ಮಣಿಪುರ ಹಿಂಸಾಚಾರ ವಿರೋಧಿಸಿ ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಪ್ರತಿಭಟನೆ

ಕಾರ್ಕಳ : ಮಣಿಪುರ ಹಿಂಸಾಚಾರ ಸಮಸ್ತ ಮನುಕುಲವೇ ತಲೆತಗ್ಗಿಸುವಂತಹ ಹೇಯ ಕೃತ್ಯ. ಇಡೀ ವಿಶ್ವವೇ ಭಾರತ ಕಡೆ ನೋಡಿ ಛೀಮಾರಿ ಹಾಕುತ್ತಿದೆ. ಬಿಜೆಪಿ ಸರಕಾರ ದೇಶಕ್ಕೆ ಅಂಟಿದ ಶಾಪ. 2014 ರಿಂದ ದೇಶದಲ್ಲಿ ನಡೆದ ದುರ್ಘಟನೆಗಳೇ ಇದಕ್ಕೆ ಸಾಕ್ಷಿ. ಆದರೆ, ಮಹಿಳೆಯರ ಹಿತಾಸಕ್ತಿಯನ್ನು ಹತ್ತಿಕ್ಕುವಂತಹ ಬಿಜೆಪಿ ಸರಕಾರದ ತತ್ವ ಸಿದ್ಧಾಂತಗಳಿಗೆ ಕಾಂಗ್ರೆಸ್‌ ತಿಲಾಂಜಲಿ ಹಾಕುತ್ತಾ ಬಂದಿದೆ. ಕಾಂಗ್ರೆಸ್‌ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಆಡಳಿತದಲ್ಲಿ ಮೀಸಲಾತಿಯನ್ನು ಕಲ್ಪಿಸಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಶೇಖರ್‌ ಮಡಿವಾಳ್ ಅಭಿಪ್ರಾಯಪಟ್ಟರು.

ಅವರು ಶನಿವಾರ ಕಾರ್ಕಳ ಬಸ್ ನಿಲ್ದಾಣದ ಸಮೀಪ ಕಾರ್ಕಳ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಮಣಿಪುರ ಹಿಂಸಾಚಾರ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ದೇಶ ಮುನ್ನಡೆಸಲು ಅರ್ಹರೇ ?
ಕಾಂಗ್ರೆಸ್‌ ಮಹಿಳಾ ಸಬಲೀಕರಣದ ಭರವಸೆ ನೀಡುವುದು ಮಾತ್ರವಲ್ಲದೆ ವಿವಿಧ ಯೋಜನೆಗಳ ಮೂಲಕ ಅದನ್ನು ಸಾಬೀತು ಮಾಡಿದೆ. ಪ್ರಸ್ತುತ ರಾಜ್ಯ ಸರಕಾರವು ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆಗಳ ಮೂಲಕ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಮಣಿಪುರ ಘಟನೆಯ ಕುರಿತು 78 ದಿನಗಳ ಬಳಿಕ ಒಂದು ಸಣ್ಣ ವೀಡಿಯೋದ ಮೂಲಕ ದೇಶದ ಪ್ರಧಾನಿ ಪ್ರತಿಕ್ರಿಯಿಸಿರುವುದು ಅತ್ಯಂತ ಬೇಸರದ ಸಂಗತಿ. ಚುನಾವಣೆಯ ಪ್ರಚಾರಕ್ಕಾಗಿ ಕರ್ನಾಟಕ್ಕೆ ಬಂದು ಭಾಷಣ ಮಾಡಿದವರಿಗೆ ಮಣಿಪುರಕ್ಕೆ ಭೇಟಿ ನೀಡಿ ಜನಾಂಗೀಯ ಹಿಂಸೆಯನ್ನು ತಡೆಯುವಂತೆ ಮಾಡಲು ಏನಾಗಿತ್ತು. ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿದ್ದ ಮಣಿಪುರಕ್ಕೆ ಭೇಟಿ ನೀಡಲು ಸಾಧ್ಯವಾಗದ ಮೋದಿ ಅವರು ದೇಶದ ನಾಯಕತ್ವ ಮುನ್ನೆಡಸಲು ಅರ್ಹರೇ ? ಕೇಂದ್ರದದಲ್ಲಿ ನಡೆಯುತ್ತಿರುವ ಪಾರ್ಲಿಮೆಂಟಿನಲ್ಲಿ ಘಟನೆಯ ಕುರಿತು ಮಾತನಾಡಲು ಸಾಧ್ಯವಿಲ್ಲದ ಪ್ರಧಾನಿಯವರಿಗೆ ಮತ್ತೇನು ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ದುರಂತ ಸ್ಥಿತಿ ಬಂದೊದಗಿದೆ – ಬಿಪಿನ್‌ ಚಂದ್ರಪಾಲ್‌
ದೇಶ ಸ್ವಾತಂತ್ರ್ಯ ಪಡೆದ ಸಂದರ್ಭ ಜವಾಹರ್‌ ಲಾಲ್‌ ನೆಹರು ಅವರು ಪಂಚಶೀಲ ತತ್ವಗಳ ಪ್ರತಿಪಾದನೆ ಮೂಲಕ ಜಾಗತಿಕವಾಗಿ ಭಾರತ ಮಾನ್ಯತೆ ಪಡೆಯುವಂತೆ ಮಾಡಿದ್ದರು. ಅಂದಿನಿಂದ ಮನಮೋಹನ್‌ ಸಿಂಗ್‌ ಅವರ ಆಡಳಿತದವರೆಗೂ ಭಾರತ ವಿಶ್ವಕ್ಕೆ ಆದರ್ಶಪ್ರಾಯವಾಗಿತ್ತು. ಆದರೆ, ಕಳೆದ ಎಂಟು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿರುವಂತಹ ಅಮಾನವೀಯ ಚಟುವಟಿಕೆಗಳನ್ನು ವಿದೇಶಗಳು ಬೆರಳು ಮಾಡಿ ತೋರಿಸುವಂತಹ ದುರಂತ ಸ್ಥಿತಿ ಎದುರಾಗಿರುವುದು ವಿಷಾದನೀಯ. ಇದಕ್ಕೆ ನಿದರ್ಶನ ಮಣಿಪುರದ ಘಟನೆ. ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಸಮಾಜದ ಸುಸ್ಥಿರತೆಗಾಗಿ ಸಾಮರಸ್ಯದ ಹೆಜ್ಜೆಯನ್ನು ಹಾಕೋಣ. ಈ ನೆಲೆಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ ಎಂದು ಪಕ್ಷದ ಜಿಲ್ಲಾ ವಕ್ತಾರ ಬಿಪಿನ್‌ ಚಂದ್ರಪಾಲ್‌ ಹೇಳಿದರು.

