಿ : ಸ್ವಾತಂತ್ರ್ಯ ದೊರೆತು 76 ವರ್ಷ ಕಳೆದರೂ ಕತ್ತಲಲ್ಲಿದ್ದ ಮನೆಗಳು

ಕೊನೆಗೂ ಟರ್ಬೋ ಹೈಡ್ರೋ ಎಲೆಕ್ಟ್ರಿಕ್ ಯಂತ್ರದ ಮೂಲಕ ಬೆಳಕು

ಹೆಬ್ರಿ : ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ದುರ್ಗಮ ಪ್ರದೇಶವಾದ ಪತಬೈಲು ಎಂಬ ಪ್ರದೇಶದ ಜನ ಸ್ವಾತಂತ್ರ್ಯ ಸಿಕ್ಕಿ 76 ವರ್ಷ ಕಳೆದಿದ್ದರೂ ವಿದ್ಯುತ್‌ ಸಂಪರ್ಕವಿಲ್ಲದೆ ಕಗ್ಗತ್ತಲಲ್ಲಿದ್ದರು. ವಿದ್ಯುತ್‌ ಇಲ್ಲದ ಕಾರಣ ಮೊಬೈಲ್‌ನಂಥ ಆಧುನಿಕ ಸಂಪರ್ಕ ಸಾಧನಗಳ ಬಳಕೆ ಕೂಡ ಈ ಭಾಗದ ಜನರಿಗೆ ಬಹಳ ತ್ರಾಸದಾಯಕವಾಗಿತ್ತು.
ನಾಡ್ಪಾಲು ಗ್ರಾಮ ಪಂಚಾಯತ್‌ ಎರಡು ವರ್ಷಗಳ ಸತತ ಪ್ರಯತ್ನ ಫಲವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಇಲ್ಲಿನ 3 ಮನೆಗಳು ವಿದ್ಯುತ್ ಸಂಪರ್ಕ ಪಡೆಯುವಂತಾಗಿದೆ.

ಎರಡನೇ ಅತಿ ದೊಡ್ಡ ಗ್ರಾಮ

ಆಗುಂಬೆ ತಪ್ಪಲಿನಲ್ಲಿರುವ ನಾಡ್ಪಾಲು ಗ್ರಾಮ ಭೌಗೋಳಿಕವಾಗಿ ವಿಸ್ತಾರವಾಗಿರುವ ಪಂಚಾಯತ್. ಇದು ರಾಜ್ಯದಲ್ಲೇ ಎರಡನೇ ಅತಿ ದೊಡ್ಡ ಗ್ರಾಮವೆಂದು (ಒಟ್ಟು ವಿಸ್ತೀರ್ಣ 34,079 ಎಕ್ರೆ) ಗುರುತಿಸಿಕೊಂಡಿದೆ.‌ ಇಲ್ಲಿನ ತಿಂಗಳಮಕ್ಕಿ-ಪತಬೈಲು ತೀರಾ ದುರ್ಗಮ ಪ್ರದೇಶವಾಗಿದ್ದು ಈ ಭಾಗಕ್ಕೆ ಗ್ರಾಮ ಪಂಚಾಯತ್ ಕೇಂದ್ರ ಸ್ಥಾನದಿಂದ ನೇರ ಸಂಪರ್ಕವಿಲ್ಲ. ಇಲ್ಲಿಗೆ ತಲುಪಲು ಹೆಬ್ರಿ ಮತ್ತು ಮುದ್ರಾಡಿ ಗ್ರಾಮ ಪಂಚಾಯತ್‌ಗಳನ್ನ ಹಾದುಹೋಗಬೇಕಾಗಿದೆ. ಹಿಂದೆ ಕೂಡ್ಲು ಪ್ರದೇಶದಿಂದ ಕಾಲುದಾರಿ ಮೂಲಕ ಈ ಪರಿಸರಕ್ಕೆ ಸಂಪರ್ಕವಿತ್ತಾದರೂ ಪ್ರಸ್ತು ಅದೂ ಇಲ್ಲದಾಗಿದೆ. ಪತಬೈಲು ಪ್ರದೇಶ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿದ್ದು ದೂರ ಹಾಗೂ ದುರ್ಗಮ ಹಾದಿಯ ಕಾರಣ ಇದುವರೆಗೂ ವಿದ್ಯುತ್ ಸಂಪರ್ಕ ಒದಗಿಸಲು ಇಲಾಖೆಗೆ ಸಾಧ್ಯವಾಗಿರಲಿಲ್ಲ.

ಟರ್ಬೋ ಹೈಡ್ರೋ ಎಲೆಕ್ಟ್ರಿಕ್ ಯಂತ್ರದ ಮೂಲಕ ವಿದ್ಯುತ್ ಉತ್ಪಾದನೆ
ಪತಬೈಲು ಪ್ರದೇಶದ ನಾಗರಿಕರ ಸಂಕಷ್ಟವನ್ನು ಅರಿತ ನಾಡ್ಪಾಲು ಗ್ರಾಮ ಪಂಚಾಯತ್ ಇಲ್ಲಿಗೆ ವಿದ್ಯುತ್ ಸಂಪರ್ಕ ಒದಗಿಸುವ ಬಗ್ಗೆ ಸತತ 2 ವರ್ಷಗಳಿಂದ ಪ್ರಯತ್ನಿಸಿದ್ದು, ಮೆಸ್ಕಾಂ ಮುಖಾಂತರ ವಿದ್ಯುತ್ ಸಂಪರ್ಕ ಪಡೆಯುವುದು ಕಷ್ಟಸಾಧ್ಯವಾದ ಕಾರಣ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಿ ಒದಗಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿತ್ತು.

