ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ
ಬೆಂಗಳೂರು: ತಡವಾಗಿ ಬಂದರು ಎನ್ನುವ ಕಾರಣಕೊಟ್ಟು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ವಿಮಾನ ಹತ್ತಲು ಅನುಮತಿ ನಿರಾಕರಿಸಿದ ಘಟನೆ ಗುರುವಾರ ಮಧ್ಯಾಹ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ. ರಾಜ್ಯಪಾಲರನ್ನು ಬಿಟ್ಟು ಟರ್ಮಿನಲ್ 2ರಿಂದ ಹೈದರಾಬಾದ್‌ಗೆ ಏರ್‌ಏಷ್ಯಾ ಇಂಡಿಯಾ ವಿಮಾನ ಟೇಕಾಫ್ ಆಗಿದೆ ಎಂದು ಮೂಲಗಳು ತಿಳಿಸಿವೆ.
ಗವರ್ನರ್ ವಿಮಾನ ನಿಲ್ದಾಣಕ್ಕೆ ಬರುವಾಗ ತಡವಾಗಿತ್ತು ಎಂದು ವಿಮಾನಯಾನ ಸಿಬ್ಬಂದಿ ತಿಳಿಸಿದ್ದಾರೆ. ಗೆಹ್ಲೋಟ್ 90 ನಿಮಿಷಗಳ ನಂತರ ಮತ್ತೊಂದು ಏರ್ ಏಷ್ಯಾ ಇಂಡಿಯಾ ವಿಮಾನದ ಮೂಲಕ ಹೈದರಾಬಾದ್‌ಗೆ ತೆರಳಿದ್ದಾರೆ.
ಗವರ್ನರ್ ಅವರನ್ನು ನೇರವಾಗಿ ‘ಸೆರೆಮೋನಿಯಲ್ ಲಾಂಜ್’ನಿಂದ ವಿಮಾನವು ಟೇಕ್ ಆಫ್ ಆಗಲು ಸಿದ್ಧವಾಗಿರುವ ಸ್ಥಳಕ್ಕೆ ಕರೆದೊಯ್ಯುತ್ತದೆ ಮತ್ತು ನಿರ್ಗಮನಕ್ಕೆ ಅರ್ಧ ಗಂಟೆಗೂ ಮುನ್ನ ಮುಚ್ಚುವ ಸಾಮಾನ್ಯ ಬೋರ್ಡಿಂಗ್ ಗೇಟ್ ಮೂಲಕ ಅವರು ಹೋಗಬೇಕಾಗಿಲ್ಲ. ಎಲ್ಲ ಪ್ರಯಾಣಿಕರ ಬೋರ್ಡಿಂಗ್ ಪೂರ್ಣಗೊಂಡ ನಂತರ ರಾಜ್ಯಪಾಲರ ಪ್ರೋಟೋಕಾಲ್ ತಂಡ ಸಿದ್ಧವಾಗುತ್ತದೆ. ನಂತರ ರಾಜ್ಯಪಾಲರು ಆಗಮಿಸುತ್ತಾರೆ ಮತ್ತು ವಿಮಾನವನ್ನು ಹತ್ತುವ ಕೊನೆಯ ಪ್ರಯಾಣಿಕ ಆಗಿರುತ್ತಾರೆ. ಇಲ್ಲಿ ರಾಜ್ಯಪಾಲರು ತಡವಾಗಿ ಬರುವ ಪ್ರಶ್ನೆಯೇ ಇಲ್ಲಿ ಎದುರಾಗುವುದಿಲ್ಲ. ರಾಜ್ಯಪಾಲರ ವಿಚಾರದಲ್ಲಿ ವಿಮಾನ ಸಿಬ್ಬಂದಿಯಿಂದ ಲೋಪವಾಗಿದೆ ಎಂದು ಆರೋಪಿಸಲಾಗಿದೆ.
ಗವರ್ನರ್ ವಿಮಾನದ ಬಳಿ ಬಂದಾಗ ವಿಮಾನದ ಬಾಗಿಲು ಇನ್ನೂ ಮುಚ್ಚಿರಲಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ರಾಜ್ಯಪಾಲರು ವಿಮಾನವನ್ನು ಹತ್ತಲು ಅನುಮತಿ ನೀಡಬೇಕಿತ್ತು ಮತ್ತು ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.





































