ಇತಿಹಾಸವನ್ನು ಮರೆತು ಭವಿಷ್ಯ ಕಟ್ಟಿಕೊಳ್ಳುವುದು ಅಸಾಧ್ಯ – ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ
ಹೆಬ್ರಿ : ಇತಿಹಾಸವನ್ನು ಮರೆತು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಅಸಾಧ್ಯ. ನಮ್ಮ ದೇಶದ ಸ್ವಾತಂತ್ರ್ಯತೆಗೆ ನಡೆದ ಹೋರಾಟ ಎಂದಿಗೂ ಭಾರತೀಯರ ಮನಸ್ಸಿನಲ್ಲಿ ಅಜರಾಮರ. ದೇಶ ಪ್ರೇಮ ಎಂಬುದು ಕೇವಲ ದಿನಾಚರಣೆಗೆ ಸೀಮಿತವಾಗಿರಬಾರದು. ಈ ನಿಟ್ಟಿನಲ್ಲಿ ದಿನಕರ್ ಪ್ರಭು ಅವರ ರಾಷ್ಟ್ರ ಭಕ್ತಿ ದೇಶಕ್ಕೆ ಮಾದರಿ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಆ. 13ರಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹೆಬ್ರಾಯ್ ಸಂಸ್ಥೆಯ ಅಧ್ಯಕ್ಷ ದಿನಕರ್ ಪ್ರಭು ಅವರ ನೇತೃತ್ವದಲ್ಲಿ ಒಂದು ವರ್ಷಗಳ ನಿರಂತರವಾಗಿ ಆಯೋಜಿಸಿದ ಹರ್ ದಿನ್ ಜನಗಣಮನ ರಾಷ್ಟ್ರ ಗೀತಾ ಗಾಯನ ಯಜ್ಞದ 364ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಠಾಣಾಧಿಕಾರಿ ಮಹೇಶ್ ಟಿ.ಎನ್ ಅವರು ಕಾರ್ಯಕ್ರಮದ ರೂವಾರಿ ದಿನಕರ್ ಪ್ರಭು ಅವರನ್ನು ಹೆಬ್ರಿ ಪೊಲೀಸ್ ಠಾಣೆ ವತಿಯಿಂದ ಸನ್ಮಾನಿಸಿ ಮಾತನಾಡಿ, ಗ್ರಾಮೀಣ ಪ್ರದೇಶವಾದ ಹೆಬ್ರಿಯಲ್ಲಿ ದಿನಕರ್ ಅವರು ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದರು.
ಹೆಬ್ರಾಯ್ ಸಂಸ್ಥೆಯ ಗೌರವಾಧ್ಯಕ್ಷ ಡಾ. ರಾಮಚಂದ್ರ ಐತಾಳ್, ಠಾಣಾ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು. ಹೆಬ್ರಾಯ್ ಸಂಸ್ಥಾಪಕ ಸೀತಾನದಿ ವಿಠ್ಠಲ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ದಿನಕರ್ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಟಿ. ಜಿ. ಆಚಾರ್ಯ ವಂದಿಸಿದರು.









































