ಹಲವೆಡೆ ತಟ್ಟಿದ ಬಂಡಾಯದ ಬಿಸಿ – ಹೀಗೊಂದು ಸ್ಟೋರಿ
ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಕಳ- ಹೆಬ್ರಿ ಉಭಯ ತಾಲೂಕು ಸೇರಿದಂತೆ ಒಟ್ಟು 34 ಗ್ರಾಮ ಪಂಚಾಯತ್‌ನ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಆ. 16 ರಂದು ಪ್ರಾರಂಭಗೊಂಡಿದ್ದು, ಆ. 22 ರಂದು ಮುಕ್ತಾಯವಾಗಿದೆ. ಈ ಬಾರಿ ಉಭಯ ತಾಲೂಕಿನಲ್ಲಿ 29 ಪಂಚಾಯತ್ ಬಿಜೆಪಿ ಹಾಗೂ 5 ಗ್ರಾಮ ಪಂಚಾಯತ್‌ನಲ್ಲಿ ಕಾಂಗ್ರೆಸ್ ಆಡಳಿದ ಚುಕ್ಕಾಣಿ ಹಿಡಿದಿದೆ.
ಬಿಜೆಪಿಗೆ ಬಹುಮತವಿದ್ದರೂ ಕಾಂಗ್ರೆಸ್‌ಗೊಲಿದ ಪಟ್ಟ

2021ರಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಕುಚ್ಚೂರು, ಇನ್ನಾ ಹಾಗೂ ಈದು ಪಂಚಾಯತ್ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರ ಪಡೆದಿತ್ತು. ಈ ಬಾರಿ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಆಡಳಿತವಿದ್ದ ಕುಕ್ಕುಂದೂರು ಮತ್ತು ಚಾರ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ ಸೇರಿಕೊಂಡಿದೆ. ತಾಲೂಕಿನ ಅತೀ ದೊಡ್ಡ ಪಂಚಾಯತ್ ಎಂದೆನಿಸಿಕೊಂಡಿರುವ ಕುಕ್ಕುಂದೂರು ಗ್ರಾಮ ಪಂಚಾಯತ್‌ನಲ್ಲಿ 33 ಮಂದಿ ಸದಸ್ಯರಿದ್ದು, ಅವರಲ್ಲಿ 19 ಮಂದಿ ಬಿಜೆಪಿ, 14 ಮಂದಿ ಕಾಂಗ್ರೆಸ್ ಬೆಂಬಲಿತರಿದ್ದಾರೆ. ಬಹುಮತವಿದ್ದರೂ ಬಿಜೆಪಿ ಬೆಂಬಲಿತ ಕೆಲ ಸದಸ್ಯರು ಅಡ್ಡ ಮತದಾನ ಮಾಡಿರುವ ಪರಿಣಾಮ ಪಂಚಾಯತ್ ಅಧಿಕಾರ ಕಾಂಗ್ರೆಸ್ ಪಾಲಾಯಿತು. ಚಾರ ಪಂಚಾಯತ್‌ನಲ್ಲಿ 13 ಮಂದಿ ಸದಸ್ಯರಿದ್ದು, 7 ಮಂದಿ ಬಿಜೆಪಿ, 6 ಮಂದಿ ಕಾಂಗ್ರೆಸ್ ಬೆಂಬಲಿತರಿದ್ದಾರೆ. ಒಂದು ಅಡ್ಡ ಮತದಾನದ ಪರಿಣಾಮವಾಗಿ ಅಧ್ಯಕ್ಷ ಸ್ಥಾನ ಕೈ ಪಾಲಾಗುವ ಮೂಲಕ ಪಂಚಾಯತ್ ಆಡಳಿತ ಕಾಂಗ್ರೆಸ್ ತೆಕ್ಕೆಗೆ ಒಲಿದಿದೆ.