ಬಿಜೆಪಿಯ ಅವನತಿಯ ಕಾಲವಿದು – ಡಿ.ಆರ್.‌ ರಾಜು
ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಡಿ.ಆರ್.‌ ರಾಜು ಅವರು ಮಾತನಾಡಿ, ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಹೇಳಲು ಸಾಧ್ಯವಾಗದಂತಹ ದುಷ್ಕೃತ್ಯ. ಇಂತಹ ಘಟನೆಯ ವಿರುದ್ಧ ಮೋದಿ ನೇತೃತ್ವದ ಕೇಂದ್ರ ಸರಕಾರ ಸುಮ್ಮನಿರುವುದು ನಾಚಿಕೇಡಿತನ. ಮಣಿಪುರದ ಘಟನೆ ಬಿಜೆಪಿಯ ಅವನತಿಯ ಕಾಲ ಸಮೀಪಿಸುತ್ತಿದೆ ಎಂಬುದನ್ನು ತಿಳಿಸುತ್ತದೆ ಎಂದರು.

ಹೇಯ ಕೃತ್ಯ – ನೀರೆ ಕೃಷ್ಣ ಶೆಟ್ಟಿ
ಕೆಪಿಪಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಭಾರತ ನಂಬಿಕೆಗಳ ಆಧಾರದ ಮೇಲೆ ಅಸ್ತಿತ್ವ ಹೊಂದಿರುವಂತಹದ್ದು. ಹೆಣ್ಣನ್ನು ದೇವತೆ ಎಂದು ಪೂಜಿಸುವ ನೆಲ ನಮ್ಮದು. ಆದರೆ, ಮೋದಿಯವರ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಹೆಣ್ಣನ್ನು ಅತ್ಯಾಚಾರ ಮಾಡಿ ಆಕೆಯನ್ನು ನಿವಸ್ತ್ರಗೊಳಿಸಿ ಮೆರವಣಿಗೆ ಮಾಡುವಂತಹ ಹೇಯ ಕೃತ್ಯ ನಡೆದಿದೆ. ಹೆಂಡತಿ‌ ಮಕ್ಕಳಿರುತ್ತದ್ದಲ್ಲಿ ಮೋದಿ ಅವರಿಗೆ ಕುಟುಂಬದ ಕಷ್ಟ ತಿಳಿಯುತ್ತಿತ್ತು ಎಂದರು.

ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅ‍ಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಾಯಾರಿ, ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಡಿಸೋಜಾ, ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಕಾಂತಿ ಶೆಟ್ಟಿ, ಮಾಲಿನಿ ರೈ, ಪುರಸಭಾ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಕಾರ್ಯಕ್ರಮ ನಿರ್ವಹಿಸಿದರು.



















































































error: Content is protected !!
Scroll to Top