ಮೈಸೂರು : 40 ಪರ್ಸೆಂಟೇಜ್ ಕಮಿಷನ್ ಬಗ್ಗೆ ತನಿಖೆಯಾಗದೆ ಹಣ ಬಿಡುಗಡೆ ಮಾಡಲು ಹೇಗೆ ಸಾಧ್ಯ. ತಪ್ಪು ಮಾಡದೆ ಇರುವವರಿಗೆ ಬಿಲ್‌ನಲ್ಲಿ ಯಾವುದೆ ಸಮಸ್ಯೆಯಾಗಲ್ಲ. ತಪ್ಪು ಮಾಡಿರುವವರಿಗೆ ಆ ಭಯ ಇರುತ್ತದೆ. ಅಲ್ಲದೆ ನಡೆದಿರುವ ಕಾಮಗಾರಿಗಳೆಲ್ಲ ಮೂರು ವರ್ಷಗಳ ಹಿಂದೆ ಆಗಿರುವುದು. ಈಗ ಬಿಲ್ಗಾಗಿ ಆತುರ ಪಟ್ಟರೆ ಹೇಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 40 ಪರ್ಸೆಂಟೇಜ್ ಕಮಿಷನ್ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಬಿಜೆಪಿ ನಾಯಕರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
40 ಪರ್ಸೆಂಟೇಜ್ ಕಮಿಷನ್ಗಾಗಿಯೇ ರಾಜ್ಯದ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ನಾವು ಅಂದು ಮಾಡಿರುವ ಆರೋಪವನ್ನು ಸಾಬೀತು ಮಾಡಬೇಕಿದೆ. ಹೀಗಾಗಿ ನಾಲ್ಕು ತಂಡಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ಕಾರಣ ನಾಲ್ಕು ತಂಡಗಳಿಂದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಕೇಂದ್ರದ ಏಕರೂಪ ನಾಗರಿಕ ಕಾಯ್ದೆ ಬಗ್ಗೆ ಮಾತನಾಡಿರುವ ಅವರು, ಈ ಬಗ್ಗೆ ನಮ್ಮ ವಿರೋಧವಿದೆ. ಕೇರಳದಲ್ಲೂ ಈಗಾಗಲೇ ಕಾಯ್ದೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ನಾವು ಕೂಡ ಏಕರೂಪ ನಾಗರಿಕ ಕಾಯ್ದೆಗೆ ವಿರೋಧಿಸಿದ್ದೇವೆ. ಇನ್ನು ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟು ಚುನಾವಣಾ ಆಯುಕ್ತರ ನೇಮಕವೊಂದು ಷಡ್ಯಂತ್ರ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಹೊರಗಿಟ್ಟಿದ್ದಾರೆ. ಬೇಕಾದವರನ್ನು ಆಯುಕ್ತರನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. ಐಪಿಸಿ ಸೇರಿದಂತೆ ಕಾನೂನು ತಿದ್ದುಪಡಿ ಮಾಡಲು ಹೊರಟಿದ್ದಾರೆ. ಐಪಿಸಿ 1861ರಲ್ಲಿ ರಚನೆಯಾದ ಕಾನೂನು. ಬದಲಾಯಿಸಿ ಏನು ಮಾಡ್ತಾರೆ ? ಎಂದು ಪ್ರಶ್ನಿಸಿದರು.



































