ಮೂಡುಬಿದಿರೆ : ಪಠ್ಯ ಚಟುವಟಿಕೆಯೊಂದಿಗೆ ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಈ ನಿಟ್ಟಿನಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆ ಕ್ರೀಡೆಗೆ ಬೆಂಬಲ ನೀಡುತ್ತಿರುವುದು ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್ ಅಭಿಪ್ರಾಯಪಟ್ಟರು.
ಅವರು ಆ. 5 ರಂದು ಮಂಗಳೂರು ಕ್ಷೇತ್ರ ಶಾಲಾ ಶಿಕ್ಷಣ ಉಪ ನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಟೇಬಲ್ ಟೆನ್ನಿಲ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಆರ್. ಪುತ್ರನ್ ಮಾತಾನಾಡಿ, ಸೋಲು ಗೆಲುವು ಸಾಮಾನ್ಯ. ಆದರೆ, ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಸುವುದು ಮುಖ್ಯ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಸೌಮ್ಯ ಹಾಗೂ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕೋಶಾಧಿಕಾರಿ ಶಿವಾನಂದ ಕಾಯ್ಕಿಣಿ ಮಾತನಾಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ ನಾವು ಮಾಡುವ ಕಾರ್ಯ ಚಟುವಟಿಕೆಗಳಲ್ಲಿ ಧನಾತ್ಮಕ ಬದಲಾವಣೆಯಾದರೆ ಜೀವನವೇ ಬದಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯವೈಖರಿಯ ಮೇಲೆ ಆತ್ಮವಿಶ್ವಾಸವಿರಬೇಕು. ಸಾಧನೆಯ ಪಥದಲ್ಲಿ ದೊರೆಯುವ ಅವಕಾಶಗಳನ್ನು ಸದಪಯೋಗ ಪಡಿಸಿಕೊಳ್ಳಿ ಎಂದು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 28 ತಂಡಗಳು ಭಾಗವಹಿಸಿದ್ದವು. ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಸ್ವಾಗತಿಸಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ ಪ್ರಾಸ್ತವಿಕ ಮಾತುಗಳಾನ್ನಾಡಿದರು. ಅಧ್ಯಾಪಕ ರೇಣುಕಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ವಂದಿಸಿದರು.
ಚೆಸ್ ಪಂದ್ಯಾಟ : ಮಧುಮಿತ ರಾಜ್ಯಮಟ್ಟಕ್ಕೆ ಆಯ್ಕೆ

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸುಳ್ಯ ತಾಲೂಕಿನಲ್ಲಿ ಜರುಗಿದ ಜಿಲ್ಲಾ ಮಟ್ಟದ 14ರ ವಯೋಮಿತಿಯ ಬಾಲಕಿಯರ ವಿಭಾಗದ ಚೆಸ್ ಪಂದ್ಯಾಟದಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಮಧುಮಿತ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಧುಮಿತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡು ಗ್ರಾಮದ ಶಿವಕುಮಾರ್ ಬಿ. ಮತ್ತು ಸವಿತ ದಂಪತಿ ಪುತ್ರಿ.
ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಳು ತಾಲೂಕಿನಿಂದ ಸ್ಪರ್ಧಾಳುಗಳು ಭಾಗವಹಿಸಿದ್ದು, ಅವರ ನಡುವೆ ಮಧುಮಿತ ಸಾಧನೆ ಮೆರೆದಿದ್ದಾರೆ. ಸಾಧಕ ವಿದ್ಯಾರ್ಥಿನಿಗೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿ ರಶ್ಮಿತಾ ಜೈನ್ ಅಭಿನಂದಿಸಿದ್ದಾರೆ.

































