ಅಡಿಕೆ ಆಮದಿಗೆ ನಿಯಂತ್ರಣ ಅಗತ್ಯ – ಕಿಶೋರ್ ಕೊಡ್ಗಿ
ಕಾರ್ಕಳ : ಕೃಷಿಕರ ಹಿತದೃಷ್ಟಿಯಿಂದ ಅಡಿಕೆ ಆಮದಿಗೆ ಸರಕಾರ ನಿಯಂತ್ರಣ ಹೇರಬೇಕಿದೆ. ಈ ಬಗ್ಗೆ ಕ್ಯಾಂಪ್ಕೋ ಸಂಸ್ಥೆ ಸರಕಾರದ ಮೇಲೆ ಸದಾ ಒತ್ತಡ ಹೇರುವ ಕಾರ್ಯ ಮಾಡುತ್ತಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.
ಅವರು ಮಂಗಳವಾರ ಕಾರ್ಕಳ ರಾಧಾಕೃಷ್ಣ ಸಭಾಭವನದಲ್ಲಿ ನಡೆದ ಕೇಂದ್ರ ಅಡಿಕೆ ಮತ್ತು ಕೊಕ್ಕೋ ಮಾರಾಟ ಹಾಗೂ ಪರಿಷ್ಕರಣ ಸಹಕಾರಿ ನಿಯಮಿತ (ಕ್ಯಾಂಪ್ಕೋ)ದ ಕಾರ್ಕಳ ಶಾಖೆ ಸದಸ್ಯರ ಬೆಳೆಗಾರರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಲೆ ಸ್ಥಿರತೆಗೆ ಪ್ರಯತ್ನ
ಅಡಿಕೆ ಬೆಲೆಯಲ್ಲಿ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಕ್ಯಾಂಪ್ಕೋ ಪ್ರಯತ್ನ ನಿರಂತರವಾಗಿದೆ. ಅಡಿಕೆಗೆ ಎಲೆ ಚುಕ್ಕಿರೋಗ, ಹಳದಿ ರೋಗ ಬಾಧಿಸದಂತೆ ತಡೆಯುವ ನಿಟ್ಟಿನಲ್ಲಿ ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದ ಕಿಶೋರ್ ಕೊಡ್ಗಿ, ಕೃಷಿಕರು ಅಡಿಕೆಯೊಂದಿಗೆ ಮಿಶ್ರ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್. ಎಂ. ಕೃಷ್ಣ ಕುಮಾರ್ ಸಂಸ್ಥೆಯ ವಾರ್ಷಿಕ ವ್ಯವಹಾರ, ಅಡಿಕೆ ಮಾರುಕಟ್ಟೆ ಧಾರಣೆಯ ಸ್ಥಿರತೆ ಮತ್ತು ರೈತರ ಹಿತರಕ್ಷಣೆ ಬಗ್ಗೆ ಮಾತನಾಡಿದರು.
ಸಂಸ್ಥೆಯ ನಿರ್ದೇಶಕರಾದ ಕೆ. ಬಾಲಕೃಷ್ಣ ರೈ, ಸುರೇಶ್ ಕುಮಾರ್ ಶೆಟ್ಟಿ ಪಿ., ಜನರಲ್ ಮ್ಯಾನೇಜರ್ ರೇಷ್ಮಾ ಮಲ್ಯ, ಎಜಿಎಂ ಗೋವಿಂದ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ದಯಾನಂದ ಹೆಗ್ಡೆ ಸ್ವಾಗತಿಸಿ, ಸೀನಿಯರ್ ಮ್ಯಾನೇಜರ್ ಚಂದ್ರ ಎಂ. ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ವಂದಿಸಿದರು.






























































