ಇಂದಿನಿಂದ ರಾಯಭಾರಿಯಗಿ ಹೊಸ ಇನ್ನಿಂಗ್ಸ್ ಶುರು
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತದಾರರ ಜಾಗೃತಿ ಮತ್ತು ಮತದಾನದ ಕುರಿತು ಜನರಲ್ಲಿ ಅರಿವು ಮೂಡಿಸಲು ಭಾರತದ ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಆಗಿ ಬುಧವಾರ ಹೊಸ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. ಮೂರು ವರ್ಷಗಳ ಕಾಲ ಮತದಾರರ ಜಾಗೃತಿ ರಾಯಭಾರಿಯಾಗಿ ಇರಲು ತೆಂಡೂಲ್ಕರ್ ಅವರೊಂದಿಗೆ ಬುಧವಾರ ಒಪ್ಪಂದ ಪತ್ರಕ್ಕೆ ಸಹಿ ಹಾಕುವುದಾಗಿ ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.
ಈ ಸಹಯೋಗವು ಮುಂಬರುವ ಚುನಾವಣೆಗಳಲ್ಲಿ, ವಿಶೇಷವಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಯುವ ಜನರಲ್ಲಿ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತೆಂಡೂಲ್ಕರ್ ವರ್ಚಸ್ಸು ಮಹತ್ವದ ಪರಿಣಾಮ ಬೀರಲಿದೆ. ಈ ಪಾಲುದಾರಿಕೆಯ ಮೂಲಕ ಸಾಮಾನ್ಯ ನಾಗರಿಕರು, ಯುವಕರು ಮತ್ತು ನಗರ ಜನಸಂಖ್ಯೆಯ ನಡುವಿನ ಮತದಾನದ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ನಗರದ ಜನತೆ ಮತ್ತು ಯುವ ಜನತೆಯ ನಿರಾಸಕ್ತಿಯ ಸವಾಲುಗಳನ್ನು ಎದುರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
ತೆಂಡೂಲ್ಕರ್ ಹೊರತುಪಡಿಸಿ, ಆಯೋಗವು ಸದ್ಯ ಇಬ್ಬರು ರಾಷ್ಟ್ರೀಯ ಐಕಾನ್ಗಳನ್ನು ಹೊಂದಿದೆ. ಅವರೆಂದರೆ, ನಟ ಪಂಕಜ್ ತ್ರಿಪಾಠಿ ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ನಿರು ಕುಮಾರ್. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಕ್ರಿಕೆಟಿಗ ಎಂ.ಎಸ್. ಧೋನಿ, ನಟ ಅಮೀರ್ ಖಾನ್ ಮತ್ತು ಮೇರಿ ಕೋಮ್ ಅವರನ್ನು ರಾಷ್ಟ್ರೀಯ ಐಕಾನ್ಗಳಾಗಿ ಘೋಷಿಸಿತ್ತು.






























