ಬಂಡಾಯ ಅಭ್ಯರ್ಥಿಗಳಿಂದ ಸ್ಪರ್ಧೆ
ಪಕ್ಷದ ನಿರ್ಧಾರದ ಹೊರತಾಗಿಯೂ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿ ಬೆಂಬಲಿತ ನಲ್ಲೂರು, ನೀರೆ ಹಾಗೂ ಕಾಂಗ್ರೆಸ್ ಬೆಂಬಲಿತ ಈದು ಪಂಚಾಯತ್‌ನಲ್ಲಿ ಬಂಡಾಯ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ. ಇರ್ವತ್ತೂರು, ಬೆಳ್ಮಣ್, ಪಳ್ಳಿ ಪಂಚಾಯತ್‌ನಲ್ಲೂ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಭುಗಿಲೆದ್ದ ಭಿನ್ನಮತ
ಹಲವು ಪಂಚಾಯತ್‌ನಲ್ಲಿ ಪಕ್ಷದ ಸದಸ್ಯರಿಗೆ ಅಧಿಕಾರದ ಆಸೆಯಿದ್ದರೂ, ಒಲ್ಲದ ಮನಸ್ಸಿನಿಂದ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಆದರೆ, ಕೆಲವೆಡೆ ನಡೆದ ಅಡ್ಡ ಮತದಾನದ ಪರಿಣಾಮ ಪಕ್ಷ ಅಧಿಕಾರ ಕಳೆದುಕೊಂಡರೆ, ಮತ್ತೆ ಕೆಲವಡೆ ಬಂಡಾಯದ ಬಿಸಿ ಸದಸ್ಯರ ನಡುವೆ ಮನಸ್ತಾಪಕ್ಕೆ ಕಾರಣವಾಗಿರುವುದು ಸತ್ಯ.
ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಮಹಿಳೆ
ನಾಡ್ಪಾಲು ಗ್ರಾಮ ಪಂಚಾಯತ್‌ಗೆ ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಒಲಿದಿದ್ದು, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ)ಗೆ ಕೆಟಗರಿಗೆ ನಿಗದಿಯಾಗಿತ್ತು. ಪಂಚಾಯತ್ ಸದಸ್ಯರ ಪೈಕಿ ಆಶಾ ಅವರು ಓರ್ವರೇ ಅನುಸೂಚಿತ ಜಾತಿಗೆ ಸೇರಿದ ಪರಿಣಾಮ ಅವರಿಗೆ ಅಧ್ಯಕ್ಷ ಪಟ್ಟ ಖಚಿತವಾಗಿತ್ತು. ಆದರೆ ಆ. 19ರಂದು ಚುನಾವಣಾ ಪ್ರಕ್ರಿಯೆ ನಡೆದಾಗ ಅವರು ನಾಮಪತ್ರ ಸಲ್ಲಿಸದೆ ಅಧ್ಯಕ್ಷ ಸ್ಥಾನ ನಿರಾಕರಿಸಿ ಚುನಾವಣಾಧಿಕಾರಿಗೆ ಪತ್ರ ಸಲ್ಲಿಸಿರುತ್ತಾರೆ.
ಹೆಬ್ರಿ ತಾಲೂಕಿನಲ್ಲಿ ಕುಚ್ಚೂರು, ನಾಡ್ಪಾಲು, ಹೆಬ್ರಿ, ಶಿವಪುರ, ವರಂಗ, ಮುದ್ರಾಡಿ, ಚಾರ, ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಮಡಾಮಕ್ಕಿ ಹಾಗೂ ಬೆಳ್ವೆ ಸೇರಿದಂತೆ ಒಟ್ಟು 9 ಗ್ರಾಮ ಪಂಚಾಯತ್‌ಗಳಿವೆ. ಇದರಲ್ಲಿ ಮಡಾಮಕ್ಕಿ, ಕುಚ್ಚೂರು, ಚಾರ (ಅಧ್ಯಕ್ಷ ಸ್ಥಾನ) ಗ್ರಾಮ ಪಂಚಾಯತ್ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ.








































