ಲೋಕಸಭೆಯಲ್ಲಿ ಮಸೂದೆ ಮಂಡನೆ
ದೆಹಲಿ: ಜನನ ಮತ್ತು ಮರಣ ನೋಂದಣಿ ಕಾಯ್ದೆ 1969 ಅಸ್ತಿತ್ವಕ್ಕೆ ಬಂದ 54 ವರ್ಷಗಳ ಬಳಿಕ ಮೊದಲ ಬಾರಿಗೆ ತಿದ್ದುಪಡಿಯಾಗುವ ಸಾಧ್ಯತೆಯಿದೆ. ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಡೇಟಾಬೇಸ್ ನಿರ್ವಹಣೆಗಾಗಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶದ ಉದ್ದೇಶಕ್ಕಾಗಿ ಜನನ ಪ್ರಮಾಣ ಪತ್ರವನ್ನು ಏಕೈಕ ದಾಖಲೆಯಾಗಿ ಬಳಸಲು ಅನುವು ಮಾಡುವ ಮಸೂದೆಯನ್ನು ಸರಕಾರ ಬುಧವಾರ ಲೋಕಸಭೆಯಲ್ಲಿ ಮಂಡಿಸಿದೆ.
ಕೇಂದ್ರ ಸರಕಾರವು ಬುಧವಾರ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ್ದು, ಶಾಲಾ-ಕಾಲೇಜುಗಳಲ್ಲಿ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ವಿತರಣೆ ಮತ್ತು ಸರಕಾರಿ ಉದ್ಯೋಗಗಳಲ್ಲಿ ನೇಮಕಾತಿಗಾಗಿ ಜನನ ಪ್ರಮಾಣಪತ್ರವನ್ನು ಏಕೈಕ ದಾಖಲೆಯಾಗಿ ಬಳಸಲು ಅನುಮತಿಸುತ್ತದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಪರವಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಈ ಮಸೂದೆಯನ್ನು ಮಂಡಿಸಿದರು. ಬಳಿಕ ಮಾತನಾಡಿದ ಅವರು ಜನ್ಮ ಪ್ರಮಾಣ ಪತ್ರದ ಆಧಾರದ ಮೇರೆಗೆ ಎಲ್ಲಾ ಪ್ರಮುಖ ಸರಕಾರಿ ಕೆಲಸಗಳು ಕ್ಷಣಾರ್ಧದಲ್ಲಿ ಮಾಡಲಾಗುತ್ತದೆ ಎಂದರು. ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಈ ಮಸೂದೆಯನ್ನು ವಿರೋಧಿಸಿ, ಈ ಕ್ರಮವು ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.






























