ಹರಿದು ಬರುವ ನೀರೆ ವಿದ್ಯುತ್‌ ಉತ್ಪಾದನೆಗೆ ಇಂಧನ
ಬೆಟ್ಟಗುಡ್ಡ ಪ್ರದೇಶವಾಗಿರುವ ಪತಬೈಲಿನಲ್ಲಿ ಬೆಟ್ಟದಿಂದ ನೀರು ಸರಾಗ ಹರಿದುಬರುತ್ತಿದೆ. ಈ ನೀರಿನ ಹರಿವನ್ನು ಬಳಸಿಕೊಂಡು ಟರ್ಬೈನ್ ಯಂತ್ರಕ್ಕೆ ಹಾಯಿಸಿ ಟರ್ಬೋ ಯಂತ್ರದಿಂದ ವಿದ್ಯುತ್ ಉತ್ಪಾದಿಸುವ ಬಗ್ಗೆ ಯೋಜನೆ ರೂಪಿಸಿ, ಈ ಬಗ್ಗೆ ಅನುದಾನಕ್ಕಾಗಿ ವಿವಿಧ ಇಲಾಖೆಗಳಿಂದ ಪ್ರಯತ್ನಿಸಲಾಯಿತು. ಪ್ರಸ್ತುತ ನಾಡ್ಪಾಲು ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಯೋಜನೆ ಕೈಗೆತ್ತಿಕೊಂಡು ಟರ್ಬೋ ಹೈಡ್ರೋ ಎಲೆಕ್ಟ್ರಿಕ್ ಯಂತ್ರದ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ಪತಬೈಲು ಪ್ರದೇಶದ 3 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ.

ವಿನೂತನ ಯೋಜನೆ – ಡಿಸಿ ಶ್ಲಾಘನೆ
ಗ್ರಾಮ ಪಂಚಾಯತ್‌ ಈ ಹಿಂದೆ ಕೂಡ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸಿತ್ತು. ನೆಟ್‌ವರ್ಕ್ ಸಂಪರ್ಕವಿಲ್ಲದ ಕೂಡ್ಲು, ವಣಜಾರು, ಮೇಗದ್ದೆ ಪ್ರದೇಶಗಳ ಸುಮಾರು 65 ಮನೆಗಳಿಗೆ ಗ್ರಾಮ ಪಂಚಾಯತ್ ಮತ್ತು ಪರಿಸರ ಅಭಿವೃದ್ಧಿ ಸಮಿತಿ ಅನುದಾನದಿಂದ BSNL Fibernet ಮೂಲಕ ಉಚಿತವಾಗಿ ನೆಟ್ವರ್ಕ್ ಸಂಪರ್ಕವನ್ನು ಒದಗಿಸಿ ಪ್ರಶಂಸೆಗೆ ಪಾತ್ರವಾಗಿತ್ತು. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ work from home ನಿರ್ವಹಿಸುತ್ತಿದ್ದ ಉದ್ಯೋಗಿಗಳಿಗೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ wifi ವ್ಯವಸ್ಥೆ ಕಲ್ಪಿಸುವ ಮೂಲಕ ಪಂಚಾಯತ್‌ ಆಡಳಿತ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂದಿನ ಡಿಸಿ ಜಗದೀಶ್‌ ಅವರು ಕೂಡ ಪಂಚಾಯತ್‌ ಕಾರ್ಯವನ್ನು ಶ್ಲಾಘಿಸಿದ್ದರು.

ನಾಡ್ಪಾಲುವಿನಲ್ಲಿ ಮೂಡಿದ ಶನೀಶ್ವರನ ನೆರಳಿನಲ್ಲಿ
ನಾಡ್ಪಾಲು ಗ್ರಾಮದ ತಿಂಗಳ ರವೀಂದ್ರ ಹೆಗ್ಗಡೆ ಅವರ ಮನೆಯಲ್ಲಿ ಕಡಲಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಶಿವರಾಮ ಕಾರಂತರು “ಶನೀಶ್ವರನ ನೆರಳಿನಲ್ಲಿ” ಕಾದಂಬರಿ ಬರೆದಿದ್ದರು.

ಪತಬೈಲು ಪರಿಸರಕ್ಕೆ ವಿದ್ಯುತ್‌ ಸಂಪರ್ಕ ನೀಡಬೇಕೆಂಬ ಬಹುವರ್ಷಗಳ ಕನಸು ಇದೀಗ ನನಸಾಗಿದೆ. ಯೋಜನೆ ಸಾಕಾರಗೊಳ್ಳುವಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿ ವರ್ಗದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.
ದಿನೇಶ್ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷರು
ಗ್ರಾ.ಪಂ. ನಾಡ್ಪಾಲು

ಟರ್ಬೋ ಹೈಡ್ರೋ ಎಲೆಕ್ಟ್ರಿಕ್ ಯಂತ್ರ ಅಳವಡಿಕೆ
































































































error: Content is protected !!
Scroll to Top