ನ್ಯಾಯವಾದಿ ಮೇರಿ ಶ್ರೇಷ್ಠ ಯಾಕೆ ಬಂದಿದ್ದರು ಎಂದು ಪ್ರಶ್ನೆ
ಉಡುಪಿ : ಉಡುಪಿಯ ನೇತ್ರಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದು ವಿದ್ಯಾರ್ಥಿನಿಯರ ವೀಡಿಯೋ ಶೂಟಿಂಗ್ ಮಾಡಿದ ಪ್ರಕರಣದ ಮಾಹಿತಿ ಪಡೆಯಲು ಬಂದಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಹಾಗೂ ಬಿಜೆಪಿ ನಾಯಕಿಯೂ ಆಗಿರುವ ಖುಷ್ಬುಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ. ಶೌಚಾಲಯದಲ್ಲಿ ರಹಸ್ಯ ಕ್ಯಾಮೆರ ಇರಲಿಲ್ಲ ಎಂದು ಖುಷ್ಬು ಹೇಳಿರುವುದು ಬಿಜೆಪಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಖುಷ್ಬು ಜತೆಗೆ ಕಾಂಗ್ರೆಸ್ ನಾಯಕಿ ಹಾಗೂ ನ್ಯಾಯವಾದಿ ಮೇರಿ ಶ್ರೇಷ್ಠ ಇರುವ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.
ಪ್ರಕರಣದ ತನಿಖೆಗೆ ಬಂದಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಅವರ ಜತೆ ಕಾಂಗ್ರೆಸ್ ನಾಯಕಿ ಮೇರಿ ಶ್ರೇಷ್ಠ ಮತ್ತು ಬಿಜೆಪಿ ಶಾಸಕಿ ಭಾಗಿರಥಿ ಮುರುಳ್ಯ ಇದ್ದರು. ಈಗ ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಖುಷ್ಬು ಜತೆ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ಸಂಬಂಧಿ, ವಕೀಲೆ ಮೇರಿ ಶ್ರೇಷ್ಠ ತನಿಖೆಗೆ ಸಹಕರಿಸಿದ್ದರು. ಮೇರಿ ಶ್ರೇಷ್ಠ ತನಿಖೆ ಸಂದರ್ಭದಲ್ಲಿ ಯಾಕೆ ಉಪಸ್ಥಿತರಿದ್ದರು? ತನಿಖೆ ದಿಕ್ಕು ತಪ್ಪಿಸಿ, ಪ್ರಕರಣ ಮುಚ್ಚಿ ಹಾಕಿ, ಆರೋಪಿಗಳನ್ನು ರಕ್ಷಿಸಲು ಹೋಗಿದ್ದರೇ ಎಂದು ಇದಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದು, ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಆಹ್ವಾನದ ಮೇರೆಗೆ ಮೇರಿ ಶ್ರೇಷ್ಠ ತನಿಖೆಯಲ್ಲಿ ಪಾಲ್ಗೊಂಡಿದ್ದರು ಎಂದು ಕಾಂಗ್ರೆಸ್ ನಾಯಕಿ ಡಾ.ಸುನಿತಾ ಶೆಟ್ಟಿ ಇದಕ್ಕೆ ಪ್ರತ್ಯುತ್ತರ ನೀಡಿದ್ದಾರೆ.
ಮೇರಿ ಶ್ರೇಷ್ಠ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ. ಅವರು ಪಕ್ಷಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ತನಿಖೆ ಸಂದರ್ಭದಲ್ಲಿ ಹಾಜರಿರುವಂತೆ ನೋಟಿಸ್ ಬಂದ ಹಿನ್ನೆಲೆಯಲ್ಲಿ ಹೋಗಿದ್ದಾರೆ. ಆದರೆ ಖುಷ್ಬು ಜತೆ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಯಾಕೆ ಬಂದಿದ್ದರು? ತನಿಖೆ ಸಂದರ್ಭದಲ್ಲಿ ಯಾಕೆ ಅಲ್ಲಿದ್ದರು ಎಂದವರು ಮರು ಪ್ರಶ್ನಿಸಿದ್ದಾರೆ.
ಖುಷ್ಬು ಅವರು ತನಿಖೆಯಲ್ಲಿ ವೀಡಿಯೋ ಬಗ್ಗೆ ಯಾವುದೇೕ ಸಾಕ್ಷ್ಯ ಸಿಕ್ಕಿಲ್ಲ ಎಂದು ಹೇಳಿರುವುದು ಬಿಜೆಪಿ ನಾಯಕರಿಗೆ ಚಿಂತೆಯಾಗಿದೆ, ಅದಕ್ಕೆ ಅವರು ಈಗ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಡಾ.ಸುನಿತಾ ಹೇಳಿದ್ದಾರೆ.









































