ಪ್ರಶ್ನಿಸಲು ಬಂದ ಶಿಕ್ಷಕರ ಮೇಲೆ ದಬ್ಬಾಳಿಕೆ
ಕಲಬುರಗಿ: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಎಸ್‌ಆರ್‌ಟಿಸಿ) ಬಸ್ ಚಾಲಕನೊಬ್ಬ ಗುರುವಾರ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕು ಬಸ್ ನಿಲ್ದಾಣದಲ್ಲಿ ಬುರ್ಖಾ ಧರಿಸದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಸ್‌ಗೆ ಹತ್ತಿಸಿಕೊಳ್ಳಲು ನಿರಾಕರಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲದಿನಗಳ ಹಿಂದೆ ಕರ್ತವ್ಯದಲ್ಲಿರುವಾಗ ಧಾರ್ಮಿಕ ಸಂಕೇತವಾದ ಹಸುರು ಟೋಪಿ ಧರಿಸಿದ ಬಿಎಂಟಿಸಿ ನಿರ್ವಾಹಕನನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಟೋಪಿ ತೆಗೆಸಿದ ಘಟನೆಯನ್ನು ವಿರೋಧಿಸಿದವರಿಗೆ ಈ ಚಾಲಕನ ವೀಡಿಯೊ ತೋರಿಸಿ ಸಾಧ್ಯವಾದರೆ ಇದನ್ನೂ ವಿರೋಧಿಸಿ ಎಂದಿದ್ದಾರೆ.
ಹಿಜಾಬ್ ಧರಿಸದ ವಿದ್ಯಾರ್ಥಿನಿಯರು ಸೇರಿದಂತೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಗುಂಪು ಓಕಲಿ ಗ್ರಾಮಕ್ಕೆ ಹೋಗುವ ಬಸ್ ಹತ್ತಲು ಕಾಯುತ್ತಿದ್ದರು. ಆದರೆ ಬಸ್ ಹತ್ತುವ ಮೊದಲು ವಿದ್ಯಾರ್ಥಿನಿಯರು ಬುರ್ಖಾ ಧರಿಸಬೇಕು ಎಂದು ಬಸ್ ಚಾಲಕ ಒತ್ತಾಯಿಸಿದ್ದಾನೆ. ಮತ್ತೊಂದು ವಿಡಿಯೋ ಕ್ಲಿಪ್‌ನಲ್ಲಿ, ವಿದ್ಯಾರ್ಥಿನಿಗೆ ಆಕೆಯ ಹೆಸರು ಕೇಳುತ್ತಾನೆ. ನೀನು ಮುಸ್ಲಿಂ ಆಗಿದ್ದರೆ ಬುರ್ಖಾ ಧರಿಸಬೇಕು, ಆಗ ಮಾತ್ರ ಬಸ್ ಹತ್ತಲು ಅವಕಾಶ ನೀಡುತ್ತೇನೆ ಎಂದು ಚಾಲಕ ಹೇಳಿದ್ದಾನೆ.
ನಾನು ಮನೆಗೆ ಹೋಗಬೇಕು ಎಂದರೂ ಬಸ್ ಚಾಲಕ ಮಾತು ಕೇಳಲಿಲ್ಲ. ಚಾಲಕನ ವರ್ತನೆಯಿಂದ ಬೇಸರಗೊಂಡ ವಿದ್ಯಾರ್ಥಿಗಳು ಬೇರೆ ಬಸ್ ಹತ್ತಲು ನಿರ್ಧರಿಸಿದ್ದಾರೆ. ಬಳಿಕ 14 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿನಿಯರು ತಮ್ಮ ಶಿಕ್ಷಕರಿಗೆ ಈ ಕುರಿತು ದೂರು ನೀಡಿದ್ದಾರೆ. ಬಸ್ ಚಾಲಕನ್ನು ತರಾಟೆಗೆ ತೆಗೆದುಕೊಳ್ಳಲು ಶಿಕ್ಷಕರು ಬಂದಾಗ ಚಾಲಕನೇ ಶಿಕ್ಷಕರೊಂದಿಗೆ ಕೂಗಾಡಿದ್ದಾನೆ.
ಬಸ್ ಚಾಲಕನನ್ನು ಬಸವಕಲ್ಯಾಣ ಡಿಪೋದ ಮೆಹಬೂಬ್ ಎಂದು ಗುರುತಿಸಲಾಗಿದೆ. ಈ ಕುರಿತು ತನಿಖೆ ನಡೆಸಲು ಕಮಲಾಪುರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಕಂಡಕ್ಟರ್, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮಾಹಿತಿ ಮತ್ತು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇನೆ. ಮೇಲ್ನೋಟಕ್ಕೆ ಚಾಲಕನದ್ದೇ ತಪ್ಪು. ನಾನು ಕೆಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರಿಗೆ ವರದಿ ಸಲ್ಲಿಸುತ್ತೇನೆ ಮತ್ತು ಅವರು ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಬೀದರ್ ಜಿಲ್ಲಾ ಕೆಕೆಎಸ್‌ಆರ್‌ಟಿಸಿ ವಿಭಾಗೀಯ ಭದ್ರತಾ ನಿರೀಕ್ಷಕ (ಡಿಎಸ್‌ಐ) ಎಚ್.ಕೆ. ಮಲ್ಲಿಕಾರ್ಜುನ ಹೇಳಿದ್ದಾರೆ.





































