ಕಾರ್ಕಳ ಮೈನ್‌ ಶಾಲೆ – ದಾನಿಗಳಿಂದ ಕೊಡುಗೆಗಳ ಹಸ್ತಾಂತರ

ಸಂಸ್ಕಾರವನ್ನು ಮೈಗೂಡಿಸಿಕೊಂಡಾಗ ಶಿಕ್ಷಣ ಸಾರ್ಥಕ – ಕೆ. ಕೆ. ಕಾಮತ್‌

ಕಾರ್ಕಳ : ಉತ್ತಮ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರ, ಸದ್ಗುಣಗಳನ್ನು ಮೈಗೂಡಿಸಿಕೊಂಡಾಗ ಶಿಕ್ಷಣದ ಉದ್ದೇಶ ಸಾರ್ಥಕ್ಯವಾಗುವುದು ಎಂದು ನಿವೃತ್ತ ಲೆಕ್ಕ ಪರಿಶೋಧಕ ಕೆ. ಕೆ. ಕಾಮತ್‌ ಅಭಿಪ್ರಾಯಪಟ್ಟರು.
ಅವರು ಬುಧವಾರ ಕಾರ್ಕಳ ಮೈನ್‌ ಸ್ಕೂಲ್‌ನಲ್ಲಿ ದಾನಿಗಳಿಂದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆ ಎಂಬುದು ಜ್ಞಾನ ದೇಗುಲ. ಇಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ದೇವರು ನೆಲೆಸಿರುತ್ತಾನೆ. ನಾವು ಕಲಿತಂತಹ ಶಾಲೆಯನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ಶಾಲೆಯ ಅಭಿವೃದ್ಧಿ – ಊರಿನ ಪ್ರಗತಿಯ ಸಂಕೇತ – ಇಡ್ಯ
ಇಸ್ರೋ ನಿವೃತ್ತ ವಿಜ್ಞಾನಿ ಜನಾರ್ದನ ಇಡ್ಯ ಮಾತನಾಡಿ, ಶಾಲೆಯ ಅಭಿವೃದ್ಧಿ ಆ ಊರಿನ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ವಿದ್ಯೆ ಜೀವನದ ಪ್ರಮುಖ ಆಸ್ತಿಯಾಗಿದ್ದು ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕೆಂದರು.

ರೋಟರಿ ಕ್ಲಬ್‌ ಅಧ್ಯಕ್ಷ ಜಾನ್‌ ಡಿಸಿಲ್ವ ಮಾತನಾಡಿ, ಶಿಕ್ಷಣ ಸಂಸ್ಥೆಗಳಿಗೆ ನೀಡುವ ದಾನ ದೇವರಿಗೆ ಸಲ್ಲುತ್ತದೆ. ಶಾಲೆಯ ಪ್ರಗತಿಯಲ್ಲಿ ರೋಟರಿ ಕ್ಲಬ್‌ನ ಸಹಕಾರ ಸದಾ ಇರಲಿದೆ ಎಂದರು.

ಕೊಡುಗೆಗಳ ಹಸ್ತಾಂತರ
ಜನಾರ್ಧನ ಇಡ್ಯ ಅವರ ನೇತೃತ್ವದಲ್ಲಿ ರೋಟರಿ ಕ್ಲಬ್‌ ವತಿಯಿಂದ ನಲಿ-ಕಲಿ ತರಗತಿಗೆ ಪಿಠೋಪಕರಣಗಳಾದ ಮೂರು ಮೇಜು, 20 ಕುರ್ಚಿ, ಕೆ. ಕೆ. ಕಾಮತ್‌ ಅವರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಛತ್ರಿ ಹಾಗೂ ಬಾಲಾಜಿ ಜ್ಯುವೆಲ್ಲರ್ಸ್‌ನ ಮಾಲಕ ಪ್ರಭಾಕರ್‌ ಪಾಟೀಲ್‌ ಅವರು ಕೊಡಮಾಡಿದ ಧ್ವನಿವರ್ಧಕವನ್ನು ಈ ಸಂದರ್ಭ ಶಾಲೆಗೆ ಹಸ್ತಾಂತರಿಸಲಾಯಿತು.

ರೋಟರಿ ಕ್ಲಬ್‌ನ ಮಧುಕರ್‌ ಹೆಗ್ಡೆ, ಶೈಲೇಂದ್ರ ರಾವ್‌, ಇಕ್ಬಾಲ್‌ ಅಹಮದ್, ಸುರೇಶ್ ಭಟ್‌,‌ ಬಾಲಾಜಿ ಜ್ಯುವೆಲ್ಲರ್ಸ್‌ನ ಮಾಲಕರಾದ ಪ್ರಭಾಕರ್‌ ಪಾಟೀಲ್‌ ಹಾಗೂ ಪೂರ್ಣಿಮಾ ಶಿಂಧೆ, ಎಸ್‌ಡಿಎಂಸಿ ಅಧ್ಯಕ್ಷೆ ಶೋಭಾ, ಸಾಣೂರು ಕ್ಲಸ್ಟರ್‌ ಸಿಆರ್‌ಪಿ ಜ್ಯೋತಿ, ಜಯಂತಿನಗರ ವಲಯ ಕ್ಲಸ್ಟರ್‌ ಸಿಆರ್‌ಪಿ ಪ್ರೇಮ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಶಶಿಕಲಾ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಪ್ರತಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಮಧುಶ್ರೀ ಕಾರ್ಯಕ್ರಮ ನಿರೂಪಿಸಿ, ಗ್ರೇಸ್‌ ವಜ್ರೇಶ್ವರಿ ವಂದಿಸಿದರು.



























































































































error: Content is protected !!
Scroll to Top